ಆನೇಕಲ್: ಹಿಂದೊಮ್ಮೆ ಅಂತರಾಜ್ಯ ಡ್ರಗ್ ಪೆಡ್ಲರ್ಗಳನ್ನು (Drugs Case) ಬಂಧಿಸಲು ಹೋದ ಕರ್ನಾಟಕ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಯಾಗಿದ್ದರು. ಇದೀಗ ಗಾಂಜಾ ರಿಕವರಿಗೆ ಹೋಗಿದ್ದ ಜಿಗಣಿ ಪೊಲೀಸರನ್ನು (Jigani Police) ಒರಿಸ್ಸಾ ಪೊಲೀಸರು ಬಂಧಿಸಿದ್ದಾರೆ.
ಆನಂದ್, ಚನ್ನಬಸವ, ದೀಪು, ಎ.ಎಸ್.ಐ ಅಪ್ಪಾಜಿ ಗೌಡರ ನಾಲ್ಕು ಜನರ ತಂಡ ಒರಿಸ್ಸಾಗೆ ತೆರಳಿದ್ದರು. ಹಿರಿಯ ಅಧಿಕಾರಿಗಳ ಆದೇಶದ ಮೇಲೆ ಜಿಗಣಿ ಪೊಲೀಸ್ ತಂಡ ತೆರಳಿದ್ದರು. ಕಾನ್ಸ್ಟೇಬಲ್ ಆನಂದ್ ಅವರು ಫಾರೆಸ್ಟ್ ಒಳಗೆ ಮೊದಲು ತೆರಳಿದ್ದರು. ಇತ್ತ ಮೊದಲೇ ಪ್ಲ್ಯಾನ್ ಮಾಡಿಕೊಂಡು ಕಾದಿದ್ದ ಒರಿಸ್ಸಾ ಪೊಲೀಸರು, ಗಾಂಜಾ ಹಿಡಿದು ಹೊರ ಬರುತ್ತಿದ್ದಂತೆ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಕರ್ನಾಟಕದಿಂದ ಬಂದಿದ್ದಾಗಿ ಪೊಲೀಸರ ತಂಡ ಒರಿಸ್ಸಾ ಪೊಲೀಸರಿಗೆ ಹೇಳಿದ್ದಾರೆ. ಆದರೆ ಇವರ ಯಾವ ಮಾತನ್ನು ಲೆಕ್ಕಿಸದೆ ಕಾನ್ಸ್ಟೇಬಲ್ ಆನಂದ್ ಅವರನ್ನು ಬಂಧಿಸಿದ್ದಾರೆ. ಇತ್ತ ಕಾನ್ಸ್ಟೇಬಲ್ ಆನಂದ್ ಬಂಧನವಾಗುತ್ತಿದ್ದಂತೆ ಆಡಿಷನಲ್ ಎಸ್ಪಿ ಎಂ.ಎಲ್ ಪುರುಷೋತ್ತಮ್ ಹಾಗೂ ಜಿಗಣಿ ಠಾಣೆ ಇನ್ಸ್ಸ್ಪೆಕ್ಟರ್ ಮಂಜುನಾಥ್ ಒರಿಸ್ಸಾಗೆ ತೆರಳಿದ್ದಾರೆ. ಆನಂದ್ ಬಿಡುಗಡೆಗೆ ಕಾನೂನು ಪ್ರಕ್ರಿಯೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: Assault Case : ಹೆಂಡ್ತಿಗೆ ಹಲ್ಲೆ ಮಾಡುವುದನ್ನು ಕಂಡ ಗಂಡನಿಗೆ ಹಾರ್ಟ್ ಅಟ್ಯಾಕ್!
ಇತ್ತೀಚೆಗೆ ಕಾರ್ಯಾಚರಣೆಯೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದರು. ಸಂಜಯ್ ರಾವತ್ ಎಂಬಾತನನ್ನು ಬಂಧಿಸಿದಾಗ ಒರಿಸ್ಸಾದಿಂದ ಗಾಂಜಾ ತಂದಿರುವುದಾಗಿ ಬಾಯಿಬಿಟ್ಟಿದ್ದ.
ಅಲ್ಲಿಂದ ಗಾಂಜಾ ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳ ಹೆಸರನ್ನು ಹೇಳಿದ್ದ. ಆರೋಪಿಗಳನ್ನು ಬಂಧಿಸಲು ಎಂಟು ಜನರ ತಂಡವನ್ನು ಹಿರಿಯ ಅಧಿಕಾರಿಗಳು ಕಳುಹಿಸಿದ್ದರು. ಸ್ವತಃ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಸಹಿ ಹಾಕಿ ಕಳುಹಿಸಿ ಕೊಟ್ಟಿದ್ದರು.
ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲು ಒರಿಸ್ಸಾಗೆ ತೆರಳಿದ್ದರು. ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿಗಳಿಗೆ ಪರಿಚಯಸ್ಥನಾಗಿದ್ದ ಬೆಂಗಳೂರಿನ ಶಾಮ್ ಎಂಬಾತನೊಂದಿಗೆ ಆರು ಮಂದಿ ಪೊಲೀಸರು ಹಾಗೂ ಓರ್ವ ಒರಿಸ್ಸಾ ಭಾಷೆ ಮಾತನಾಡುವ ಜಿಗಣಿಯ ಯುವಕನನ್ನು ಕರೆದುಕೊಂಡು ಹೋಗಿದ್ದರು.
ಒರಿಸ್ಸಾದಲ್ಲಿನ ಕಾಡಂಚಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದರು. ಜಿಗಣಿ ಪೊಲೀಸ್ ಠಾಣೆಯ ಸಿಬ್ಬಂದಿ ಆನಂದ್, ಶ್ಯಾಮ್ ಹಾಗೂ ಜಿಗಣಿಯ ಯುವಕ ಮಾರು ವೇಷದಲ್ಲಿ ಹೋಗಿದ್ದರು. ಗಾಂಜಾ ಖರೀದಿ ಮಾಡುವವರ ನೆಪದಲ್ಲಿ ಕಾಡಂಚಿಗೆ ತೆರಳಿದ್ದರು. ಈ ವೇಳೆ 17 ಕೆ.ಜಿ ಗಾಂಜಾ ವಶಕ್ಕೆ ಪಡೆದು ಕಾಡಿನಿಂದ ಆರೋಪಿಗಳನ್ನು ಬಂಧಿಸಿ ಆನಂದ್ ಕರೆ ತರುತ್ತಿದ್ದರು.
ಈ ಸಂದರ್ಭದಲ್ಲಿ ಒರಿಸ್ಸಾ ಪೊಲೀಸರು ಇವರನ್ನು ಅಡ್ಡಗಟ್ಟಿ ಪ್ರಶ್ನೆ ಮಾಡುತ್ತಿದ್ದಂತೆ ಓರ್ವ ಆರೋಪಿ ಎಸ್ಕೇಪ್ ಆಗಿದ್ದಾನೆ. ಗಾಂಜಾ ಜತೆಗೆ ಬಂದಿದ್ದರಿಂದ ಪೊಲೀಸ್ ಪೇದೆ ಆನಂದ್ ಹಾಗೂ ಇನ್ನೊಬ್ಬ ಆರೋಪಿಯನ್ನು ಒರಿಸ್ಸಾ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ತಾವು ಕರ್ನಾಟಕ ಪೊಲೀಸರು ಎಂದು ಹೇಳಿ ದಾಖಲೆ ತೋರಿಸಿದರೂ ಬಿಡದೆ ಒರಿಸ್ಸಾ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಿಲ್ಲ ಎನ್ನುವ ಆರೋಪದ ಮೇರೆಗೆ ಪೇದೆ ಆನಂದ್ನನ್ನು ಬಂಧಿಸಲಾಗಿದೆ. ಸದ್ಯ ಒರಿಸ್ಸಾ ಜೈಲಿನಲ್ಲಿರುವ ಆನಂದ್ಗೆ ಜಾಮೀನು ತೆಗೆದುಕೊಳ್ಳಲು ಸಿದ್ಧತೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ