Site icon Vistara News

ಅಸ್ಸಾಂ-ಮೇಘಾಲಯ ಗಡಿಯಲ್ಲಿ ಫೈರಿಂಗ್​; ಸ್ಮಗ್ಲಿಂಗ್​ ಟ್ರಕ್​ ಹಿಡಿಯುವ ಕಾರ್ಯಾಚರಣೆಯಲ್ಲಿ 6 ಜನರ ಹತ್ಯೆ

Firing in Assam Meghalaya Border 6 killed

ನವ ದೆಹಲಿ: ಅಸ್ಸಾಂ-ಮೇಘಾಲಯ ಗಡಿಭಾಗದಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಕಾಳಗದಲ್ಲಿ, ಆರು ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಐವರು ಮೇಘಾಲಯದವರಾಗಿದ್ದು, ಒಬ್ಬ ಅಸ್ಸಾಂನ ಅರಣ್ಯ ರಕ್ಷಕ ಸಿಬ್ಬಂದಿ ಎಂದು ವರದಿಯಾಗಿದೆ. ಅಸ್ಸಾಂ-ಮೇಘಾಲಯದ ಗಡಿ ಭಾಗವಾದ ಮೇಘಾಲಯದ ಪಶ್ಚಿಮ ಜೈಂಟಿಯಾ ಬೆಟ್ಟಗಳ ಮಗ್ಗುಲಲ್ಲಿರುವ ಮುಖ್ರೋಹ್​ ಎಂಬ ಹಳ್ಳಿಯಲ್ಲಿ ಘಟನೆ ಈ ಘಟನೆ ನಡೆದಿದ್ದು, ಆ ಗಡಿಭಾಗದಲ್ಲಿರುವ ಎಲ್ಲ ಹಳ್ಳಿಗಳಲ್ಲೂ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮೇಘಾಲಯದಲ್ಲಿ ಒಟ್ಟು ಏಳು ಜಿಲ್ಲೆಗಳಲ್ಲಿ 48ಗಂಟೆಗಳ ಅವಧಿಗೆ ಇಂಟರ್​ನೆಟ್​ ಕಡಿತಗೊಳಿಸಲಾಗಿದೆ. ಇದು ಎರಡು ರಾಜ್ಯಗಳ ನಡುವಿನ ಗಡಿಯಲ್ಲಾದ ಘಟನೆ ಆಗಿದ್ದರಿಂದ ಪರಿಸ್ಥಿತಿ ಇನ್ನಷ್ಟು ಉಲ್ಬಣಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಅಸ್ಸಾಂ ಪ್ರದೇಶ ಪ್ರವೇಶ ಮಾಡಿದ್ದ ಟ್ರಕ್​ವೊಂದರಲ್ಲಿ ಮರದ ತುಂಡುಗಳ ಕಳ್ಳಸಾಗಣೆ ನಡೆಯುತ್ತಿತ್ತು. ಆ ಟ್ರಕ್​​ನ್ನು ಅಸ್ಸಾಂ ಅರಣ್ಯ ಇಲಾಖೆ ಸಿಬ್ಬಂದಿ ತಡೆಯಲು ಪ್ರಯತ್ನ ಮಾಡಿದರು. ಆದರೆ ಟ್ರಕ್​ ಡ್ರೈವರ್​ ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಹೋದ. ಆ ಟ್ರಕ್​​ನ್ನು ಅಸ್ಸಾಂ ಫಾರೆಸ್ಟ್ ಸಿಬ್ಬಂದಿ ಬೆನ್ನಟ್ಟಿದ್ದರು. ಅಂತಿಮವಾಗಿ ಮೇಘಾಲಯದ ಮುಖ್ರೋಹ್​ ಹಳ್ಳಿ ಬಳಿ ಆ ಲಾರಿಯ ಟೈಯರ್​​ಗೆ ಅಸ್ಸಾಂ ಅರಣ್ಯ ಸಿಬ್ಬಂದಿ ಗುಂಡು ಹೊಡೆದು, ಪಂಚರ್ ಮಾಡಿದರು. ಅಷ್ಟರಲ್ಲಿ ಮೇಘಾಲಯದ ಆ ಭಾಗದ ಸ್ಥಳೀಯರು ವಿವಿಧ ಮಾರಕಾಸ್ತ್ರಗಳೊಂದಿಗೆ ಆಗಮಿಸಿ ಅಸ್ಸಾಂ ಪೊಲೀಸ್​ ಮತ್ತು ಅರಣ್ಯ ಸಿಬ್ಬಂದಿಯನ್ನು ಸುತ್ತುವರಿದಿದ್ದಾರೆ. ಅವರು ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾದಾಗ ಅಸ್ಸಾಂ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಅಲ್ಲಿನವರ ದಾಳಿಗೆ ಅಸ್ಸಾಂ ಅರಣ್ಯ ಸಿಬ್ಬಂದಿ ಮೃತಪಟ್ಟಿದ್ದು, ಅಸ್ಸಾಂ ಪೊಲೀಸರ ಗುಂಡಿನ ದಾಳಿಗೆ ಅಲ್ಲಿನ ಸ್ಥಳೀಯರು ಐವರು ಪ್ರಾಣ ತೆತ್ತಿದ್ದಾರೆ. ಇಷ್ಟೆಲ್ಲ ಆಗಿದ್ದು, ಇಂದು ಮುಂಜಾನೆ 5ಗಂಟೆ ಹೊತ್ತಿಗೆ ಎನ್ನಲಾಗಿದೆ.

ಈ ಘಟನೆ ಬಗ್ಗೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್​ ಸಂಗ್ಮಾ ಪ್ರತಿಕ್ರಿಯೆ ನೀಡಿ ‘ಇದೊಂದು ದುರಂತ. ಅಸ್ಸಾಂ ಪೊಲೀಸರೇ ಮೊದಲು ಗುಂಡು ಹಾರಿಸಿದ್ದು’ ಎಂದು ಹೇಳಿದ್ದಾರೆ. ಅಸ್ಸಾಂ-ಮೇಘಾಲಯದ ಮಧ್ಯೆ ಮೊದಲಿನಿಂದಲೂ ಗಡಿ ಸಮಸ್ಯೆ ಇದೆ. 1972ರಲ್ಲಿ ಅಸ್ಸಾಂ ವಿಭಜನೆಯಾಗಿ ಮೇಘಾಲಯ ಸೃಷ್ಟಿಯಾದಾಗಿನಿಂದಲೂ 884 ಕಿಮೀ ಉದ್ದದ ಅಂತರ್​ ರಾಜ್ಯ ಗಡಿ ವಿವಾದ ಎರಡೂ ರಾಜ್ಯಗಳ ನಡುವೆ ಇತ್ತು. ಇದು ಆಗಾಗ ಉಲ್ಬಣವಾಗಿ, ವಿಕೋಪ, ಗಲಭೆ, ಹಿಂಸಾಚಾರಕ್ಕೆ ಕಾರಣವಾಗುತ್ತಿತ್ತು. ಗಡಿ ಭಾಗದ 12 ಪ್ರದೇಶಗಳಲ್ಲಿ ಇದ್ದ ವಿವಾದಗಳ ಪೈಕಿ ಆರು ಪ್ರದೇಶಗಳ ವಿವಾದವನ್ನು ಇದೇ ವರ್ಷ ಮಾರ್ಚ್​ ತಿಂಗಳಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಗೃಹ ಸಚಿವ ಅಮಿತ್​ ಶಾ ಸಮ್ಮುಖದಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕುವ ಮೂಲಕ ಬಗೆಹರಿಸಿಕೊಂಡಿದ್ದರು. ಆದರೆ ಈಗ ಮತ್ತೆ ಗಡಿಯಲ್ಲಿ ನಡೆದ ಈ ಫೈರಿಂಗ್​ ಉದ್ವಿಗ್ನತೆ ಸೃಷ್ಟಿಸಿದೆ.

ಇದನ್ನೂ ಓದಿ: ಉಗ್ರ ಚಟುವಟಿಕೆ; ಅಸ್ಸಾಂನಲ್ಲಿ ಮದರಸಾವನ್ನು ನೆಲಸಮ ಮಾಡಿದ ಜಿಲ್ಲಾಡಳಿತ

Exit mobile version