ಬಾಗಲಕೋಟೆ: ಬಾಗಲಕೋಟೆಯ ಬನಹಟ್ಟಿ ನಗರದ ಸುಖಸಾಗರ ಹೋಟೆಲ್‌ನಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟರಿಗೆ ಬೆಂಕಿ ತಗುಲಿದೆ. ಬೆಂಕಿಯ ಕೆನ್ನಾಲಿಗೆ ಸಿಲುಕಿಗೆ ಶೇ.80ರಷ್ಟು ಸುಟ್ಟ ಗಾಯವಾಗಿದೆ.
ಅಡುಗೆ ಭಟ್ಟ ಗುರಪ್ಪ ಮಹಾಜನ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ರವಾನೆ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಬ್ಬಿನ ಗದ್ದೆ ಬೆಂಕಿಗಾಹುತಿ
ಕಲಬುರಗಿ ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಜೀಲವರ್ಶ್ ಗ್ರಾಮ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಬ್ಬಿನ ಗದ್ದೆ ಬೆಂಕಿಗಾಹುತಿ ಆಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಜೀಲವರ್ಷ್ ಗ್ರಾಮದ ಇಂದುಬಾಯಿ ಎಂಬುವರಿಗೆ ಸೇರಿದ್ದು, ಕಟಾವಿಗೆ ಬಂದು ಲಾಭದ ನಿರೀಕ್ಷೆಯಲ್ಲಿದ್ದ ರೈತ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ. ಪತಿ ಇಲ್ಲದೇ ಒಬ್ಬಂಟಿಯಾಗಿರುವ ಇಂದುಬಾಯಿ ಕಷ್ಟ ಪಟ್ಟು ಬೆಳೆದ ಬೆಳೆ ಎಲ್ಲವೂ ಬೆಂಕಿಗಾಹುತಿ ಆಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಚಿಂಚೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Road Accident : ಮಹಿಳೆ ತಲೆ ಮೇಲೆ ಹರಿದ ಕ್ಯಾಂಟರ್; ಹೆಲ್ಮೆಟ್ ಹಾಕಿದ್ದರೆ ಉಳಿಯುತ್ತಿತ್ತು ಜೀವ
ಶಿವಮೊಗ್ಗದಲ್ಲಿ ಕಾರು ಶೋ ರೂಮಿನಲ್ಲಿ ಬೆಂಕಿ
ಶಿವಮೊಗ್ಗದ ಶಂಕರಮಠದಲ್ಲಿರುವ ಹುಂಡೈ ಕಾರು ಶೋನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹುಂಡೈ ಕಾರು ಶೋ ರೂಂ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿಯ ಝಳಕ್ಕೆ ಸುಮಾರು ಏಳು ಕಾರುಗಳಿಗೆ ಹಾನಿಯಾದರೆ, ಮೂರು ಕಾರುಗಳು ಸಂಪೂರ್ಣ ಭಸ್ಮವಾಗಿವೆ. ಪಕ್ಕದ ಟಾಟಾ ಶೋ ರೂಂ ಆವರಣದಲ್ಲಿದ್ದ ನಾಲ್ಕು ಕಾರುಗಳಿಗೂ ಹಾನಿಯಾಗಿದೆ. ಕಾರು ಶೋ ರೂಂ ಮಾಲೀಕರು ವಿದೇಶ ಪ್ರವಾಸದಲ್ಲಿ ಇರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ದಾವಣಗೆರೆಯಲ್ಲಿ ಸುಟ್ಟುಕರಕಲಾದ ಅಡಿಕೆ ಗಿಡಗಳು
ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಎರಡು ಎಕರೆ ಅಡಿಕೆ ಗಿಡಗಳು ಬೆಂಕಿಗಾಹುತಿ ಆಗಿದೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಜಾನಾಯ್ಕ್ ಎನ್ನುವರಿಗೆ ಸೇರಿದ ಅಡಿಕೆ ತೋಟ ಇದಾಗಿದ್ದು, ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಎರಡು ವರ್ಷಗಳಿಂದ ಬೆಳೆಸಿದ್ದ ಅಡಿಕೆ ಗಿಡಗಳು ಸುಟ್ಟು ಹೋಗಿದೆ. ಟ್ರಾನ್ಸ್ ಫಾರ್ಮ್‌ನಿಂದ ವಿದ್ಯುತ್ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಡಿಕೆ ಗಿಡಗಳ ಜತೆ ಅಲಸಂದೆ ಬೆಳೆ ಕೂಡ ಹಾನಿಯಾಗಿದೆ. ಬರಗಾಲದಲ್ಲಿ ಈ ರೀತಿ ಘಟನೆ ನಡೆದಿದ್ದು, ರೈತರಿಗೆ ಸಂಕಷ್ಟ ಅನುಭವಿಸುವಂತಾಗಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ