ಬೆಂಗಳೂರು: ಇದು ರಂಗಿನ ದುನಿಯಾ. ಒಂದೊಳ್ಳೆ ನೇಮು ಫೇಮು (Fraud Case) ನಮ್ಮ ಪಾಲಿಗೂ ಇರಲಿ ಎನ್ನುವುದು ಹಲವರ ಆಸೆ. ಆದರೆ, ಕಲಾವಿದೆ ಆಗಬೇಕು ಎಂದು ಬಂದವಳ ಬಾಳಲ್ಲಿ ಆಗಿದ್ದೇ ಬೇರೆ. ಸಿನಿಮಾ ಚಾನ್ಸ್ ಕೊಡಿಸ್ತೀನಿ ಎಂದು ನಂಬಿಸಿದ್ದ ನಟನೊಬ್ಬ ,ಖಾಸಗಿ ವಿಡಿಯೊ ಚಿತ್ರೀಕರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ. ಇದೀಗ ನಟನ ವಿರುದ್ಧ ದೂರು ದಾಖಲಾಗಿದೆ. ಯುವತಿ ನೀಡಿದ ಮಾಹಿತಿ ಆಧರಿಸಿ ಸಂತೋಷ್ ಎಂಬಾತನ ವಿರುದ್ಧ ಜ್ಞಾನಭಾರತಿ ರಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕನ್ನಡ, ತಮಿಳಿನಲ್ಲಿ ಸಣ್ಣಪುಟ್ಟ ಪಾತ್ರ ಮಾಡಿರುವ ಸಂತೋಷ್ ,2019ರಲ್ಲಿ ಯುವತಿಯನ್ನು ಆಕೆಯ ಸ್ನೇಹಿತೆ ಮೂಲಕ ಪರಿಚಯ ಮಾಡಿಕೊಂಡಿದ್ದ. ಬಳಿಕ ಸಿನಿಮಾದಲ್ಲಿ ಅವಕಾಶ ಕೊಡಿಸ್ತೀನಿ ಎಂದು ಹಲವೆಡೆ ಸುತ್ತಾಡಿಸಿ ಪ್ರೀತಿ ನಾಟಕ ಆಡಿದ್ದ. ಬಳಿಕ ಯುವತಿಯನ್ನು ಗೋವಾಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದನಂತೆ. ಬಳಿಕ ನಾವಿಬ್ಬರು ಮದುವೆ ಆಗೋಣ ಎಂದು ಯುವತಿಗೆ ಹೇಳಿದ್ದ. ಯುವತಿ ಕೂಡ ಸಂತೋಷ್ ಮದುವೆ ಪ್ರಪೋಸಲ್‌ಗೆ ಓಕೆ ಎಂದಿದ್ದಳು. ಆದರೆ, ಪೀತಿ, ಮದುವೆ ಎಂದು ನಾಟಕವಾಡಿ ಸಂತೋಷ್ ನಂಬಿಸಿ ಹಲವೆಡೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅಷ್ಟೇ ಅಲ್ಲ ಖಾಸಿಗಿ ಫೋಟೊ ವಿಡಿಯೊಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಟ್ಟುಕೊಂಡಿದ್ದಾನೆ. ಸಾಲದಕ್ಕೆ ಯುವತಿಗೆ ತಿಳಯದ ಹಾಗೆ ಮತ್ತೊಂದು ವಿವಾಹವಾಗಿದ್ದಾನೆ. ಆತನ ಮನೆ ಬಳಿ ಹೋಗಿ ಯುವತಿ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಸಂತ್ರಸ್ತ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ನೀಡಿದ್ದರೂ ಕ್ಯಾರೆ ಎನ್ನದ ಜ್ಞಾನಭಾರತಿ ಪೊಲೀಸರು ಇಲ್ಲಿಯವರೆಗೂ ಸಂತೋಷ್ ತಂಟೆಗೆ ಹೋಗಿಲ್ವಂತೆ. ಯುವತಿ ಹೋಗಿ ಸರ್ ಕೇಸ್ ಏನಾಯ್ತು? ಎಂದು ವಿಚಾರಿಸಿದರೆ, ನೋಟಿಸ್ ಕೊಡ್ತೀವಿ ಅಂತಿದ್ದಾರಂತೆ. ಹೀಗಾಗಿ ಕಳೆದ ಆರು ತಿಂಗಳಿಂದ ನ್ಯಾಯಕ್ಕಾಗಿ ಯುವತಿಯ ಅಲೆದಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Fraud Case: ಒಂದು ಸ್ಕ್ರೀನ್‌ಶಾಟ್ ತೋರಿಸಿ ಹತ್ತಾರು ಜನರಿಗೆ ವಂಚಿಸಿದ ಖದೀಮ ಕ್ಯಾಬ್ ಡ್ರೈವರ್!
ಮೂಲಗಳ ಪ್ರಕಾರ ಸಂತ್ರಸ್ತ ಯುವತಿ 6 ತಿಂಗಳ ಹಿಂದೆಯೂ ಆತನ ವಿರುದ್ಧ ದೂರು ನೀಡಿದ್ದಳು. ಆದರೆ ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಅತ್ತಿಬೆಲೆ ಠಾಣೆಗೆ ಪ್ರಕರಣ ವರ್ಗಾವಣೆ ಆಗಿತ್ತು. ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮತ್ತೆ ಹಲ್ಲೆ ಮಾಡಿರುವ ಕಾರಣ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೆಬ್ರವರಿ 14ರಂದು ಯುವತಿ ಮನೆ ಬಳಿ ಬಂದಿದ್ದ ಸಂತೋಷ್ ಯುವತಿಯ ಖಾಸಗಿ ಫೋಟೊ, ವಿಡಿಯೋ ಇಟ್ಟುಕೊಂಡು ಕರೆದಾಗ ಬರಬೇಕು, ಇಲ್ಲದಿದ್ದರೆ ವಿಡಿಯೊ ಲೀಕ್ ಮಾಡುತ್ತೇನೆ ಎಂದು ಬೆದರಿಕೆ ಕೂಡ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.