Site icon Vistara News

ದೆಹಲಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ; ಕಚೇರಿಗೆ ನುಗ್ಗಿ ಒಂದೇ ಸಮನೆ ಗುಂಡು ಹಾರಿಸಿದ ಇಬ್ಬರು ದುಷ್ಕರ್ಮಿಗಳು

Delhi BJP Leader Surendra Matiala Murdered

#image_title

ದೆಹಲಿಯ ಬಿಜೆಪಿ ಮುಖಂಡ ಸುರೇಂದ್ರ ಮಟಿಯಾಳ (Delhi BJP Leader Surendra Matiala) ಎಂಬುವರನ್ನು ಇಬ್ಬರು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ. ದೆಹಲಿಯ ದ್ವಾರಕಾ ಜಿಲ್ಲೆಯಲ್ಲಿ ಇರುವ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುರೇಂದ್ರ ಅವರು ಟಿವಿ ನೋಡುತ್ತ ಕುಳಿತಿದ್ದರು. ಸುಮಾರು 7.30ರ ಹೊತ್ತಿಗೆ ಇಬ್ಬರು ಅಪರಿಚಿತರು ಆಫೀಸ್​ಗೆ ನುಗ್ಗಿ ಅವರಿಗೆ ಒಂದೇ ಸಮ ಗುಂಡು ಹಾರಿಸಿದ್ದಾರೆ. ಇವರು ಹೆಲ್ಮೆಟ್ ಧರಿಸಿದ್ದರು. ಸುರೇಂದ್ರ ಅವರ ದೇಹಕ್ಕೆ 4-5 ಗುಂಡುಗಳು ನುಗ್ಗಿದ್ದವು. ಬಳಿಕ ಇಬ್ಬರೂ ಪರಾರಿಯಾಗಿದ್ದಾರೆ. ನಾವು ಸುರೇಂದ್ರ ಮಟಿಯಾಳ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು. ಆದರೆ ಅವರು ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ಮೃತ ಸುರೇಂದ್ರ ಅವರ ಸಹೋದರ ಸಂಬಂಧಿ ರಾಮ್​ ಸಿಂಗ್​ ತಿಳಿಸಿದ್ದಾರೆ.

ದ್ವಾರಕಾದಲ್ಲಿ ಸುರೇಂದ್ರ ಮಟಿಯಾಳ ಅವರು ಪ್ರಭಾವಿ ಮುಖಂಡ ಎನ್ನಿಸಿಕೊಂಡಿದ್ದರು. ರಾಜಕೀಯವಾಗಿ ಅವರ ಅಭ್ಯುದಯ ತುಂಬ ಚೆನ್ನಾಗಿತ್ತು. ಅದೇ ಏರಿಯಾದಲ್ಲಿ ಹಲವರಿಗೆ ಸುರೇಂದ್ರ ಬೆಳವಣಿಗೆಯನ್ನು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಬಹುಶ್ಯ ಅವರೇ ಈ ಕೃತ್ಯ ಎಸಗಿರಬಹುದು ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇನ್ನು ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ, ಅಲ್ಲೆಲ್ಲ ಪರಿಶೀಲನೆ ಮಾಡಿದ್ದಾರೆ. ಸಿಸಿಟಿವಿ ಫೂಟೇಜ್​ಗಳನ್ನು ವಶಪಡಿಸಿಕೊಂಡಿದ್ದಾರೆ. ‘ಮೂವರು ದುಷ್ಕರ್ಮಿಗಳು ಆಗಮಿಸಿದ್ದುರು, ಅದರಲ್ಲಿ ಒಬ್ಬಾತ ಸುರೇಂದ್ರ ಅವರ ಕಚೇರಿಯ ಹೊರಗೆ ನಿಂತಿದ್ದ, ಇನ್ನಿಬ್ಬರು ಒಳಗೆ ನುಗ್ಗಿ ಹೊಡೆದಿದ್ದಾರೆ. ಮುಖಕ್ಕೆ ಹೆಲ್ಮೆಟ್​ ಮುಚ್ಚಿದ್ದ ಕಾರಣ ಆರೋಪಿಗಳ ಗುರುತು ಸಿಕ್ಕಿಲ್ಲ. ಶೀಘ್ರವೇ ಅವರನ್ನು ಹಿಡಿಯುತ್ತೇವೆ’ ಎಂದು ದ್ವಾರಕಾದ ಡೆಪ್ಯೂಟಿ ಪೊಲೀಸ್ ಕಮಿಷನರ್​ ಹರ್ಷವರ್ಧನ್​ ತಿಳಿಸಿದ್ದಾರೆ.

ಇದನ್ನೂ ಓದಿ: Group Clash: ಗೋವಿಂದರಾಜನಗರ ಕ್ಷೇತ್ರದಲ್ಲಿ ಗುಂಪು ಘರ್ಷಣೆ; ಬಿಜೆಪಿ ಮುಖಂಡನಿಗೆ ಗಂಭೀರ ಗಾಯ

ಸುರೇಂದ್ರ ಅವರಿಗೆ ಯಾರೊಂದಿಗಾದರೂ ಮನಸ್ತಾಪ-ಗಲಾಟೆ-ವೈಷಮ್ಯ ಇತ್ತಾ ಎಂದು ಕುಟುಂಬದವರನ್ನು ಪೊಲೀಸರು ಒಂದು ಹಂತದ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಇದುವರೆಗೆ ಅವರ್ಯಾರೂ ಯಾವುದೇ ಶಂಕಿತರ ಹೆಸರನ್ನು ಹೇಳಿಲ್ಲ. ಇದು ರಾಜಕೀಯ ದ್ವೇಷದ ಕೊಲೆ ಎಂದೇ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಸುರೇಂದ್ರ ಅವರಿಗೆ ಕೆಲವರೊಂದಿಗೆ ಆಸ್ತಿಗೆ ಸಂಬಂಧಪಟ್ಟ ಸಂಘರ್ಷ ಇದ್ದ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಆ ಆಯಾಮದಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version