ನವ ದೆಹಲಿ: ಟಾಟಾ ಸನ್ಸ್‌ನ ಮಾಜಿ ಚೇರ್ಮನ್ ಹಾಗೂ ಉದ್ಯಮಿ ಸೈರಸ್ ಮಿಸ್ತ್ರಿ (Cyrus Mistry) ಅವರಿದ್ದ ಕಾರ್ ಅಪಘಾತಕ್ಕೆ ಕಾರಣಗಳೇನು ಎಂಬುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದೆ. ದೋಷಪೂರಿತ ಸೇತುವೆ ವಿನ್ಯಾಸವೇ ಸೈರಸ್ ಮಿಸ್ತ್ರಿ ಅವರಿದ್ದ ಕಾರ್ ಅಪಘಾತಕ್ಕೆ ಕಾರಣವಾಗಿದೆ ಎಂದು ತಜ್ಞರ ತಂಡ ನಿರ್ಧರಿಸಿದೆ. ಈ ಕಾರ್ ಆ್ಯಕ್ಸಿಡೆಂಟ್‌ನಲ್ಲಿ ಸೈರಸ್ ಮಿಸ್ತ್ರಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದರು.
ಸೈರಸ್ ಮಿಸ್ತ್ರಿ ಮತ್ತು ಇತರರು ಪ್ರಯಾಣಿಸುತ್ತಿದ್ದ ಮರ್ಸಿಡೆಸ್ ಬೆಂಝ್ ಎಸ್‌ಯುವಿಯಲ್ಲಿ ಅಳವಡಿಸಲಾಗಿರುವ ಎಲ್ಲ ಸುರಕ್ಷತಾ ಉಪಕರಣಗಳು ತಮ್ಮ ಕೆಲಸಗಳನ್ನು ಪೂರ್ತಿ ಮಾಡಿವೆ. ಆದರೆ, ಕಾರಿನ ಹಿಂಬದಿಯಲ್ಲಿ ಕುಳಿತ್ತಿದ್ದ ವ್ಯಕ್ತಿಗಳು ಸೀಟ್ ಬೆಲ್ಟ್ ಹಾಕಿಕೊಳ್ಳದ್ದರಿಂದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಒಂದೊಮ್ಮೆ ಸೀಟು ಬೆಲ್ಟ್ ಹಾಕಿಕೊಂಡಿದ್ದರೆ ಮಾರಣಾಂತಿಕ ಗಾಯಗಳಾಗುತ್ತಿರಲಿಲ್ಲ ಎಂಬ ನಿರ್ಧಾರಕ್ಕೆ ತಜ್ಞರ ತಂಡ ಬಂದಿದೆ.
ಮಹಾರಾಷ್ಟ್ರ ಪೊಲೀಸ್, ರಸ್ತೆ ಸಾರಿಗೆ ಇಲಾಖೆ ಸೇರಿದಂತೆ ಇತರ ಅಧಿಕಾರಿಗಳನ್ನು ಒಳಗೊಂಡಿರುವ ತಂಡವು, ಅಪಘಾತ ನಡೆದ ಸ್ಥಳ ಪರಿಶೀಲನೆ ನಡೆಸಿದೆ. ಅಪಘಾತಕ್ಕೀಡಾದ ಕಾರ್ ಅತಿ ವೇಗದಲ್ಲಿತ್ತು. ಆ್ಯಕ್ಸಿಡೆಂಟ್‌ಗೆ ಮೂಲಸೌಕರ್ಯದ ಸಮಸ್ಯೆಯೇ ಕಾರಣವಾಗಿದೆ ಎಂಬುದು ಪರೀಕ್ಷೆಯ ವೇಳೆ ಗೊತ್ತಾಗಿದೆ. ಸೇತುವೆಯ ಮೋಟುಗೋಡೆಯು ರಸ್ತೆಯ ಶೌಲ್ಡರ್ ಲೇನ್‌ನತ್ತ ಚಾಚಿಕೊಂಡಿದೆ. ಈ ವಿನ್ಯಾಸವು ದೋಷಪೂರಿತವಾಗಿದೆ ಎಂದು ತಂಡ ಹೇಳಿದೆ. ಈ ತಂಡದಲ್ಲಿ ಸೇವ್‌ಲೈಪ್ ಫೌಂಡೇಷನ್, ಐಐಟಿ ಖರಗ್‌ಪುರದ ಇಬ್ಬರು ತಜ್ಞರು ಕೂಡ ಇದ್ದಾರೆ.
ಅಪಘಾತಕ್ಕೀಡಾದ ಕಾರಿನ ಹಿಂಬದಿಯಲ್ಲಿ ಕುಳಿತ್ತಿದ್ದ ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಳೆ ಅವರು ಸೀಟ್ ಬೆಲ್ಟ್ ಹಾಕಿಕೊಂಡಿರಲಿಲ್ಲ. ಒಂದು ವೇಳೆ, ಸೀಟ್ ಬೆಲ್ಟ್ ಹಾಕಿಕೊಂಡಿದ್ದರೆ ಅವರಿಗೆ ತರಚು ಗಾಯಗಳಾಗುತ್ತಿದ್ದವು. ಸೀಟಲ್ ಬೆಲ್ಟ್ ಉತ್ತಮವಾಗಿದ್ದವು ಮತ್ತು ಅವು ತಮ್ಮ ನಾರ್ಮಲ್ ಸ್ಥಾನದಲ್ಲಿದ್ದವು ಎಂಬುದು ಪರೀಕ್ಷೆ ವೇಳೆ ಗೊತ್ತಾಗಿದೆ ಎಂದು ವಿಧಿವಿಜ್ಞಾನ ತಂಡ ತಿಳಿಸಿದೆ.
ತನಿಖಾ ತಂಡಕ್ಕೆ ಸಹಕಾರ- ಮರ್ಸಿಡೆಸ್ ಬೆಂಜ್
ಉದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ಕಾರ್ ಅಪಘಾತ ಸಂಬಂಧ ತನಿಖೆ ನಡೆಯುತ್ತಿದೆ. ತನಿಖಾ ತಂಡದ ಜತೆಗೆ ಸಹಕಾರ ನೀಡಲಾಗುವುದು ಎಂದು ಮರ್ಸಿಡೆಸ್ ಬೆಂಜ್ ಇಂಡಿಯಾ ಕಂಪನಿಯು ಹೇಳಿಕೆ ನೀಡಿದೆ. ಕಾರ್ ಅಪಘಾತ ಹೇಗೆ ಸಂಭವಿಸಿತು, ತಾಂತ್ರಿಕ ಕಾರಣಗಳೇನಾದರೂ ಇವೆಯೇ, ಅತಿ ವೇಗ ಕಾರಣವಾಯಿತೇ ಎಂಬಿತ್ಯಾದಿ ನಿಟ್ಟಿನಲ್ಲಿ ವಿಧಿವಿಜ್ಞಾನ ತಂಡವು ತನಿಖೆ ನಡೆಸುತ್ತಿದೆ.
ಇದನ್ನೂ ಓದಿ | Cyrus Mistry Death | ಸೈರಸ್ ಮಿಸ್ತ್ರಿ: ಉದ್ಯಮ ಜಗತ್ತನ್ನು ಬಿಟ್ಟು ನಡೆದ ದಿಗ್ಗಜ