ಭೋಪಾಲ್: ಗಂಡ-ಹೆಂಡತಿ ಜಗಳ ಉಂಡು ಮಲಗುವತನಕ ಎಂಬ ಮಾತಿದೆ. ಆದರೆ, ಮಧ್ಯಪ್ರದೇಶದಲ್ಲಿ ಗಂಡ-ಹೆಂಡತಿ ಜಗಳ ಪಕ್ಕದ ಮನೆಯವನನ್ನು ಕೊಲ್ಲುವತನಕ ಎಂಬಂತಾಗಿದೆ. ಹೌದು, ಭೋಪಾಲ್‌ನಲ್ಲಿ ಮಟನ್ ಮಾಡುವ ವಿಷಯಕ್ಕೆ ಗಂಡ-ಹೆಂಡತಿ ಜಗಳ ಆಡಿದ್ದಾರೆ. ಈ ಜಗಳವನ್ನು ಬಿಡಿಸಲು ಪಕ್ಕದ ಮನೆಯವ ಬಂದಿದ್ದು, ಗಂಡನು ಆ ವ್ಯಕ್ತಿಯನ್ನು ಸಾಯುವ ಹಾಗೆ ಥಳಿಸಿದ್ದಾನೆ ಎಂದು ತಿಳಿದುಬಂದಿದೆ.
ಕಳೆದ ಮಂಗಳವಾರ ಪಪ್ಪು ಐರ್ವಾರ್ ಎಂಬ ವ್ಯಕ್ತಿಯು ಅಂಗಡಿಗೆ ಹೋಗಿ ಮಟನ್ ತಂದಿದ್ದಾನೆ. ಮನೆಗೆ ತಂದು ತಾನೇ ಅಡುಗೆ ಮಾಡಲು ಮುಂದಾಗಿದ್ದಾನೆ. ಆದರೆ, ಮಂಗಳವಾರ ಮನೆಯಲ್ಲಿ ಮಾಂಸದ ಅಡುಗೆ ಮಾಡಬಾರದು ಎಂದು ಪತ್ನಿಯು ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದನ್ನು ಲೆಕ್ಕಿಸದೆ ಅಡುಗೆ ಮಾಡಲು ಮುಂದಾದಾಗ ಜಗಳ ಶುರುವಾಗಿದೆ. ಇದನ್ನು ಕೇಳಿದ ಪಕ್ಕದ ಮನೆಯ ಬಿಲ್ಲು ಎಂಬಾತ ಜಗಳ ಬಿಡಿಸಲು ಮುಂದಾಗಿದ್ದಾನೆ.
ಬಿಲ್ಲು ಜಗಳ ಬಿಡಿಸಲು ಬಂದ ಕಾರಣ ಪಪ್ಪುವಿಗೆ ಭಾರಿ ಕೋಪ ಬಂದಿದೆ. ಆಗ ಪಪ್ಪು ಬಿಲ್ಲುವಿಗೆ ಥಳಿಸಿದ್ದಾನೆ. ಭಾರಿ ಪೆಟ್ಟು ನೀಡಿದ ಕಾರಣ ಬಿಲ್ಲು ಮೃತಪಟ್ಟಿದ್ದಾನೆ. ಹತ್ಯೆ ಕುರಿತು ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪಪ್ಪುವಿನ ಪತ್ನಿಯ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | ಜೋಡಿ ಕೊಲೆ | ಹಾರೆಯಿಂದ ತಲೆಗೆ ಹೊಡೆದು ಪತ್ನಿ, ಮಗನ ಹತ್ಯೆ