ರಾಯಚೂರು/ ಕಾರವಾರ: ಪ್ರತ್ಯೇಕ ಕಡೆಗಳಲ್ಲಿ ನೀರಲ್ಲಿ ಮುಳುಗಿ ನಾಲ್ವರು ಮೃತಪಟ್ಟಿರುವ (Drowned In water) ದಾರುಣ ಘಟನೆ ನಡೆದಿದೆ. ಜಾತ್ರೆ ನಿಮಿತ್ತ ಪಾಲಕರೊಂದಿಗೆ ಬಟ್ಟೆ ತೊಳೆಯಲು ಹೋಗಿ ಯುವಕರಿಬ್ಬರು ನೀರುಪಾಲಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಸವಸಾಗರ ಜಲಾಶಯದ ಕಾಲುವೆಯಲ್ಲಿ ಘಟನೆ ನಡೆದಿದೆ.
ಲಕ್ಕಣ್ಣ (22), ಬಸವಂತ (25) ಮೃತ ದುರ್ದೈವಿಗಳು. ಲಿಂಗಸ್ಗೂರು ತಾ. ಬೆಂಡೋಣಿ ಗ್ರಾಮದ ನಿವಾಸಿಗಳಾದ ಇವರಿಬ್ಬರು, ಬಟ್ಟೆ ತೊಳೆಯಲು ಹೋಗಿದ್ದಾರೆ. ಮೊದಲು ಓರ್ವ ಯುವಕ ಕಾಲು ಜಾರಿ ನೀರಿಗೆ ಬಿದ್ದಿದ್ದ. ಈ ವೇಳೆ ಆತನ ಕಾಪಾಡಲು ಮತ್ತೋರ್ವ ಯುವಕ ನೀರಿಗೆ ಧುಮುಕಿದ್ದಾನೆ. ಆದರೆ ಈಜು ಬಾರದೆ ಕಾಲುವೆಯಲ್ಲೇ ಯುವಕರಿಬ್ಬರು ದುರ್ಮರಣ ಹೊಂದಿದ್ದಾರೆ.
ಇನ್ನು ಅಲ್ಲೆ ಇದ್ದ ಸ್ಥಳೀಯರು ರಕ್ಷಣೆಗೆ ಮುಂದಾದರೂ ಆದರೆ ಅಷ್ಟರಲ್ಲಿ ಯುವಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಕಾಲುವೆಯಲ್ಲಿದ್ದ ಯುವಕರಿಬ್ಬರ ಮೃತದೇಹಗಳನ್ನು ಸ್ಥಳೀಯರೇ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Medical Negligence : ಸಕಾಲಕ್ಕೆ ಸಿಗದ ಚಿಕಿತ್ಸೆ; ಹೆರಿಗೆಗೂ ಮೊದಲೇ ತಾಯಿ-ಮಗು ಸಾವು
ನದಿಯಲ್ಲಿ ಮುಳುಗಿ ತಾಯಿ-ಮಗಳು ಸಾವು
ನದಿಯಲ್ಲಿ ಮುಳುಗಿ ತಾಯಿ- ಮಗಳು ಇಬ್ಬರೂ ಮೃತಪಟ್ಟಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಬೈತಖೋಲ್‌ನಲ್ಲಿ ಘಟನೆ ನಡೆದಿದೆ. ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಾಗ ನೀರಿನಲ್ಲಿ ಮುಳುಗಿ ರೇಣುಕಾ ಹಾಗೂ ಸುಜಾತ ಎಂಬುವವರು ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಮೃತದೇಹಗಳನ್ನು ದಡಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಾರವಾರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ