ನವ ದೆಹಲಿ: ಲಿವ್ ಇನ್ ಸಂಬಂಧದಲ್ಲಿ ಇದ್ದ 28 ವರ್ಷದ ಯುವತಿ, ತನ್ನ ಲಿವ್ ಇನ್ ಸಂಗಾತಿಯಿಂದಲೇ ದಾರುಣ ಸಾವು ಕಂಡಿರುವ ಘಟನೆ ಉತ್ತರ ದೆಹಲಿಯ ಅಮನ್ ವಿಹಾರ್ನಲ್ಲಿ ನಡೆದಿದೆ. ಆರೋಪಿ ಮೋಹಿತ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಯುವತಿ ವಾಯುವ್ಯ ದೆಹಲಿಯ ಬಲ್ಬೀರ್ ವಿಹಾರ್ ಎಂಬಲ್ಲಿನ ನಿವಾಸಿಯಾಗಿದ್ದು, ಚಪ್ಪಲಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಈ ಹಿಂದೆಯೇ ಮದುವೆಯಾಗಿತ್ತು. ಆದರೆ ಆಕೆ ಪತಿಯನ್ನು ಬಿಟ್ಟು, ಕಳೆದ 6ವರ್ಷಗಳಿಂದ ಮೋಹಿತ್ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದಳು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಅದರಲ್ಲಿ ಒಂದು ಮಗು ಪತಿಯಿಂದ ಹುಟ್ಟಿದ್ದಾದರೆ, ಇನ್ನೊಂದು ಮಗುವಿನ ತಂದೆ ಮೋಹಿತ್.
ಇದನ್ನೂ ಓದಿ: ದೆಹಲಿ ಡಾಬಾ ಫ್ರಿಡ್ಜ್‌ನಲ್ಲಿ ಶವ ಪತ್ತೆ, ನಿಕ್ಕಿ ಜತೆ 2020ರಲ್ಲೇ ಮದುವೆ, 2ನೇ ಮದುವೆಗಾಗಿ ಹೆಂಡತಿಯನ್ನೇ ಕೊಂದ ಸಾಹಿಲ್
ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಮೋಹಿತ್ ತನ್ನ ಸ್ನೇಹಿತರ ಜತೆಗೂಡಿ ಡ್ರಗ್ಸ್ ತೆಗೆದುಕೊಳ್ಳುತ್ತಿರುವುದನ್ನು ಯುವತಿ ನೋಡಿದ್ದಳು. ಅದೇ ವಿಚಾರವನ್ನು ಅವನ ಬಳಿ ಪ್ರಶ್ನಿಸಿದ್ದಕ್ಕೆ, ಇಬ್ಬರ ಮಧ್ಯೆ ದೊಡ್ಡ ಗಲಾಟೆಯೇ ಶುರುವಾಯಿತು. ಪರಸ್ಪರ ಜಗಳವಾಡಿಕೊಳ್ಳುತ್ತಿರುವಾಗಲೇ ಮೋಹಿತ್ ಅತ್ಯಂತ ಕ್ರೋಧದಿಂದ ಆಕೆಗೆ ಬೆಂಕಿ ಹಚ್ಚಿದ್ದ.
ಸ್ಥಳೀಯರು ಮಹಿಳೆಯನ್ನು ಮೊದಲು ಎಸ್ಜಿಎಂ ಆಸ್ಪತ್ರೆಗೆ ದಾಖಲು ಮಾಡಿ, ಪೊಲೀಸರಿಗೆ ಕರೆ ಮಾಡಿದರು. ಆದರೆ ಅಲ್ಲಿಗೆ ಪೊಲೀಸರು ಹೋದರೂ ಆಕೆ ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಆಕೆಯ ಪರಿಸ್ಥಿತಿ ಬಿಗಡಾಯಿಸುತ್ತಲೇ ಹೋಗಿದ್ದರಿಂದ, ಅವಳನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿಂದ ಏಮ್ಸ್ಗೂ ಕರೆದೊಯ್ಯಲಾಯಿತು. ಆದರೆ ಎಲ್ಲಿಯೂ ಚಿಕಿತ್ಸೆ ಫಲಿಸಲಿಲ್ಲ. ಪೊಲೀಸರು ಮೋಹಿತ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.