Site icon Vistara News

ಆಸ್ತಿ ಕಬಳಿಸುವ ಸಲುವಾಗಿ ತನ್ನ ಮೇಲೆ ಗ್ಯಾಂಗ್​ ರೇಪ್​ ಆಯಿತೆಂದು ಕತೆ ಕಟ್ಟಿದ ಮಹಿಳೆ; ರಸ್ತೆ ಮೇಲೆ ಬಿದ್ದಿದ್ದು ಬರೀ ನಾಟಕ!

Delhi woman fabricated About gang rape For Property

ನವ ದೆಹಲಿ: ಅದೆಷ್ಟೋ ಮಹಿಳೆಯರು, ಪುಟ್ಟಪುಟ್ಟ ಮಕ್ಕಳೆಲ್ಲ ಅತ್ಯಾಚಾರಕ್ಕೀಡಾಗುತ್ತಿದ್ದಾರೆ. ಅವರಲ್ಲಿ ಎಷ್ಟೋ ಜನರಿಗೆ ನ್ಯಾಯವೂ ಸಿಗುವುದಿಲ್ಲ. ಸಮಾಜದಲ್ಲಿ ಪರಿಸ್ಥಿತಿ ಹೀಗಿರುವಾಗ ದೆಹಲಿಯ 36ವರ್ಷದ ಮಹಿಳೆ ‘ಅತ್ಯಾಚಾರ’ವನ್ನು ತನ್ನ ಸ್ವಾರ್ಥ, ದುರಾಸೆಗಾಗಿ ಬಳಸಿಕೊಂಡಿದ್ದಾಳೆ. ಆಸ್ತಿಯನ್ನು ಕಬಳಿಸುವ ಸಲುವಾಗಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಕತೆಕಟ್ಟಿದ್ದಾಳೆ. ಆಕೆಯ ಪಿತೂರಿಯ ಬಗ್ಗೆ ಗಾಜಿಯಾಬಾದ್​ ಪೊಲೀಸರು ಸಮಗ್ರ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್​ 18ರಂದು ಘಾಜಿಯಾಬಾದ್​​ನ ಆಶ್ರಮ ರಸ್ತೆಯಲ್ಲಿ ಮಹಿಳೆಯೊಬ್ಬಳು ಗೋಣಿಚೀಲದಲ್ಲಿ ಅರೆಬರೆ ತುಂಬಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ನಂತರ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಈ ಬಗ್ಗೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್​ ಟ್ವೀಟ್ ಮಾಡಿ, ‘ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ, ಗೋಣಿಚೀಲದಲ್ಲಿ ತುಂಬಲಾಗಿದೆ. ಅವರ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್​ ತುರುಕಲಾಗಿದೆ’ ಎಂದು ಹೇಳಿದ್ದರು. ಹಾಗೇ, ಆಸ್ತಿ ವಿಚಾರಕ್ಕೇ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದೂ ಹೇಳಲಾಗಿತ್ತು.

ಮಹಿಳೆ ಹೆಸರು ಸಮೀನಾ ಎಂದಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಇದ್ದಾಗಲೇ ಪೊಲೀಸರಿಗೆ ಹೇಳಿಕೆ ನೀಡಿದ್ದರು. ‘ನಾನು ನನ್ನ ಸಹೋದರನ ಹುಟ್ಟುಹಬ್ಬ ಆಚರಣೆಗಾಗಿ ಗಾಜಿಯಾಬಾದ್​ಗೆ ಹೋಗಿದ್ದೆ. ಆಗ ನನ್ನನ್ನು ಐವರು ಸೇರಿ ಅಪಹರಣ ಮಾಡಿದರು. ಅವರು ಗನ್​ ತೋರಿಸಿ, ಹೆದರಿಸಿ ಕಿಡ್ನ್ಯಾಪ್​ ಮಾಡಿದರು. ಸತತ ಎರಡು ದಿನ ನನ್ನ ಮೇಲೆ ಅತ್ಯಾಚಾರ ಮಾಡಿದರು’ ಎಂಬುದು ಆಕೆಯ ದೂರಿನ ಸಾರಾಂಶ. ಆಕೆ ಕೊಟ್ಟ ದೂರಿನ ಅನ್ವಯ ಪೊಲೀಸರು ಐವರನ್ನು ಬಂಧಿಸಿಯೂ ಆಗಿತ್ತು.

ವೈದ್ಯಕೀಯ ಪರೀಕ್ಷೆಗೆ ಒಪ್ಪದ ಮಹಿಳೆ
ಮಹಿಳೆಯನ್ನು ಮೊದಲು ಪೊಲೀಸರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಮಹಿಳೆ ತಪಾಸಣೆಗೆ ಒಪ್ಪಲೇ ಇಲ್ಲ. ಅಲ್ಲಿಂದ ಗಾಜಿಯಾಬಾದ್​ಗೆ ಕರೆದುಕೊಂಡು ಹೋದರೆ, ಅಲ್ಲಿಯೂ ಮಹಿಳೆ ವೈದ್ಯಕೀಯ ತಪಾಸಣೆ ಬೇಡವೆಂದು ಪಟ್ಟು ಹಿಡಿದಳು. ಅಂತಿಮವಾಗಿ ಮೀರತ್​​ನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಯಿತು. ಆದರೆ ಸಮೀನಾ ಹೇಳಿದಂತೆ ಆಕೆಯ ಖಾಸಗಿ ಭಾಗದಲ್ಲಿ ರಾಡ್​ ಇರಲಿಲ್ಲ. ಅತ್ಯಾಚಾರವಾದ ಬಗ್ಗೆ ಕುರುಹು ಇರಲಿಲ್ಲ.

ಅನುಮಾನಗೊಂಡ ಪೊಲೀಸರು ತನಿಖೆ ಪ್ರಾರಂಭ ಮಾಡಿದಾಗ ಮೊದಲು ಸಿಕ್ಕಿಬಿದ್ದಿದ್ದು ಆಜಾದ್​ ಎಂಬಾತ. ಅವನ ಮೊಬೈಲ್​ ಸ್ವಿಚ್​ಆಫ್​ ಆಗಿತ್ತು. ಕೊನೆಗೂ ಆಜಾದ್​ನನ್ನು ಬಂಧಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಮಹಿಳೆ ಯಾರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಳೋ, ಅವರೊಂದಿಗೆ ಮಹಿಳೆಗೆ ಆಸ್ತಿ ವಿವಾದ ಇತ್ತು. ಕೇಸ್​ ಕೋರ್ಟ್​ನಲ್ಲಿ ಕೂಡ ಇದೆ. ಆದರೆ ಮಹಿಳೆ ಹೇಗಾದರೂ ಆಸ್ತಿಯನ್ನು ಪಡೆಯಲೇಬೇಕು ಎಂಬ ಕಾರಣಕ್ಕೆ ಆಜಾದ್ ಜತೆ ಸೇರಿ ರೇಪ್​ ನಾಟಕವಾಡಿದ್ದಳು. ಇವರಿಗೆ ಅಫ್ಜಲ್​ ಮತ್ತು ಗೌರವ್​ ಎಂಬ ಇಬ್ಬರು ಸಹಾಯ ಮಾಡಿದ್ದರು. ಸದ್ಯ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Gang Rape | ಉತ್ತರ ಪ್ರದೇಶದಲ್ಲಿ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌, ಗುಪ್ತಾಂಗಕ್ಕೆ ರಾಡ್‌ ತುರುಕಿ ವಿಕೃತಿ

Exit mobile version