Site icon Vistara News

Fire Accident : ಗಾಢ ನಿದ್ರೆಯಲ್ಲಿರುವಾಗಲೇ ಸಿಲಿಂಡರ್‌ ಸ್ಫೋಟ; ಬೆಂಕಿಯ ಕೆನ್ನಾಲಿಗೆಗೆ ಐವರು ಗಂಭೀರ

cylinder blast in Bengaluru

ಬೆಂಗಳೂರು: ಬೆಂಗಳೂರಿನ ಸಂಪಿಗೇಹಳ್ಳಿ ಸಮೀಪದ ಎಂಎಸ್ ನಗರದಲ್ಲಿ ಮನೆಯೊಂದರಲ್ಲಿ ಅಡುಗೆ ಅನಿಲ ಸ್ಫೋಟಗೊಂಡು (Cylinder Blast) ಐವರು ಗಂಭೀರ ಗಾಯಗೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಒಂದೇ ಕುಂಟುಂಬದ ಐವರಿಗೆ ಶೇ.90ರಷ್ಟು ಸುಟ್ಟ ಗಾಯಗಳಿಗೆ (Fire Accident ) ತುತ್ತಾಗಿದ್ದಾರೆ.

ದಂಪತಿ ಮದನ್ ಚೌಹಾರ (32), ಪ್ರೇಮ್ ಜಾಲ(28) ಹಾಗೂ ಮಕ್ಕಳಾದ ಹಿರದ್ (12), ಪ್ರಶಾಂತ್ (06), ಅನಿತಾ (8) ಈ ಐವರು ಗಂಭೀರ ಗಾಯಗೊಂಡಿದ್ದಾರೆ. ತಡರಾತ್ರಿ ಗ್ಯಾಸ್‌ ಲಿಂಕ್‌ ಆಗಿದ್ದು, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಸಿಲಿಂಡರ್‌ ಸ್ಫೋಟಗೊಂಡಿದೆ ಎನ್ನಲಾಗಿದೆ. ನಿದ್ದೆ ಮಂಪರಿನಲ್ಲಿದ್ದವರಿಗೆ ಗಂಭೀರವಾದ ಸುಟ್ಟು ಗಾಯವಾಗಿವೆ.

ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ನೇಪಾಳ ಮೂಲದ ಕುಟುಂಬವು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸಂಪಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Lokayukta Raid : ಲಂಚಕ್ಕೆ ಕೈವೊಡ್ಡಿದ ಕೆಆರ್‌ ಆಸ್ಪತ್ರೆ ವೈದ್ಯನಿಗೆ 4 ವರ್ಷ ಶಿಕ್ಷೆ, 50 ಸಾವಿರ ರೂ. ದಂಡ

ಬಾಗಲಕೋಟೆಯಲ್ಲೂ ಸಿಲಿಂಡರ್‌ ಸ್ಫೋಟ; ಸುಟ್ಟು ಭಸ್ಮವಾದ ಫ್ಯಾಕ್ಟರಿ

ಸಿಲಿಂಡರ್ ಸ್ಫೋಟಕ್ಕೆ ಸ್ವೀಟ್, ಬಡಂಗ್ ತಯಾರಿಕ ಫ್ಯಾಕ್ಟರಿ ಸುಟ್ಟು ಭಸ್ಮವಾಗಿದೆ. ಬಾಗಲಕೋಟೆಯ ರಬಕವಿ ನಗರದದಲ್ಲಿ ಘಟನೆ ನಡೆದಿದೆ. ರಬಕವಿಯ ಕಂಟಿ ಬಸವೇಶ್ವರ ದೇವಾಲಯ ಹತ್ತಿರ ಇರುವ ಬಡಂಗ್ ಫ್ಯಾಕ್ಟರಿಯಲ್ಲಿ ಬುಧವಾರ ತಡರಾತ್ರಿ ಸಿಲಿಂಡರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮಹಮ್ಮದ್ ಹುಸೇನ್ ಗೋಕಾಕ್ ಎಂಬುವರಿಗೆ ಸೇರಿದ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡದಿಂದಾಗಿ ಅಂದಾಜು 50-60 ಲಕ್ಷ ರೂ ಹಾನಿ ಸಾಧ್ಯತೆ ಇದೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Fire Accident

ಟೆಕ್ನೋವಾ ಟೇಪ್ಸ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದಲ್ಲಿರುವ ಟೇಪ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಟೆಕ್ನೋವಾ ಟೇಪ್ಸ್ ಕಾರ್ಖಾನೆಯಲ್ಲಿ ಅಗ್ನಿ ಅವಘಡದಿಂದಾಗಿ ಕಾಟಾನ್ ಬಾಕ್ಸ್ ಮತ್ತು ಟೆಪ್ಸ್ ಎಲ್ಲವೂ ಸುಟ್ಟು ಕರಕಲಾಗಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ನಾಲ್ಕು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಲಕ್ಷಾಂತರ ರೂ.ಗಳ ಕಚ್ಚಾವಸ್ತುಗಳು ಬೆಂಕಿಗಾಹುತಿ ಆಗಿದ್ದವಿ.

ಉಡುಪಿಯಲ್ಲೂ ಅಗ್ನಿ ಅವಘಡ

ಉಡುಪಿಯ ಪಾದೂರು ಮರದ ಹುಡಿ ಗೋಡೌನ್‌ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಪಾಪು ತಾಲೂಕಿನ ಮಾದೂರಿನಲ್ಲಿರುವ ಮರದಹುಡಿ ಸಂಗ್ರಹದ ಘಟಕದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಉಡುಪಿ ಅಗ್ನಿಶಾಮಕ ದಳದವರಿಂದ ಕಾರ್ಯಾಚರಣೆ ನಡೆಸಿದ್ದರು, ಮರದ ಹುಡುಗಿ ತಗಳಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರಿಂದ ಅವಘಡ ತಪ್ಪಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version