ನವ ದೆಹಲಿ: ಹೊಸವರ್ಷದ ದಿನವೇ ರಾಷ್ಟ್ರರಾಜಧಾನಿಯಲ್ಲಿ 20 ವರ್ಷದ ಯುವತಿಯೊಬ್ಬಳು ಕಾರಿನಡಿಗೆ ಆಗಿ ಭೀಕರವಾಗಿ ಮೃತಪಟ್ಟಿದ್ದಾಳೆ. ಸುಲ್ತಾನಪುರಿಯಲ್ಲಿ ಯುವತಿ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಕಾರೊಂದು ಡಿಕ್ಕಿಯಾಗಿದೆ. ಈ ಕಾರಿನಲ್ಲಿದ್ದ ಐದೂ ಮಂದಿ ಕಂಠಪೂರ್ತಿ ಕುಡಿದಿದ್ದರು. ಅಪಘಾತವಾದ ಬಳಿಕ ಯಾರೊಬ್ಬರೂ ಕಾರಿನಿಂದ ಇಳಿದು ಏನಾಯಿತು ಎಂದು ಪರಿಶೀಲನೆ ಮಾಡಲಿಲ್ಲ. ಚಾಲಕ ಕಾರು ಮುಂದೆ ಓಡಿಸಿದ್ದಾನೆ. ಆದರೆ ದುರ್ದೈವಕ್ಕೆ ಆ ಯುವತಿ ಬಿದ್ದು ಅದೇ ಕಾರಿನಡಿ ಆಗಿದ್ದಳು. ಆಕೆ ಸುಮಾರು 12 ಕಿಮೀ ದೂರ ಹಾಗೇ ಕಾರಿನಡಿಗೆ ಆಗಿ ಎಳೆಯಲ್ಪಟ್ಟು, ಸಾವಿಗೀಡಾಗಿದ್ದಾಳೆ.
ಈ ಘಟನೆ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಟ್ವೀಟ್ ಮಾಡಿ ‘ನನಗಂತೂ ತಲೆ ಎತ್ತಲು ಸಾಧ್ಯವಾಗದಷ್ಟು ನಾಚಿಕೆಯಾಗಿದೆ’ ಎಂದಿದ್ದಾರೆ. ಟ್ವೀಟ್ ಮಾಡಿರುವ ಸಕ್ಸೇನಾ ‘ಕಂಝಾವಲ್-ಸುಲ್ತಾನ್ಪುರಿ ಮಾರ್ಗದಲ್ಲಿ ಹೊಸವರ್ಷದ ದಿನ ಬೆಳಗ್ಗೆ ನಡೆದ ಅಮಾನವೀಯ ಕ್ರೈಂ ನೋಡಿ ನನಗೆ ತಲೆ ಎತ್ತಲಾಗದಷ್ಟು ನಾಚಿಕೆಯಾಗುತ್ತಿದೆ. ಇಲ್ಲಿ ಕಾರಿನಲ್ಲಿದ್ದ ದುಷ್ಕರ್ಮಿಗಳಿಗೆ ಸ್ವಲ್ಪವಾದರೂ ಸಂವೇದನಾಶೀಲತೆ, ಕಾಳಜಿ ಇಲ್ಲದೆ ಹೋಯಿತಲ್ಲಾ ಎಂಬುದನ್ನು ನೋಡಿ ಶಾಕ್ ಆಯಿತು. ಸದ್ಯ ಎಲ್ಲ ಆರೋಪಿಗಳೂ ಸೆರೆ ಸಿಕ್ಕಿದ್ದಾರೆ. ಘಟನೆ ಬಗ್ಗೆ ದೆಹಲಿ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಮೃತ ಯುವತಿಯ ಕುಟುಂಬಕ್ಕೆ ಅಗತ್ಯ ಸಹಕಾರ, ನೆರವು ನೀಡಲಾಗುವುದು. ಜವಾಬ್ದಾರಿಯುತ ಮತ್ತು ಸಂವೇದನಾಸಹಿತ ಸಮಾಜ ನಿರ್ಮಾಣ ಮಾಡೋಣ’ ಎಂದೂ ಕರೆ ನೀಡಿದ್ದಾರೆ.
ಈ ಯುವತಿ ಕಾರಿನಡಿಗೆ ಬಿದ್ದು ಸುಮಾರು 12 ಕಿಮೀ ದೂರ ಎಳೆಯಲ್ಪಟ್ಟರೂ ಚಾಲಕನಿಗೆ ಗೊತ್ತಾಗಲಿಲ್ಲ. ಆಕೆ ಎಳೆದು ಹೋದ ರಸ್ತೆಯಲ್ಲಿ ರಕ್ತದ ಗುರುತಾಗಿದೆ. ಆ ದೃಶ್ಯವನ್ನು ನೋಡಿದವರು ಯಾರೋ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಕಂಝಾವಲ್ನಲ್ಲಿ ರಸ್ತೆ ಮೇಲೆ ಯುವತಿ ಪತ್ತೆಯಾಗಿದ್ದಳು. ಆಕೆಯ ಮೈಮೇಲೆ ಬಟ್ಟೆ ಇರಲಿಲ್ಲ. ಬೆನ್ನಿನ ಭಾಗದ ಚರ್ಮ ಸಂಪೂರ್ಣ ಸುಲಿದು ಹೋಗಿತ್ತು. ಉಸಿರಾಡುತ್ತಿದ್ದ ಆಕೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಈ ಬಗ್ಗೆ ದೆಹಲಿ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್ ಕೊಟ್ಟು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಇದನ್ನೂ ಓದಿ: Accident In Delhi | ಕಾರಿನ ಅಡಿಗೆ ಸಿಲುಕಿದ ಯುವತಿಯನ್ನು 12 ಕಿ.ಮೀ ಎಳೆದುಕೊಂಡು ಹೋದ ಚಾಲಕ, ಐವರ ಸೆರೆ