Site icon Vistara News

ರಾಜಸ್ಥಾನದಲ್ಲಿ ದಲಿತ ಶಿಕ್ಷಕಿ ಹತ್ಯೆ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

Dalit school teacher set on fire by her relatives In Rajasthan

ಜೈಪುರ: ರಾಜಸ್ಥಾನದಲ್ಲಿ 9 ವರ್ಷದ ದಲಿತ ಬಾಲಕನಿಗೆ ಶಾಲೆಯಲ್ಲಿ ಶಿಕ್ಷಕನೊಬ್ಬ ಥಳಿಸಿ, ಆತ ಆಸ್ಪತ್ರೆಯಲ್ಲಿ ಮೃತಪಟ್ಟ ಬೆನ್ನಲ್ಲೇ ಅಂಥದ್ದೇ ಇನ್ನೊಂದು ಘಟನೆ ವರದಿಯಾಗಿದೆ. 35 ವರ್ಷದ ದಲಿತ ಶಿಕ್ಷಕಿಗೆ, ಆಕೆಯ ಸಂಬಂಧಿಕರೇ ಬೆಂಕಿ ಹಚ್ಚಿ ಕೊಂದಿದ್ದಾರೆ (Dalit Woman Teacher Dies). ಹಣಕಾಸಿನ ಗಲಾಟೆ ನಡೆದು, ಮಹಿಳೆಗೆ ಬೆಂಕಿ ಹಚ್ಚಿದ್ದರು. ತೀವ್ರವಾಗಿ ಗಾಯಗೊಂಡ ಅವರನ್ನು ಎಸ್​ಎಂಎಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹತ್ಯೆಗೀಡಾದ ಶಿಕ್ಷಕಿಯ ಹೆಸರು ಅನಿತಾ. ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರು ಸಂಬಂಧಿಕರಿಗೆ ಸಾಲ ನೀಡಿದ್ದರು. ಅದನ್ನು ವಾಪಸ್​ ಕೊಡುವಂತೆ ಆಗಸ್ಟ್​ 10ರಂದು ಕೇಳಿದ್ದರು. ಅಷ್ಟಕ್ಕೇ ಕೋಪಗೊಂಡು ಶಿಕ್ಷಕಿಯ ಜೀವವನ್ನೇ ತೆಗೆದಿದ್ದಾರೆ ಎಂದು ಎಎಸ್​​ಪಿ ಧರ್ಮೇಂದ್ರ ಯಾದವ್​ ತಿಳಿಸಿದ್ದಾರೆ. ಬೆಂಕಿಯಲ್ಲಿ ಬೆಂದಿದ್ದ ಅನಿತಾರನ್ನು ಮೊದಲು ಜಾಮ್ರೋ ರಾಮಘಡ್​ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು, ಇಲ್ಲಿ ಆಗೋದಿಲ್ಲ ಎಂದು ಹೇಳಿದಾಗ ಜೈಪುರದ ಎಸ್​ಎಂಎಸ್​ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಶಿಕ್ಷಕಿಯ ಮನೆಯವರು ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ. ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿ, ಸರಿಯಾದ ಸಮಯಕ್ಕೆ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಡಲಿಲ್ಲ. ಹೀಗಾಗಿಯೇ ಆಕೆಯ ಜೀವ ಹೋಗಿದೆ ಎಂದಿದ್ದಾರೆ.

ಪೊಲೀಸರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಹೋಗಿದ್ದೇವೆ. ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮಹಿಳೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಅವರ ಸಂಬಂಧಿಗಳ ವಿರುದ್ಧ ಕೇಸ್​ ದಾಖಲಾಗಿದೆ. ಅದರಲ್ಲಿ ಮಹಿಳೆಯರೂ ಸೇರಿದ್ದಾರೆ. ಆದರೆ ಇದುವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ.

ಬಿಜೆಪಿ ಗಂಭೀರ ಆರೋಪ
ಮಹಿಳೆಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣ ವರದಿಯಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್​ ಪೂನಿಯಾ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇಂಥ ಕ್ರೈಮ್​​ಗಳು ದಿನನಿತ್ಯವೂ ನಡೆಯುತ್ತಿವೆ. ರಾಜ್ಯದಲ್ಲಿ ದಿನವೊಂದಕ್ಕೆ ಸಾಮಾನ್ಯವಾಗಿ 18 ಅತ್ಯಾಚಾರಗಳು, ಏಳು ಹತ್ಯೆಗಳು ನಡೆಯುತ್ತಿವೆ. ಕ್ರಿಮಿನಲ್​​ಗಳಿಗೆ ಈ ರಾಜ್ಯದಲ್ಲಿ ಭಯವೇ ಇಲ್ಲದಂತಾಗಿದೆ. ಇವರ ವಿರುದ್ಧವೆಲ್ಲ ಸಾಮಾನ್ಯ ಕಾಯ್ದೆಯಡಿ ಕೇಸ್​ ದಾಖಲಾಗುತ್ತಿದೆ ಹೊರತು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

9 ವರ್ಷದ ಹುಡುಗನ ಸಾವು !
ರಾಜಸ್ಥಾನದ ಶಾಲೆಯೊಂದರಲ್ಲಿ 9 ವರ್ಷದ ದಲಿತ ಹುಡುಗ ಇಂದ್ರ ಮೇಘ್ವಾಲ್​ ಮೇಲ್ಜಾತಿಯವರಿಗೆ ಮೀಸಲಿಟ್ಟಿದ್ದ ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕೆ ಆತನಿಗೆ ಶಿಕ್ಷಕ ಥಳಿಸಿದ್ದ ಎಂಬ ಆರೋಪ ಕೇಳಿಬಂದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಹುಡುಗನನ್ನು ಅಹ್ಮದಾಬಾದ್​ನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಈ ಕೇಸ್​ ಇನ್ನೂ ತನಿಖಾ ಹಂತದಲ್ಲಿದೆ. ಆದರೆ ಹುಡುಗನ ಸಾವಿನಿಂದ ಅಶೋಕ್ ಗೆಹ್ಲೋಟ್​ ವಿರುದ್ಧ ಕಾಂಗ್ರೆಸ್​ ನಾಯಕರೇ ತಿರುಗಿಬಿದ್ದಿದ್ದಾರೆ.

ಇದನ್ನೂ ಓದಿ: Dalit Boy Death | ರಾಜಸ್ಥಾನ ಸರ್ಕಾರದ ವಿರುದ್ಧ ಕಾಂಗ್ರೆಸಿಗರ ಬೇಸರ; ಶಾಸಕ, ಕೌನ್ಸಿಲರ್​​ಗಳ ರಾಜೀನಾಮೆ

Exit mobile version