ಚಿಕ್ಕಮಗಳೂರು : ಪತಿಯ ಕುಟುಂಬಸ್ಥರಿಂದ ಎದುರಾದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ (Dowry Death) ಮಾಡಿಕೊಂಡಿರುವ ಪ್ರಕರಣ ನಡೆದಿದೆ. 25 ವರ್ಷದ ಸುಭೀಕ್ಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಅವರಿಗೆ ಎರಡೂವರೆ ವರ್ಷದ ಒಂದು ಗಂಡು ಮಗು ಇದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಆತ್ಮಹತ್ಮೆ ಮಾಡಿಕೊಂಡ ಸುಭೀಕ್ಷಾ 4 ವರ್ಷಗಳ ಹಿಂದೆ ಚಂದುವಳ್ಳಿಯ ಪ್ರವೀಣ್ ಜೊತೆ ವಿವಾಹವಾಗಿದ್ದರು. ಪತಿಯು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಂತೆಯೇ ಸೋಮವಾರ ಸಂಜೆ 4 ಗಂಟೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆಯಾಗಿ 7 ವರ್ಷದ ಒಳಗೆ ಗೃಹಿಣಿ ಆತ್ಮಹತ್ಯೆಗೆ ಶರಣಾದರೆ ತಹಸೀಲ್ದಾರ್ ರಿಂದ ಸ್ಪಾಟ್ ಮಹಜರ್ ಮಾಡಬೇಕಾಗುತ್ತದೆ. ಹೀಗಾಗಿ ಮಂಗಳವಾರದ ತನಕ ಸ್ಪಾಟ್ ಮಹಜರ್ ಮಾಡಿಲ್ಲ.
ಸುಭೀಕ್ಷಾ ಅವರ ಕುಟುಂಬಸ್ಥರು ವರದಕ್ಷಿಣೆ ಕಿರುಕುಳದಿಂದ ತಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Student Death : ಮೈಸೂರಿನ ಕಾಲೇಜಿನ ಹಾಸ್ಟೆಲ್‌ನಲ್ಲಿ 17 ವರ್ಷದ ವಿದ್ಯಾರ್ಥಿನಿ ಅನಾರೋಗ್ಯದಿಂದ ಸಾವು
ಮೈಸೂರು: ಮೈಸೂರಿನ ಕಾಲೇಜಿನ ಹಾಸ್ಟೆಲ್‌ವೊಂದರಲ್ಲಿ ವಾಸವಿದ್ದು ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ. ದಕ್ಷ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದ ಜಯಪ್ರಾರ್ಥನಾ (17) ಮೃತಪಟ್ಟ ವಿದ್ಯಾರ್ಥಿನಿ. ಪೋಷಕರಿಗೆ ಘಟನೆಯ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮಾಹಿತಿ ನೀಡಿದೆ. ವಿದ್ಯಾರ್ಥಿನಿಯ ಸಾವಿಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಏಕಾಏಕಿ ಅನಾರೋಗ್ಯ ಉಂಟಾಗಿದ್ದ ಕಾರಣ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.
ಮೈಸೂರಿನ ಹೂಟಗಳ್ಳಿಯಲ್ಲಿರುವ ಕಾಲೇಜಿನ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತಿದ್ದ ಜಯಪ್ರಾರ್ಥನಾ ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನವರಾಗಿದ್ದಾರೆ. ಭಾನುವಾರ ಊಟದ ನಂತರ ಜಯಪ್ರಾರ್ಥನಾ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ವಿಚಾರ ತಿಳಿದು ಖಾಸಗಿ ಆಸ್ಪತ್ರೆಯಲ್ಲಿ ಆಡಳಿತ ಮಂಡಳಿ ಚಿಕಿತ್ಸೆ ಕೊಡಿಸಿತ್ತು. ಆದರೆ ಅನಾರೋಗ್ಯದ ವಿಚಾರವನ್ನು ಪೋಷಕರ ಗಮನಕ್ಕೆ ತರದೇ ನಿರ್ಲಕ್ಷ್ಯ ತೋರಿತ್ತು.
ಸೋಮವಾರ ಬೆಳಗ್ಗೆ ಜಯಪ್ರಾರ್ಥನಾಳ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿತ್ತು. ಆ ಸಮಯದಲ್ಲಿ ವಿಷಯವನ್ನು ಪೊಷಕರಿಗೆ ತಿಳಿಸಿದ್ದಾರೆ. ಆದರೆ, ಪೋಷಕರು ಆಸ್ಪತ್ರೆಗೆ ಬರುವ ಮುನ್ನವೇ ಜಯಪ್ರಾರ್ಥನಾ ಮೃತಪಟ್ಟಿದ್ದಾಳೆ. ಮಗಳ ಸಾವಿಗೆ ಕಾಲೇಜು ಆಡಳಿತ ಮಂಡಳಿಯ ಕಾರಣ ಎಂದು ಪೋಷಕರ ಆರೋಪ ಮಾಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.