Site icon Vistara News

Dog power : ಬೆವರ ವಾಸನೆ ಬೆನ್ನುಹತ್ತಿ 8 ಕಿ.ಮೀ. ದೂರ ಕ್ರಮಿಸಿ ಕೊಲೆಗಾರನನ್ನು ಹಿಡಿದ ಸೂಪರ್‌ಸ್ಟಾರಿಣಿ ತಾರಾ!

thara dog

ದಾವಣಗೆರೆ: ತಾಲೂಕಿನ ಮಲ್ಲಶೆಟ್ಟಿಹಳ್ಳಿ ಕ್ರಾಸ್ ಬಳಿ ಆ. 6ರಂದು ಯುವಕನೊಬ್ಬನ ಕೊಲೆ (Murder Case) ನಡೆದಿತ್ತು. ಯುವಕನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ಕೊಲೆಯಾದವನು ಶ್ರೀರಾಮನಗರದ ನರಸಿಂಹ (26) ಎನ್ನುವುದು ಪೊಲೀಸರಿಗೆ ಗೊತ್ತಾಯಿತು. ಆದರೆ, ಕೊಲೆ ಮಾಡಿದ್ದು ಯಾರು? ಈ ವಿಷಯ ಅಷ್ಟು ಸುಲಭದಲ್ಲಿ ಗೊತ್ತಾಗಲಿಲ್ಲ. ಆಗ ಪೊಲೀಸರಿಗೆ ನೆನಪಾಗಿದ್ದು ತಾರಾ! ತಾರಾ (Police Dog Thara) ಎಂದರೆ ದಾವಣಗೆರೆ ಪೊಲೀಸ್‌ ಡಾಗ್‌ ಸ್ಕ್ವಾಡ್‌ನಲ್ಲಿರುವ ಒಂದು ನಾಯಿ (Dog power). ದಾವಣಗೆರೆ ಪೊಲೀಸರು ತಾರಾಳನ್ನು ಘಟನಾ ಸ್ಥಳಕ್ಕೆ ಕರೆ ತಂದರು. ನರಸಿಂಹನ ತಲೆಗೆ ಹೊಡೆದಿದ್ದ ಮರದ ದೊಣ್ಣೆ ಅಲ್ಲೇ ಬಿದ್ದಿತ್ತು. ಪೊಲೀಸರು ತಾರಾಳಿಗೆ ಅದರ ವಾಸನೆಯನ್ನು ತೋರಿಸಿದ್ದಾರೆ.

ಇದಿಷ್ಟನ್ನೇ ಗ್ರಹಿಸಿದ ತಾರಾ ನಂಗೆ ಗೊತ್ತಾಯಿತು ಎನ್ನುವ ಹಾಗೆ ಒಂದು ನಿರ್ದಿಷ್ಟ ದಾರಿಯನ್ನು ಅನುಸರಿಸಿ ಸಾಗತೊಡಗಿತು. ಮರದ ತುಂಡಿನಿಂದ ಗ್ರಹಿಸಿದ ಕೊಲೆಗಾರನ ಬೆವರಿನ ವಾಸನೆಯನ್ನು ಬೆನ್ನು ಹತ್ತಿ ಆಕೆ ನಡೆದದ್ದು ಸಣ್ಣ ದೂರವೇನಲ್ಲ. ಬರೋಬ್ಬರಿ ಎಂಟು ಕಿಲೋ ಮೀಟರ್‌! ಅಷ್ಟು ದೂರ ಕ್ರಮಿಸಿದ ನಾಯಿ ಶ್ರೀರಾಮ ನಗರದ ಒಂದು ಮನೆಯ ಮುಂದೆ ಹೋಗಿ ನಿಂತಿದೆ. ಪೊಲೀಸರು ಒಳಗೆ ಹೋಗಿ ನೋಡಿದಾಗ ನಿಜಕ್ಕೂ ಅಲ್ಲಿ ಕೊಲೆಗಾರ ಇದ್ದ!

ಮಲ್ಲಶೆಟ್ಟಿಹಳ್ಳಿ ಕ್ರಾಸ್‌ನಿಂದ ಹೊರಟ ತಾರಾ ರಾಷ್ಟ್ರೀಯ ಹೆದ್ದಾರಿ 4 ಮೂಲಕ ಬಾಡಾ ಕ್ರಾಸ್ ವರೆಗೂ ಬಂದು, ನಂತರ ಎಸ್ ಎಸ್ ಹೈಟೆಕ್ ಆಸ್ಪತ್ರೆ ದಾಟಿ ಶ್ರೀರಾಮನಗರದ ಮನೆ ಮುಂದೆ ಬಂದಿತ್ತು. ತಾರಾ ಆ ಮನೆಯ ಬಾಗಿಲಲ್ಲಿ ನಿಂತಿದ್ದೇ ತಡ ಪೊಲೀಸರಿಗೂ ಗೊತ್ತಾಗಿ ಹೋಗಿತ್ತು ಕೊಲೆಗಾರ ಯಾರು ಅಂತ. ಪೊಲೀಸರು ಘಟನೆ ನಡೆದು ಕೇವಲ 12 ಗಂಟೆಯಲ್ಲಿ ಹಂತಕನನ್ನು ಬಂಧಿಸಿದ್ದರು.

ಹಂತಕನ ಬಂಧನಕ್ಕಿಂತಲೂ ತಾರಾ ಯಶಸ್ಸೇ ಖುಷಿ

ಪೊಲೀಸರಿಗೆ ಕೊಲೆಗಾರನನ್ನು ಹಿಡಿದ ಖುಷಿಗಿಂತಲೂ ತಾರಾ ಇಷ್ಟು ಕರಾರುವಕ್ಕಾಗಿ ಕೊಲೆಗಾರನನ್ನು ಹಿಡಿದದಳಲ್ಲ ಎನ್ನುವುದೇ ದೊಡ್ಡ ಖುಷಿಯ ಸಂಗತಿಯಾಗಿತ್ತು. ಇನ್ನೂ 1 ವರ್ಷವಷ್ಟೇ ಆಗಿರುವ ಕುಶಾಗ್ರಮತಿ ತಾರಾಳ ಪವರ್‌ಗೆ ಹೆಮ್ಮೆ ಪಟ್ಟಿದ್ದಾರೆ. ತಾರಾ ಅತ್ಯಂತ ಸೂಕ್ಷ್ಮಗ್ರಾಹಿ ಬೆಲ್ಜಿಯನ್ ಮೆಲೋನಿಸ್ (belgian malinois) ಎಂಬ ವಿಶಿಷ್ಟ ತಳಿಯ ನಾಯಿ. ಅಮೆರಿಕದಂತಹ ದೇಶಗಳ ಪೊಲೀಸ್ ಹಾಗೂ ಸೇನೆಗಳಲ್ಲಿ‌ ಬಳಕೆ ಆಗುವ ವಿಶಿಷ್ಟ ತಳಿ ಇದು. ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಈ ತಳಿಯ ನಾಯಿ ಇರುವುದು ಇದೊಂದೇ

ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಪಡೆದ ತಾರಾ ದಾವಣಗೆರೆ ಕ್ರೈಂ ವಿಭಾಗಕ್ಕೆ ಬಂದಾಗ ಇನ್ನೂ ಒಂಬತ್ತು ತಿಂಗಳು. ಕಳೆದ ಮೂರು ತಿಂಗಳಲ್ಲಿ 14 ಪ್ರಕರಣಗಳನ್ನು ಬೇಧಿಸಲು ಅದು ನೆರವಾಗಿದೆ.

ಅಂದ ಹಾಗೆ ಈ ಕೊಲೆ ನಡೆದಿದ್ದು ಯಾಕೆ?

ನರಸಿಂಹನನ್ನು ಕೊಲೆ ಮಾಡಿದ್ದು ಯಾರು ಎನ್ನುವುದನ್ನು ತಾರಾ ಪತ್ತೆ ಹಚ್ಚಿ ಕೊಟ್ಟಿದ್ದಳು. ಪೊಲೀಸರು ಮನೆಯ ಒಳಗೆ ಹೋಗಿ ಶಿವಯೋಗಿ ಎಂಬಾತನನ್ನು ಬಂಧಿಸಿದ್ದರು. ಅಂದ ಹಾಗೆ ನರಸಿಂಹ ಮತ್ತು ಶಿವಯೋಗಿ ಹಿಂದೆ ಸ್ನೇಹಿತರಾಗಿದ್ದರು.

ನರಸಿಂಹ ಅದೊಂದು ಸಾರಿ ನಿಮ್ಮ ಕೆಲಸಕ್ಕೆ ಬರುತ್ತೇನೆ ಎಂದು ಹೇಳಿ ಶಿವಯೋಗಿ ಬಳಿ 35 ಸಾವಿರ ರೂಪಾಯಿ ಹಣ ಪಡೆದಿದ್ದ. ಆದರೆ, ಕೆಲಸಕ್ಕೆ ಬಾರದೆ ಸತಾಯಿಸುತ್ತಿದ್ದ. ಕೆಲಸಕ್ಕೆ ಬರದಿದ್ದರೆ ಬೇಡ, ಹಣ ವಾಪಸ್‌ ಕೊಡು ಎಂದು ಶಿವಯೋಗಿ ಕೇಳಿದ್ದಾನೆ. ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಕೊನೆಗೆ ಶಿವಯೋಗಿ ಪೊಲೀಸರಿಗೆ ದೂರು ನೀಡಿದ್ದ. ದಾವಣಗೆರೆಯ ವಿದ್ಯಾನಗರ ಪೊಲೀಸರು ನರಸಿಂಹನ ಮೇಲೆ ವಂಚನೆ ಕೇಸು ದಾಖಲಿಸಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಇತ್ತ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಬಂದ ನರಸಿಂಹನಿಗೆ ಶಿವಯೋಗಿ ಮೇಲೆ ಸಿಟ್ಟಿತ್ತು. ಆಗಾಗ ಏನೇನೋ ಕಾರಣ ನೀಡಿ ಜಗಳ ಮಾಡುತ್ತಿದ್ದ. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ. ಇದನ್ನು ನೋಡಿದ ಶಿವಯೋಗಿಗೆ ಇವನು ಒಂದಲ್ಲ ಒಂದು ದಿನ ನನ್ನನ್ನು ಕೊಲ್ಲದೆ ಬಿಡುವುದಿಲ್ಲ ಅನಿಸತೊಡಗಿತು. ಅದೊಂದು ಥರ ಭಯವಾಗಿ ಕಾಡತೊಡಗಿತು. ಹೀಗಾಗಿ ಅವನು ಆಗಸ್ಟ್‌ 6ರಂದು ರಾತ್ರಿ ಮಲ್ಲಶೆಟ್ಟಿಹಳ್ಳಿಯ ಬಾಪೂಜಿ ಬಡಾವಣೆ ಸರ್ವಿಸ್ ರಸ್ತೆ ಪಕ್ಕದಲ್ಲಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿಯೇ ಬಿಟ್ಟ!

Exit mobile version