Site icon Vistara News

Death News : ಹಾಸನದಲ್ಲಿ ಡಬಲ್‌ ಸಾವು; KSRP ಕಾನ್‌ಸ್ಟೇಬಲ್‌ ನಿಗೂಢ ಮೃತ್ಯು; ಹಾಸ್ಟೆಲ್‌ ಕ್ಲೀನಿಂಗ್‌ ಸ್ಟಾಫ್‌ ಆತ್ಮಹತ್ಯೆ

Death news from Hassan

ಹಾಸನ: ಹಾಸನ ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ ಎರಡು ನಿಗೂಢ ಸಾವುಗಳು (Double death in Hassan) ಸಂಭವಿಸಿವೆ. ಒಂದು ಕಡೆ ಕೆಎಸ್‌ಆರ್‌ಪಿ ಹೆಡ್‌ಕಾನ್ಸ್‌ಟೇಬಲ್ ಮೃತಪಟ್ಟಿದ್ದರೆ (Death News) ಇನ್ನೊಂದು ಕಡೆ ಹಾಸ್ಟೆಲ್‌ ಸ್ವಚ್ಛತಾ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಸಾವು

ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ ಕಾನ್ಸ್‌ಟೇಬಲ್‌(Head Constable death) ರಾಜೇಂದ್ರ (51) ಅವರ ಮೃತದೇಹ ಪತ್ತೆಯಾಗಿದೆ. ಪ್ರವಾಸಿ ಮಂದಿರದ ಕಟ್ಟಡದಿಂದ ಹೊರಗೆ ಬರುವ ಹಿಂಬದಿ ಮೆಟ್ಟಿಲುಗಳ ಕೆಳಗೆ ಅವರ ಶವ ಕಂಡುಬಂದಿದೆ.

ರಾತ್ರಿ ವೇಳೆ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಒಂದೋ ಬೀಳುವ ಹಂತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ಅಥವಾ ನೆಲಕ್ಕೆ ಬಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ಇದೆ.

ರಾಜೇಂದ್ರ ಅವರು ಕೆ‌ಎಸ್‌ಆರ್‌ಪಿ ಹನ್ನೊಂದನೇ ಬೆಟಾಲಿಯನ್‌ನ ಹೆಡ್‌ಕಾನ್ಸ್‌ಟೇಬಲ್ ಆಗಿದ್ದಾರೆ. ಅವರು ಹಾಸನ ನಗರದ ಎನ್.ಆರ್.ವೃತ್ತದ ಸಮೀಪ ಇರೋ ಪ್ರವಾಸಿ ಮಂದಿರದಲ್ಲಿ ಸಾವನ್ನಪ್ಪಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಹಾಸ್ಟೆಲ್‌ ಸ್ವಚ್ಛತಾ ಸಿಬ್ಬಂದಿ ಕಾಡಿನಲ್ಲಿ ಆತ್ಮಹತ್ಯೆ

ಹಾಸನದ ಹಾಸ್ಟೆಲ್‌ ಒಂದರಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ ಒಂದು ತಿಂಗಳಿನಿಂದ ಹಾಸ್ಟೆಲ್ ಶೌಚಾಲಯ ಸ್ವಚ್ಛತೆ ಮಾಡಿಕೊಂಡಿದ್ದ ನಾಗರಾಜ್ (36) ಮೃತ ವ್ಯಕ್ತಿ. ಅವರು ಎಲ್ಲಿಯವರು ಎನ್ನುವ ಬಗ್ಗೆ ಅಲ್ಲಿನ ಸಿಬ್ಬಂದಿಗೆ ಮಾಹಿತಿ ಇಲ್ಲ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಿದ್ದ ವ್ಯಕ್ತಿಯ ವಿಳಾಸವನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

ಹಾಸ್ಟೆಲ್‌ನ ಕ್ಲೀನಿಂಗ್‌ ಸ್ಟಾಫ್‌ ಆತ್ಮಹತ್ಯೆ ಮಾಡಿಕೊಂಡ ಕಾಡಿನ ಸಮೀಪದ ದಾರಿ

ನಾಗರಾಜ್‌ ಅವರು ಹಾಸನ ತಾಲ್ಲೂಕಿನ ಗುಡ್ಡೇನಹಳ್ಳಿ ಕಾಡಿನಲ್ಲಿ ರಸ್ತೆಯ ಅಂಚಿನಲ್ಲೇ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಇಲ್ಲೇ ಪಕ್ಕದಲ್ಲಿ ಒಂದು ಕೆರೆಯೂ ಇದೆ. ಭಾನುವಾರ ಸಂಜೆ ಹಾಸ್ಟೆಲ್‌ನಿಂದ ಹೊರ ಹೋಗಿದ್ದ ನಾಗರಾಜ್‌, ರಾತ್ರಿ ಕಾಡಿನ ಪ್ರದೇಶಕ್ಕೆ ಹೋಗಿ ತಾನು ಧರಿಸಿದ್ದ ಬಟ್ಟೆಗಳಿಂದಲೇ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Actor Upendra: ಜಾತಿನಿಂದನೆ ಕೇಸ್; ವಿಚಾರಣೆಗೆ ಹಾಜರಾಗದೆ ನಟ ಉಪೇಂದ್ರ ಎಸ್ಕೇಪ್‌, ಫೋನ್‌ ಸ್ವಿಚ್ಡ್‌ ಆಫ್!

ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಧಾಬಾಗೆ ಹೋದವರ ದುರ್ಮರಣ

ಧಾರವಾಡ: ಕಾರೊಂದು ರಸ್ತೆ ಡಿವೈಡರ್‌ಗೆ ಡಿಕ್ಕಿ (Car hits divider) ಹೊಡೆದು ಪಲ್ಟಿಯಾದ (Road accident) ಹಿನ್ನೆಲೆಯಲ್ಲಿ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಾಣ (Two died in Accident) ಕಳೆದುಕೊಂಡಿದ್ದಾರೆ. ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭಾನುವಾರ ತಡರಾತ್ರಿ ದುರಂತ ಸಂಭವಿಸಿದೆ.

ವಿನಯ ಹಿರೇಮಠ (28) ಹಾಗೂ ಸಂದೀಪ್ (29) ಸಾವನ್ನಪ್ಪಿದ ದುರ್ದೈವಿಗಳು. ಅವರು ತಡ ರಾತ್ರಿ ಧಾರವಾಡದಿಂದ ಹೊರಟು ತೇಗೂರು ಗ್ರಾಮದ ಬಳಿಯ ಧಾಬಾಕ್ಕೆ ಊಟಕ್ಕೆ ಹೋಗಿದ್ದರು. ಅಲ್ಲಿ ಊಟ ಮುಗಿಸಿ ವಾಪಸ್‌ ಬರುವಾಗ ಹೆದ್ದಾರಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ ಮತ್ತೊಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು ಪ್ರಕರಣ ದಾಖಲಾಗಿತ್ತು..

Exit mobile version