Site icon Vistara News

ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಐವರ ಸಾವು, ನಾಲ್ವರಿಗೆ ಗಾಯ

Accident

ಕೊಪ್ಪಳ: ಸ್ಕಾರ್ಪಿಯೊಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಐವರು ದಾರುಣವಾಗಿ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಕೂಪ್ಪಳದಲ್ಲಿ ನಡೆದಿದೆ.

ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರದ ಟಾಯ್ ಕ್ಲಸ್ಟರ್ ಬಳಿ ತಡರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ. ಶನಿವಾರ ರಾತ್ರಿ ಸುಮಾರು 10.30 ರ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ದೇವಪ್ಪ ಕೊಪ್ಪದ (62), ಗಿರಿಜಮ್ಮ (45), ಶಾಂತಮ್ಮ (32), ಪಾರ್ವತಮ್ಮ (32) ಹಾಗೂ ಕಸ್ತೂರಿ (22) ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಪಲ್ಲವಿ (28), ಪುಟ್ಟರಾಜ (07), ಸ್ಕಾರ್ಪಿಯೋ ಚಾಲಕ ಹರ್ಷವರ್ಧನ (ಸಿರಿಯಪ್ಪ) (35) ಮತ್ತು ಭೂಮಿಕಾ (05) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತರು ಮತ್ತು ಗಾಯಾಳುಗಳು ಒಂದೇ ಕುಟುಂಬದ ಸಂಬಂಧಿಕರಾಗಿದ್ದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದವರು ಎಂದು ತಿಳಿದು ಬಂದಿದೆ.

ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಬಿನ್ನಾಳ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version