ಮೊರಾದಾಬಾದ್: ದಟ್ಟಕಾಡಿನ ಮಧ್ಯೆ ಐವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 15 ವರ್ಷದ ಯುವತಿ, ಅವರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ಸುಮಾರು 2 ಕಿಮೀ ದೂರ ಬೆತ್ತಲಾಗಿ ಓಡಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಆಕೆ ಓಡುವ ವಿಡಿಯೋ ಕೂಡ ವೈರಲ್ ಆಗಿದೆ. ಹುಡುಗಿಯ ಮೇಲೆ ಅತ್ಯಾಚಾರ ನಡೆದಿದ್ದು ಸೆಪ್ಟೆಂಬರ್ 1ರಂದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಸೆಪ್ಟೆಂಬರ್ 7. ಅದಾದ ಬಳಿಕ 13 ದಿನಗಳ ನಂತರ ಪೊಲೀಸರು ಮೊದಲ ಆರೋಪಿಯನ್ನಷ್ಟೇ ಬಂಧಿಸಿದ್ದು, ಇನ್ನೂ ನಾಲ್ವರು ಬಾಕಿ ಇದ್ದಾರೆ.
ಸೆಪ್ಟೆಂಬರ್ 1ರಂದು ರಾತ್ರಿ ಹುಡುಗಿ ತನ್ನ ನೆರೆ ಊರಿನ ಜಾತ್ರೆ ನೋಡಲು ಸ್ನೇಹಿತೆಯೊಟ್ಟಿಗೆ ಹೋಗಿದ್ದಳು. ಸಂಜೆ ಎಂಟುಗಂಟೆ ಹೊತ್ತಿಗೆ ಆಕೆ ಒಬ್ಬಳೇ ವಾಪಸ್ ಮನೆಗೆ ಹೋಗುತ್ತಿದ್ದಾಗ, ಎರಡು ಬೈಕ್ಗಳಲ್ಲಿ ಬಂದ ಐವರು ಯುವಕರು ಹುಡುಗಿಯನ್ನು ಅಪಹರಣ ಮಾಡಿಕೊಂಡು, ಸೈಯದ್ಪುರ್ ಖಾದರ್ ಏರಿಯಾದಲ್ಲಿರುವ ದಟ್ಟ ಕಾಡಿಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಅವಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಬಳಿಕ, ಬಟ್ಟೆಯನ್ನು ಸಂಪೂರ್ಣ ಮಾಡಿ ಬೆತ್ತಲುಗೊಳಿಸಿದ್ದಾರೆ. ತೀವ್ರ ರಕ್ತಸ್ರಾವ ಆಗುತ್ತಿದ್ದ ಆಕೆ ಹೇಗೋ ತಪ್ಪಿಸಿಕೊಂಡು ಬೆತ್ತಲೆ ಸ್ಥಿತಿಯಲ್ಲೇ ಓಡಿ ಬಂದಿದ್ದಾಳೆ. ಹಾಗೆ ಅವಳು ಬೆತ್ತಲಾಗಿ ರಸ್ತೆ ಮೇಲೆ ಬರುತ್ತಿದ್ದಾಗ ಅನೇಕರು ಅವಳೊಬ್ಬ ಹುಚ್ಚಿ ಎಂದು ಭಾವಿಸಿ ಕಲ್ಲು ಎಸೆದಿದ್ದಾರೆ. ಹುಡುಗಿಯ ಚಿಕ್ಕಪ್ಪ ಪೊಲೀಸರಿಗೆ ನೀಡಿದ ದೂರಿನಲ್ಲಿ ಇದೆಲ್ಲವನ್ನೂ ಉಲ್ಲೇಖಿಸಿದ್ದಾರೆ.
ಹೀಗೆ ರಾತ್ರಿ ಬೆತ್ತಲಾಗಿ ಬಂದು ಮನೆ ಸೇರಿದ ಹುಡುಗಿ ಅಂದು ತನ್ನ ಅಕ್ಕನ ಬಳಿ ವಿಷಯ ಹೇಳಿಕೊಂಡು ಅತ್ತಿದ್ದಳು. ಅದಾಗಿ ಆರು ದಿನಗಳ ನಂತರ ಚಿಕ್ಕಪ್ಪ ರಾಮ್ ಅವತಾರ್ಗೆ ವಿಷಯ ತಿಳಿಸಿದ್ದಾರೆ. ರಾಮ್ ಕೂಡಲೇ ಆಕೆಯನ್ನು ಕರೆದುಕೊಂಡು ಭೋಜ್ಪುರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ನಿತಿನ್, ಕಪಿಲ್, ಅಜಯ್, ಇಮ್ರಾನ್, ನೌಶೆ ಅಲಿ ಎಂದು ಗುರುತಿಸಲಾಗಿದೆ. ಅದರಲ್ಲಿ ನೌಶೆ ಅಲಿ ಬಂಧಿತನಾಗಿದ್ದಾನೆ.
ಪೊಲೀಸರು ಹೇಳೋದೇನು?
ಈ ಘಟನೆ ಸ್ಥಳೀಯವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ರೇಪ್ ಆಗಿ 15ದಿನಗಳಾದರೂ ಇನ್ನೂ ಒಬ್ಬಾತನಷ್ಟೇ ಬಂಧಿತನಾಗಿದ್ದಾನೆ ಎಂದು ಅಲ್ಲಿನ ಜನ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೇ ಪೊಲೀಸರು ಹೇಳಿಕೆ ನೀಡಿದ್ದು, ‘ಹುಡುಗಿ ಸ್ವಲ್ಪಮಟ್ಟಿಗೆ ಮಾನಸಿಕ ಅಸ್ವಸ್ಥೆ. ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಇನ್ನೂ ವರದಿ ಬಂದಿಲ್ಲ, ಅತ್ಯಾಚಾರ ಆಗಿದ್ದು ದೃಢಪಟ್ಟಿಲ್ಲ. ಹಾಗಿದ್ದಾಗ್ಯೂ ಒಬ್ಬಾತನನ್ನು ಅರೆಸ್ಟ್ ಮಾಡಿದ್ದೇವೆ. ಹೆಚ್ಚಿನ ತನಿಖೆ ನಡೆಸುತ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ: Viral video| ಅಂಗಡಿಗೆ ನುಗ್ಗಿ ಎರಡು ಚಾಕೊಲೇಟ್ ಎಗರಿಸಿ ಓಡಿದ ಕರಡಿ!