ರಾಂಚಿ: ಗಣಿ ಮಾಫಿಯಾ ತಡೆಯಲು ಹೋಗಿದ್ದ ಹರ್ಯಾಣ ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯಿ ಮೇಲೆ ಮಾಫಿಯಾ ಕ್ರಿಮಿನಲ್‌ಗಳು ಟ್ರಕ್ ಹಾಯಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆಯ ಬೆನ್ನಲ್ಲೇ ಅಂಥದ್ದೇ ಮಾದರಿಯ ಇನ್ನೊಂದು ಹತ್ಯೆ ನಡೆದಿದೆ. ಜಾರ್ಖಂಡ್‌ನ ರಾಂಚಿಯ ತುಡುಪಾನಾ ಒಪಿಯಲ್ಲಿ ವಾಹನ ತಪಾಣೆ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಟಾಪ್ನೋ ಅವರನ್ನು ದುಷ್ಕರ್ಮಿಯೊಬ್ಬ ವಾಹನ ಡಿಕ್ಕಿ ಹೊಡೆಸಿ ಕೊಂದಿದ್ದಾನೆ.
ಪಿಕಪ್ ವಾಹನವೊಂದು ಅನುಮಾನಾಸ್ಪದ ವಸ್ತುಗಳನ್ನು ಸಾಗಿಸುತ್ತಿದೆ ಎಂಬ ಮಾಹಿತಿ ಸಂಧ್ಯಾರಿಗೆ ಸಿಕ್ಕಿತ್ತು. ಆ ಗಾಡಿಯ ನಂಬರ್ ಕೂಡ ಗೊತ್ತಿತ್ತು. ಅದರಂತೆ ವಾಹನ ತುಡುಪಾನಾ ಒಪಿ ಬಳಿ ಬಂದಾಗ ಅದನ್ನು ಸಂಧ್ಯಾ ತಡೆದಿದ್ದಾರೆ. ಅಂದರೆ ಕೈ ಮಾಡಿ ವಾಹನ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ. ಆದರೆ ಚಾಲಕ ಸ್ವಲ್ಪವೂ ನಿಧಾನ ಮಾಡದೆ ಇದ್ದಾಗ, ಅವನನ್ನು ಹೇಗಾದರೂ ತಡೆಯಬೇಕು ಎಂದು ನಿರ್ಧರಿಸಿದ ಸಂಧ್ಯಾ ಪಿಕಪ್ ವಾಹನದ ಎದುರೇ ಬಂದಿದ್ದಾರೆ. ಆಗಲೂ ಅವನು ನಿಲ್ಲಿಸಿದ್ದರೆ ಪೊಲೀಸ್ ಅಧಿಕಾರಿ ಸಂಧ್ಯಾ ಜೀವ ಉಳಿಯುತ್ತಿತ್ತು. ಆದರೆ ಆ ಕ್ರೂರಿ ಸಂಧ್ಯಾ ಮೇಲೆಯೇ ವಾಹನವನ್ನು ಹಾಯಿಸಿ, ಪರಾರಿಯಾಗಿದ್ದಾರೆ. ಇತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಷ್ಟೆಲ್ಲ ನಡೆದಿದ್ದು ಮಂಗಳವಾರ ತಡರಾತ್ರಿ 3ಗಂಟೆ ಹೊತ್ತಿಗೆ. ಬಳಿಕ ಜಾರ್ಖಂಡ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪೊಲೀಸ್ ಚೆಕ್ಕಿಂಗ್ ಇದ್ದಲ್ಲಿ ಸಾಮಾನ್ಯವಾಗಿ ಬ್ಯಾರಿಕೇಡ್‌ಗಳನ್ನು ಇಡಲಾಗುತ್ತದೆ. ಅದೂ ಹೀಗೆ ಅನುಮಾನಾಸ್ಪದ ವಾಹನ ಹಿಡಿಯುವುದಾದರೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ ಈ ತುಡುಪಾನಾ ಒಪಿಯಲ್ಲಿ ಬ್ಯಾರಿಕೇಡ್‌ಗಳೇ ಇರಲಿಲ್ಲ. ಇನ್ನು ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಜತೆ ಹೆಚ್ಚಿನ ಪೊಲೀಸರೂ ಇರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಂಧ್ಯಾ ಸಹೋದರ ಕೂಡ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಚಾಲಕನನ್ನು ಹಿಡಿಯಲಾಗಿದೆ. ರಾಂಚಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಗಣಿ ಮಾಫಿಯಾಕ್ಕೆ ಪೊಲೀಸ್ ಅಧಿಕಾರಿ ಬಲಿ; ಗುಡ್ಡ ಹತ್ತಿದ ಡಿಎಸ್‌ಪಿ ಮೇಲೆ ಟ್ರಕ್ ಹಾಯಿಸಿದ ಚಾಲಕ