ಸೈಬರ್ ಅಪರಾಧಗಳು (Cyber Crime) ಹೆಚ್ಚಾಗಿವೆ. ಮೊಬೈಲ್ಗೆ ಬರುವ ಯಾವ್ಯಾವುದೋ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ, ನಿಮ್ಮ ಖಾಸಗಿ ವಿವರಗಳನ್ನು ನೀಡಬೇಡಿ ಎಂಬ ಎಚ್ಚರಿಕೆಯ ಮಾತುಗಳು ನಮಗೆ ಕೇಳಿಬರುತ್ತಿದ್ದರೂ, ಒಮ್ಮೊಮ್ಮೆ ನಮ್ಮ ಅದೃಷ್ಟ ಕೆಟ್ಟಾಗ ಇಂಥ ಸೈಬರ್ ವಂಚರಕ ಜಾಲಕ್ಕೆ ಸಾರಾಸಗಾಟವಾಗಿ ಬಿದ್ದುಬಿಡುತ್ತೇವೆ. ಹೀಗೆ ರಾಜಸ್ಥಾನದ ಶ್ರೀಗಂಗಾನಗರ 55ವರ್ಷದ ರೈತ ಪವನ್ ಕುಮಾರ್ ಸೋನಿ ಎಂಬುವರಿಗೂ ಈ ಅನುಭವ ಆಗಿತ್ತು. ಅವರ ಮಗ ಹರ್ಷವರ್ಧನ್ ಮಾಡಿದ್ದ ಒಂದು ಎಡವಟ್ಟಿನಿಂದ ಈ ರೈತನ ಅಕೌಂಟ್ನಿಂದ 8 ಲಕ್ಷ ರೂಪಾಯಿ ವಿತ್ಡ್ರಾ ಆಗಿತ್ತು. ಬಳಿಕ ರೈತ ಆ ಹಣವನ್ನು ಮರಳಿ ಪಡೆದಿದ್ದು ಹೇಗೆ?
26ವರ್ಷದ ಹರ್ಷವರ್ಧನ್ ದೆಹಲಿಯ ದ್ವಾರಕಾದಲ್ಲಿ ವಾಸವಾಗಿದ್ದಾರೆ. ಇವರು ತಮ್ಮ ಅಪ್ಪನ ಬ್ಯಾಂಕ್ ಅಕೌಂಟ್ಗೆ ತನ್ನ ಮೊಬೈಲ್ ನಂಬರ್ ಲಿಂಕ್ ಮಾಡಿಟ್ಟುಕೊಂಡಿದ್ದರು. ಅಪ್ಪ ಪವನ್ ಕುಮಾರ್ ಸೋನಿ ಬ್ಯಾಂಕ್ ಅಕೌಂಟ್ ಇರುವುದು ರಾಜಸ್ಥಾನ ಶ್ರೀಗಂಗಾನಗರದ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ. ಇತ್ತೀಚೆಗೆ ಹರ್ಷವರ್ಧನ್ ಫೋನ್ಗೆ ಒಂದು ನೊಟಿಫಿಕೇಶನ್ ಬಂತು. ‘ನಿಮ್ಮ ಬ್ಯಾಂಕ್ ಅಕೌಂಟ್ ಬ್ಲಾಕ್ ಆಗಿದೆ, ಕೆವೈಸಿ ಅಪ್ಡೇಟ್ ಮಾಡಿ, ಅದನ್ನು ಓಪನ್ ಮಾಡಿಸಿಕೊಳ್ಳಿ’ ಎಂಬ ಸಂದೇಶ ಅದಾಗಿತ್ತು. ಹರ್ಷವರ್ಧನ್ ಮೊಬೈಲ್ನಲ್ಲಿ ಅದಾಗಲೇ ಎಸ್ಬಿಐನ ಯೊನೊ ಆ್ಯಪ್ ಇದ್ದರೂ ಕೂಡ ಆ ಕ್ಷಣದಲ್ಲಿ ಹರ್ಷ ಯಾಮಾರಿದ್ದರು.
ತನ್ನ ಬಳಿಯೇ ಇದ್ದ ಯೊನೊ ಆ್ಯಪ್ ಓಪನ್ ಮಾಡಿದ್ದರೆ, ಅವರಿಗೆ ಬ್ಯಾಂಕ್ ಅಕೌಂಟ್ ಏನೇನೂ ಆಗಿಲ್ಲ ಎಂಬುದು ಗೊತ್ತಾಗುತ್ತಿತ್ತು. ಆದರೆ ಅವರು ಮೊಬೈಲ್ಗೆ ಬಂದಿದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿದರು. ತಕ್ಷಣವೇ ಒಂದು ನಕಲಿ ಆ್ಯಪ್ ಡೌನ್ಲೋಡ್ ಆಯಿತು. ಹರ್ಷ ತನ್ನ ಯೂಸರ್ ಐಡಿ ಮತ್ತು ಪಾಸ್ವರ್ಡ್ ಹಾಕಿ ಆ್ಯಪ್ ಓಪನ್ ಮಾಡುತ್ತಿದ್ದಂತೆ, ‘ನಿಮ್ಮ ಅಕೌಂಟ್ನಿಂದ 8,03,899 ರೂಪಾಯಿ ವಿತ್ಡ್ರಾ ಆಗಿದೆ’ ಎಂಬ ಮೆಸೇಜ್ ಮೊಬೈಲ್ಗೆ ಬಂತು. ಹರ್ಷ ನಿಜಕ್ಕೂ ದಿಗಿಲಾಗಿದ್ದರು. ಮತ್ತೇನೂ ಅಲ್ಲ, ಒಂದು ಡುಪ್ಲಿಕೇಟ್ ಆ್ಯಪ್ನ ಲಿಂಕ್ ಕೊಟ್ಟಿದ್ದ ಸೈಬರ್ ಕ್ರಿಮಿಮಲ್ಗಳು, ಹರ್ಷ ಅದನ್ನು ಓಪನ್ ಮಾಡುತ್ತಿದ್ದಂತೆ ಅವರ ಫೋನ್ ಹ್ಯಾಕ್ ಮಾಡಿದ್ದರು. ಅವರ ಅಪ್ಪ, ಸೋನಿ ಅವರು ಕೃಷಿಗಾಗಿ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲವಾಗಿದ್ದ ತೆಗೆದುಕೊಂಡು ಬ್ಯಾಂಕ್ನಲ್ಲಿಟ್ಟ 8 ಲಕ್ಷಕ್ಕೂ ಅಧಿಕ ಹಣ ಅಲ್ಲಿಂದ ಮಾಯವಾಗಿತ್ತು.
ಪ್ರಮಾದ ಅರಿತುಕೊಂಡ ಹರ್ಷವರ್ಧನ್ ಕೂಡಲೇ ಗಂಗಾನಗರದಲ್ಲಿರುವ ತಮ್ಮ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದರು. ಹಾಗೇ, ಬ್ಯಾಂಕ್ಗೆ ಹೋಗಿ ಮ್ಯಾನೇಜರ್ಗೆ ವಿಷಯ ತಿಳಿಸುವಂತೆ ಹೇಳಿದರು. ಇತ್ತ ಹರ್ಷವರ್ಧನ್ ದ್ವಾರಕಾದಲ್ಲೇ ಇರುವ ಜಿಲ್ಲಾ ಸೈಬರ್ ಸೆಲ್ಗೆ ಹೋಗಿ ಆನ್ಲೈನ್ ಕಂಪ್ಲೇಂಟ್ ನೀಡಿದರು. ಇನ್ನು ಗಂಗಾನಗರ ಸಿಟಿಯಲ್ಲಿ ಪವನ್ ಕುಮಾರ್ ಮನವಿಯನ್ನು ಸ್ವೀಕರಿಸಿದ ಬ್ಯಾಂಕ್ ಮ್ಯಾನೇಜರ್ ಕ್ಷಣವೂ ತಡಮಾಡದೆ ಕಾರ್ಯಪ್ರವೃತ್ತರಾಗಿ ಸ್ಥಳೀಯ ಸೈಬರ್ ಸೆಲ್ಗೆ ಕರೆ ಮಾಡಿ ದೂರು ಕೊಟ್ಟರು. ಹಾಗೇ, ರೈತರ ಅಕೌಂಟ್ನಿಂದ ಯಾವೆಲ್ಲ ಅಕೌಂಟ್ಗೆ ಹಣ ಹೋಗಿದೆ ಎಂಬುದನ್ನು ಚೆಕ್ ಮಾಡಿ, ಕೂಡಲೇ ಆ ಅಕೌಂಟ್ಗಳನ್ನೆಲ್ಲ ಬ್ಲಾಕ್ ಮಾಡುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚಿಸಿದರು.
ರೈತರ ಖಾತೆಯಿಂದ ಒಟ್ಟು ಮೂರು ಅಕೌಂಟ್ಗಳಿಗೆ ಹಣ ಹೋಗಿತ್ತು. ಅದರಲ್ಲಿ ನೆದರ್ಲ್ಯಾಂಡ್ ಮೂಲದ, ಆನ್ಲೈನ್ ಹಣ ಪಾವತಿ ಪ್ಲಾಟ್ಫಾರ್ಮ್ ಆದ PayU ಅಕೌಂಟ್ಗೆ 6.24 ಲಕ್ಷ ರೂಪಾಯಿ, ಸಿಸಿ ಅವೆನ್ಯೂ ಅಕೌಂಟ್ಗೆ 1,54,899 ರೂ. ಮತ್ತು ಆ್ಯಕ್ಸಿಸ್ ಬ್ಯಾಂಕ್ ಅಕೌಂಟ್ಗೆ 25 ಸಾವಿರ ರೂಪಾಯಿ ವರ್ಗಾವಣೆಯಾಗಿತ್ತು. ಇದರಲ್ಲಿ PayU ಮತ್ತು CCAvenue ಎರಡೂ ಅಕೌಂಟ್ಗಳು ಡಿಜಿಟಲ್ ಪೇಮೆಂಟ್ ಕಂಪನಿಗಳೇ ಆಗಿದ್ದು, ಗ್ರಾಹಕರು ಮತ್ತು ಅವರು ವ್ಯವಹರಿಸುವ ವ್ಯಾಪಾರ-ಉದ್ಯಮಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತವೆ. ಅಂದರೆ ಗ್ರಾಹಕರು ಪಾವತಿಸಿದ ಹಣ ಸ್ವೀಕರಿಸಿ, ವ್ಯಾಪಾರಿಗಳ ಅಕೌಂಟ್ಗೆ ಪಾವತಿಸುತ್ತವೆ. ಹಣ ತಡೆಹಿಡಿಯುವಂತೆ ಬ್ಯಾಂಕ್ ಮ್ಯಾನೇಜರ್ ಈ ಎರಡೂ ಸಂಸ್ಥೆಗಳಿಗೆ ಮೇಲ್ ಮಾಡಿದ್ದರು. ಆದರೆ PayU ಆ ಹಣವನ್ನು ತಡೆಹಿಡಿದಿತ್ತು. CCAvenue ಅದಾಗಲೇ ವರ್ಗಾವಣೆ ಮಾಡಿಯಾಗಿತ್ತು. ಇನ್ನೆರಡು ದಿನಗಳಲ್ಲಿ ಸೈಬರ್ ಸೆಲ್ನಿಂದ ನಮಗೆ ಯಾವುದೇ ಮಾಹಿತಿ ಬಾರದೆ ಇದ್ದರೆ, ತಾವು ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು PayU ಕೂಡ ಹೇಳಿತ್ತು . ಅದೃಷ್ಟಕ್ಕೆ ಹಾಗೇನೂ ಆಗಲಿಲ್ಲ. ಗಂಗಾನಗರ ಸಿಟಿ ಸೈಬರ್ ಸೆಲ್ ಕಡೆಯಿಂದ PayU ಇಮೇಲ್ ಹೋದ ಬೆನ್ನಲ್ಲೇ, ಅದು 6.24 ಸಾವಿರ ರೂಪಾಯಿಯನ್ನು ವಾಪಸ್ ನೀಡಿತು.
ಇದನ್ನೂ ಓದಿ: Cyber Crime | ಅತಿ ದೊಡ್ಡ ಸೈಬರ್ ವಂಚನೆ, 41 ಕೋಟಿ ಮಂಗಮಾಯ, ಎರಡು ತಿಂಗಳಾದರೂ ಸಿಗದ ಸುಳಿವು!
ಇನ್ನು ಸಿಸಿ ಅವೆನ್ಯೂ ಮತ್ತು ಆ್ಯಕ್ಸಿಸ್ ಬ್ಯಾಂಕ್ ಮೂಲಕ ತಮಗೆ ಸಿಕ್ಕಿದ್ದ ಹಣವನ್ನು ವಂಚಕರು ಬೇರೆ ಕೆಲವು ಕಾರಣಕ್ಕೆ ಬಳಸಿಯಾಗಿತ್ತು. ಆ್ಯಕ್ಸಿಸ್ ಬ್ಯಾಂಕ್ ಅಕೌಂಟ್ಗೆ ಹೋಗಿದ್ದ ಹಣವನ್ನು ವಂಚಕರು ಎಟಿಎಂ ಮೂಲಕ ತೆಗೆದಿದ್ದರು. ಹಾಗೇ, ಸಿಸಿ ಅವೆನ್ಯೂ ಮೂಲಕ ವರ್ಗಾವಣೆಯಾಗಿದ್ದ 1,54,899 ರೂಪಾಯಿಯಲ್ಲಿ 1,20,000 ರೂಪಾಯಿಯಲ್ಲಿ ವಂಚಕರು ಕೋಲ್ಕತ್ತದ ಜಿಯೋ ಸ್ಟೋರ್ನಿಂದ ಏನೇನೋ ಖರೀದಿಸಿದ್ದೂ ಗೊತ್ತಾಯಿತು. ಇದನ್ನೆಲ್ಲ ಸ್ವತಃ ನಾವೇ ನಮ್ಮ ಸ್ನೇಹಿತರು, ಸಂಬಂಧಿಕರ ಸಹಾಯದಿಂದ ಟ್ರ್ಯಾಕ್ ಮಾಡಿದೆವು. ದೆಹಲಿ, ಕೋಲ್ಕತ್ತ ಪೊಲೀಸರಿಗೆ ವಿಷಯ ತಿಳಿಸಿದರೂ ಅವರೇನೂ ಸಹಾಯಕ್ಕೆ ಬರಲಿಲ್ಲ. ಆ್ಯಕ್ಸಿಸ್ ಬ್ಯಾಂಕ್ ಮತ್ತು ಸಿಸಿ ಅವೆನ್ಯೂ ಕಂಪನಿಗಳಿಗೆ ಪೊಲೀಸರು ಒಂದು ಮೇಲ್ ಮಾಡಿದ್ದರೆ, ನಮಗೆ ಉಳಿದ ಹಣವೂ ಸಿಗುತ್ತಿತ್ತು. ಆದರೆ ಅವರು ತುಂಬ ತಡ ಮಾಡಿದರು ಎಂದು ರೈತ ಪವನ್ ಕುಮಾರ್ ಮತ್ತು ಅವರ ಪುತ್ರ ಇಬ್ಬರೂ ಆರೋಪಿಸಿದ್ದಾರೆ. ಕಳೆದುಕೊಂಡ 8 ಲಕ್ಷ ರೂಪಾಯಿಗೂ ಅಧಿಕ ಹಣದಲ್ಲಿ, ಈ ರೈತ ಸದ್ಯ 6.24000 ಲಕ್ಷ ರೂ.ಮರಳಿ ಪಡೆದಿದ್ದಾರೆ. ಉಳಿದ ಹಣ ಮರಳಿ ಕೊಡಿಸಲು ಪೊಲೀಸರು ಪ್ರಕ್ರಿಯೆ ನಡೆಸುತ್ತಿದ್ದಾರೆ.