ನವ ದೆಹಲಿ: ಹರ್ಯಾಣದಲ್ಲಿ ಡಿಎಸ್‌ಪಿ ಶ್ರೇಣಿಯ ಪೊಲೀಸ್ ಅಧಿಕಾರಿಯನ್ನು ಗಣಿ ಮಾಫಿಯಾ ಗೂಂಡಾಗಳು ಭೀಕರವಾಗಿ ಹತ್ಯೆಗೈದಿದ್ದಾರೆ. ತಾವರು ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯಿ ಮೇಲೆ ಟ್ರಕ್‌ನಲ್ಲಿ ಹಾಯಿಸಿ ಕೊಂದು, ಅವರ ಶವವನ್ನು ಕಸದ ತೊಟ್ಟಿಯಲ್ಲಿ ಬಿಸಾಕಿದ್ದಾರೆ. ಸುರೇಂದ್ರ ಸಿಂಗ್ ಬಿಷ್ಣೋಯಿ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದು, ತೌಡು ಗುಡ್ಡದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ರೇಡ್ ಮಾಡಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡೇ ಹೋಗಿದ್ದರು. ಆದರೆ ಮಾಫಿಯಾ ಕ್ರೌರ್ಯಕ್ಕೆ ಅವರ ಜೀವವೇ ಹೋಗಿದೆ.
ಮಧ್ಯಾಹ್ನ 12.10ರ ಹೊತ್ತಿಗೆ ತೌಡು ಗುಡ್ಡಕ್ಕೆ ಹೋಗಿದ್ದ ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯಿ ತಮ್ಮ ವಾಹನದ ಬಳಿ ನಿಂತಿದ್ದರು. ಆಗ ಅಲ್ಲೊಂದು ಡಂಪರ್ ವಾಹನ (ಕಲ್ಲು-ಮಣ್ಣು ಇತ್ಯಾದಿ ಹೊತ್ತು ಸಾಗಿ ಇನ್ನೊಂದೆಡೆ ಹಾಕುವ ವಾಹನ)ಬಂತು. ಅದರ ಚಾಲಕನ ಬಳಿ ವಾಹನ ನಿಲ್ಲಿಸುವಂತೆ ಸುರೇಂದ್ರ ಹೇಳಿದ್ದಾರೆ. ಆದರೆ ಆ ಚಾಲಕ ತನ್ನ ಡಂಪರ್ ಟ್ರಕ್‌ನ್ನು ನಿಲ್ಲಿಸದೆ, ಸುರೇಂದ್ರ ಅವರಿಗೆ ಡಿಕ್ಕಿ ಹೊಡೆಸಿದ್ದಾನೆ. ಪೊಲೀಸ್ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆ ಚಾಲಕ ಪರಾರಿಯಾಗಿದ್ದಾನೆ. ಆತನನ್ನು ಹುಡುಕಲು ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಹರ್ಯಾಣ ಪೊಲೀಸರಿಂದ ಟ್ವೀಟ್
ತಾವರು ಡಿಎಸ್‌ಪಿ ಸುರೇಂದ್ರ ಸಿಂಗ್ ಹತ್ಯೆಯ ಬಗ್ಗೆ ಹರ್ಯಾಣ ಪೊಲೀಸರು ಟ್ವೀಟ್ ಮಾಡಿದ್ದಾರೆ. ಸುರೇಂದ್ರ ಸಿಂಗ್ ಅವರು ಕರ್ತವ್ಯದಲ್ಲಿದ್ದಾಗಲೇ ಮೃತರಾಗಿದ್ದಾರೆ. ಈ ಅಧಿಕಾರಿಯ ಸಾವಿಗೆ ನ್ಯಾಯ ಒದಗಿಸುತ್ತೇವೆ. ಆರೋಪಿಗಳನ್ನು ಒಬ್ಬರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಿಡಿ
ಘಟನೆಯ ಬೆನ್ನಲ್ಲೇ ಹರ್ಯಾಣ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ʼರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಇದೇ ಸಾಕ್ಷಿʼ ಎಂದು ವ್ಯಂಗ್ಯವಾಗಿ ಹೇಳಿದೆ. ʼಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೇ, ನೀವು ನಮ್ಮ ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ? ಇಲ್ಲಿ ಶಾಸಕರು, ಪೊಲೀಸರಿಗೇ ಸುರಕ್ಷತೆಯಿಲ್ಲ ಎಂದ ಮೇಲೆ ಸಾಮಾನ್ಯ ಜನರ ಗತಿಯೇನು?ʼ ಎಂದು ಪ್ರಶ್ನಿಸಿದ್ದಾರೆ. ಹಾಗೇ, ʼಡಿಸಿಪಿ ಸಾವು ನಿಜಕ್ಕೂ ನೋವಿನ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿʼ ಎಂದು ಸಂತಾಪ ಸೂಚಿಸಿದೆ.
ಇದನ್ನೂ ಓದಿ: ಮೂವರು ಸಹೋದ್ಯೋಗಿಗಳಿಗೆ ಗುಂಡಿಕ್ಕಿದ ಸಿಕ್ಕಿಂ ಪೊಲೀಸ್, ಇಬ್ಬರ ಸಾವು