ಅಹ್ಮದಾಬಾದ್: ಪತ್ನಿ ಮಾಡಿದ ಅಡುಗೆಯಲ್ಲಿ ಉಪ್ಪು-ಖಾರ ಸ್ವಲ್ಪ ಹೆಚ್ಚೂ ಕಡಿಮೆಯಾದರೆ ಏನು ಮಾಡುತ್ತೀರಿ? ಅಡುಗೆಗೆ ಉಪ್ಪು/ಖಾರ ಹೆಚ್ಚಾಗಿದೆ ಅಥವಾ ಕಡಿಮೆಯಾಗಿದೆ ಎಂದು ಸಮಾಧಾನವಾಗಿಯೇ ಹೆಂಡತಿಗೆ ಹೇಳಬಹುದು. ಇಲ್ಲವೇ ಕೋಪಗೊಂಡು ಸಿಡಿಮಿಡಿ ಮಾಡಬಹುದು. ಆದರೆ ಅಹಮದಾಬಾದ್‌ನ ವಾಟ್ವಾದ ನಿವಾಸಿಯೊಬ್ಬ ಇನ್ನೂ ಕ್ರೂರವಾಗಿ ವರ್ತಿಸಿದ್ದಾನೆ. ಅಡುಗೆಗೆ ಉಪ್ಪು ಜಾಸ್ತಿ ಹಾಕಿದಳು ಎಂಬ ಕಾರಣಕ್ಕೆ ತನ್ನ 28 ವರ್ಷದ ಪತ್ನಿಯ ತಲೆಯನ್ನೇ ಬೋಳಿಸಿದ್ದಾನೆ. ಅಷ್ಟಕ್ಕೂ ಸುಮ್ಮನಾಗದೆ ಆಕೆಗೆ ಹೊಡೆದಿದ್ದಾನೆ. ಸಂತ್ರಸ್ತ ಪತ್ನಿ ಘಟನೆ ನಡೆದ ಮೂರು ದಿನಗಳ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತ್ನಿಯ ತಲೆ ಬೋಳಿಸಿದ ಪತಿ ಈಗ ಸಂಕಷ್ಟದಲ್ಲಿದ್ದಾನೆ.
ಸಂತ್ರಸ್ತ ಮಹಿಳೆಯ ಹೆಸರು ರಿಜ್ವಾನಾ ಶೇಖ್. ಈಕೆಯ ಪತಿ ಇಮ್ರಾನ್ (29). ವಾಟ್ವಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ನೀಡಿದ ರಿಜ್ವಾನಾ, ʼನಾನು ಇಮ್ರಾನ್‌ರನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದೇನೆ. ಇಮ್ರಾನ್ ಒಬ್ಬ ದಿನಗೂಲಿ ಕಾರ್ಮಿಕನಾಗಿದ್ದು ಮೇಸ್ತ್ರಿ ಕೆಲಸ ಮಾಡುತ್ತಿದ್ದಾನೆ. ಮೇ 8ರಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಊಟಕ್ಕೆಂದು ಮನೆಗೆ ಬಂದ. ನಾನು ಅವನಿಗೆ ಚಪಾತಿ ಮತ್ತು ಕರ್ರಿ ಬಡಿಸಿದೆ. ಆತ ಒಂದು ತುತ್ತು ತಿನ್ನುತ್ತಿದ್ದಂತೆ ನನಗೆ ಬೈದ. ರುಚಿ ಸ್ವಲ್ಪವೂ ಚೆನ್ನಾಗಿಲ್ಲ. ಉಪ್ಪು ತುಂಬ ಜಾಸ್ತಿಯಾಗಿದೆ ಎಂದು ಕೂಗಾಡಿದ. ನಾನು ಬೇರೆ ಏನಾದರೂ ಮಾಡಿ ಕೊಡುತ್ತೇನೆ. ಇಷ್ಟು ಚಿಕ್ಕ ವಿಷಯಕ್ಕೆ ಕೂಗಾಡಬೇಡ ಎಂದು ಹೇಳಿದೆ. ಆದರೆ ಆತ ಬೈಯ್ಯುತ್ತಲೇ ಇದ್ದ. ಬಳಿಕ ಕೋಲು ತಂದು ಹೊಡೆಯಲು ಶುರು ಮಾಡಿದ. ನೋವು ತಾಳಲಾಗದೆ ನಾನು ಅಳುತ್ತಿದ್ದೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಪೊಲೀಸರನ್ನು ಕರೆಯುವುದಾಗಿಯೂ ಹೇಳಿದೆ. ಆದರೆ ಆತ ಮತ್ತಷ್ಟು ಸಿಟ್ಟಾದ. ನನ್ನನ್ನು ರೂಮಿನಲ್ಲಿ ಕೂಡಿ ಹಾಕಿ ರೇಜರ್ ತಂದು ತಲೆ ಬೋಳಿಸಲು ಪ್ರಾರಂಭಿಸಿದ. ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲೇ ನನ್ನ ತಲೆ ಕೂದಲನ್ನು ಸಂಪೂರ್ಣವಾಗಿ ಬೋಳಿಸಿದ್ದ. ನನ್ನ ಕೂಗಾಟ ಕೇಳಿ ನೆರೆಹೊರೆಯವರೆಲ್ಲ ಬಂದರು. ಪೊಲೀಸ್ ಸ್ಟೇಷನ್‌ಗೆ ಹೋಗುವಂತೆ ನನಗೆ ಅವರು ಸೂಚಿಸಿದರು. ಆದರೆ ತೀವ್ರ ಭಯಗೊಂಡಿದ್ದ ನಾನು ಮೂರು ದಿನ ಬಿಟ್ಟು ಬಂದು ದೂರು ಕೊಡುತ್ತಿದ್ದೇನೆʼ ಎಂದು ಹೇಳಿದ್ದಾರೆ.
ರಿಜ್ವಾನಾ ನೀಡಿದ ದೂರಿನ ಅನ್ವಯ ಆಕೆಯ ಪತಿ ಇಮ್ರಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪತ್ನಿಯನ್ನು ನಿಂದಿಸಿದ ಮತ್ತು ಕ್ರಿಮಿನಲ್ ಬೆದರಿಕೆ ಹಾಕಿದ ಆರೋಪದಡಿ ಕೇಸ್ ಹಾಕಿದ್ದಾರೆ.
ಇದನ್ನೂ ಓದಿ | ಚೀನಾದಲ್ಲಿ ಪತಿ-ಪತ್ನಿ ಒಟ್ಟಿಗೆ ಮಲಗುವಂತಿಲ್ಲ.. ಚುಂಬಿಸುವಂತಿಲ್ಲ: ಯಾಕೆ ಗೊತ್ತಾ..?