ರಾಷ್ಟ್ರರಾಜಧಾನಿ ದೆಹಲಿಯ ಸುಲ್ತಾನ್ಪುರಿಯಲ್ಲಿ ಜನವರಿ 1ರ ಮುಂಜಾನೆ ನಡೆದ ಭೀಕರ ಅಪಘಾತ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಅಂದು ಅಂಜಲಿ ಎಂಬ ಯುವತಿ ಕಾರಿನ ಅಡಿಯಲ್ಲಿ ಸಿಲುಕಿ ಸುಮಾರು 12 ಕಿಮೀ ದೂರ ಎಳೆಯಲ್ಪಟ್ಟು ದಾರುಣವಾಗಿ ಮೃತಪಟ್ಟಿದ್ದಳು. ಆಕೆಯ ಶವ ಸಂಪೂರ್ಣ ನಗ್ನ ಸ್ಥಿತಿಯಲ್ಲಿ ಮಧ್ಯರಸ್ತೆಯಲ್ಲಿ ಪತ್ತೆಯಾಗಿತ್ತು. ಆಕೆ ಸ್ಕೂಟರ್ನಲ್ಲಿ ಒಬ್ಬಳೇ ಇದ್ದಳು ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು. ಆದರೆ ಇಲ್ಲ ಅವಳೊಂದಿಗೆ ಇನ್ನೊಬ್ಬಳು ಹುಡುಗಿ ಇದ್ದಳು. ಆಕೆಯ ಹೆಸರು ನಿಧಿ ಎಂಬ ವಿಷಯ ತನಿಖೆ ಬಳಿಕ ಗೊತ್ತಾಯಿತು.
ನಿಧಿ ಮತ್ತು ಅಂಜಲಿ ಇಬ್ಬರೂ ದೆಹಲಿಯ ರೋಹಿಣಿ ನಗರದಲ್ಲಿರುವ ಹೋಟೆಲ್ವೊಂದರಲ್ಲಿ ಹೊಸವರ್ಷದ ಪಾರ್ಟಿಯಲ್ಲಿ ಪಾಲ್ಗೊಂಡು ಮುಂಜಾನೆ 3ಗಂಟೆ ಹೊತ್ತಿಗೆ ಅಲ್ಲಿಂದ ಹೊರಟಿದ್ದರು. ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ಇಬ್ಬರೂ ಜಗಳ ಕೂಡ ಮಾಡಿಕೊಂಡಿದ್ದಾರೆ. ಯಾರು ಸ್ಕೂಟರ್ ಓಡಿಸಬೇಕು ಎಂದು ಇಬ್ಬರೂ ಕೆಲ ಕಾಲ ಕಿತ್ತಾಡಿಕೊಂಡ ನಂತರ ಅಂಜಲಿ ಬೈಕ್ ಓಡಿಸಿದ್ದಳು. ನಿಧಿ ಹಿಂದೆ ಕುಳಿತಿದ್ದಳು. ಆದರೆ ಸುಲ್ತಾನ್ಪುರಿ ಬಳಿ ಹೋಗುತ್ತಿದ್ದಂತೆ ಇವರ ಸ್ಕೂಟರ್ಗೆ ಕಾರು ಡಿಕ್ಕಿಯಾಗಿತ್ತು. ಸಣ್ಣಪುಟ್ಟ ಗಾಯಗಳಾದ ನಿಧಿ ಅಲ್ಲಿಂದ ಭಯಗೊಂಡು ಕಾಲ್ಕಿತ್ತಿದ್ದರೆ, ಅತ್ತ ಅಂಜಲಿ ಕಾಲು ಕಾರಿಗೆ ಸಿಲುಕಿ 12 ಕಿಮೀ ದೂರ ಎಳೆಯಲ್ಪಟ್ಟಿದ್ದಳು. ಅಂಜಲಿ ನಿಧಿ ಜಗಳ ಮಾಡಿಕೊಂಡ ಸಿಸಿಟಿವಿ ಫೂಟೇಜ್ಗಳೆಲ್ಲ ಪೊಲೀಸರಿಗೆ ಲಭ್ಯವಾಗಿವೆ.
ಅಂದು ಅಂಜಲಿ ಜತೆಗಿದ್ದ ನಿಧಿಯನ್ನು ಈಗ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನಿಧಿ ಒಂದು ಶಾಕಿಂಗ್ ವಿಷಯ ಹೇಳಿದ್ದಾಳೆ. ಪಾರ್ಟಿಯಲ್ಲಿ ಅಂಜಲಿ ಮದ್ಯಪಾನ ಮಾಡಿದ್ದಳು ಎಂದು ಪೊಲೀಸರಿಗೆ ಆಕೆ ತಿಳಿಸಿದ್ದಾಳೆ. ‘ಅಂಜಲಿ ಮದ್ಯಪಾನ ಮಾಡಿದ ಪರಿಣಾಮ ಆಕೆ ಅಮಲಿನಲ್ಲಿ ಇದ್ದಳು. ಅಷ್ಟಾದರೂ ತಾನೇ ಸ್ಕೂಟಿ ಓಡಿಸುತ್ತೇನೆ ಎಂದು ಹಠ ಹಿಡಿದಿದ್ದಳು. ನಾನು ಬೇಡ ಎಂದು ಹೇಳಿದ್ದಕ್ಕೆ ಜಗಳವಾಯಿತು. ಕೊನೆಗೂ ಅವಳೇ ಸ್ಕೂಟರ್ ಓಡಿಸಿದಳು. ಅಪಘಾತ ಆಗುತ್ತಿದ್ದಂತೆ ನನಗೆ ಭಯವಾಗಿ ಓಡಿ ಬಂದುಬಿಟ್ಟೆ’ ಎಂದು ಪೊಲೀಸರ ಎದುರು ನಿಧಿ ಹೇಳಿದ್ದಾಳೆ.
‘ನಮ್ಮ ಸ್ಕೂಟರ್ಗೆ ಕಾರು ಡಿಕ್ಕಿಯಾದಾಗ ನಾನು ಬದಿಯಲ್ಲಿ ಬಿದ್ದೆ. ಆದರೆ ಅಂಜಲಿ ಕಾರಿನ ಒಳಗೆ ಸಿಲುಕಿಕೊಂಡಳು. ಆಕೆ ಕಾರಿನ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾಳೆ ಎಂದು ಕಾರಿನಲ್ಲಿ ಇದ್ದವರಿಗೆ ಗೊತ್ತಿತ್ತು. ಆದರೂ ಅವರು ಮುಂದೆ ಚಲಿಸಿದರು. ನನಗೆ ಅದೆಷ್ಟು ಭಯವಾಯಿತು ಎಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದೂ ಹೊಳೆಯಲಿಲ್ಲ. ಮನೆಗೆ ಓಡಿಹೋದೆ’ ಎಂದೂ ತಿಳಿಸಿದ್ದಾಳೆ. ‘ನಿಧಿ ನೀಡಿದ ಹೇಳಿಕೆಗಳನ್ನೆಲ್ಲ ದಾಖಲಿಸಿಕೊಂಡಿದ್ದೇವೆ. ಆಕೆ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾಳೆ. ಆದಷ್ಟು ಬೇಗ ಈ ಪ್ರಕರಣ ಬಗೆಹರಿಸುತ್ತೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಾಗರ್ ಪ್ರೀತ್ ಹೂಡಾ ತಿಳಿಸಿದ್ದಾರೆ.
ಇನ್ನು ಈ ಕೇಸ್ನಲ್ಲಿ ಬಿಜೆಪಿ ಮುಖಂಡ ಮನೋಜ್ ಮಿತ್ತಲ್, ದೀಪಕ್ ಖನ್ನಾ, ಅಮಿತ್ ಖನ್ನಾ, ಕೃಷ್ಣನ್, ಮಿಥುನ್ ಎಂಬುವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇನ್ನು ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ಆರೋಪವೂ ಕೇಳಿಬಂದಿತ್ತು. ಆದರೆ ಅಂಥದ್ದೇನೂ ಆಗಿಲ್ಲ ಎಂದು ಶವಪರೀಕ್ಷೆಯಲ್ಲಿ ದೃಢಪಟ್ಟಿದೆ.
ಇದನ್ನೂ ಓದಿ: Accident In Delhi | ಅಪಘಾತದ ಬರ್ಬರತೆಗೆ ಅಂಜಲಿಯ ಮೆದುಳೇ ನಾಪತ್ತೆ, ಮುರಿದ ಬೆನ್ನೆಲುಬು