Site icon Vistara News

ಹತ್ಯೆಯಾಗಿದ್ದ ಹುಡುಗಿ ಮತ್ತೆ ಕಾಣಿಸಿಕೊಂಡಳು!;ಶವ ಗುರುತಿಸಲು ಪಾಲಕರೇ ಎಡವಿದರು, ಪೊಲೀಸರಿಗೆ ಗೊಂದಲ

Crime Image

ಆಗ್ರಾ: 2015ರಲ್ಲಿ ಹತ್ಯೆಯಾಗಿದ್ದಾಳೆ ಎಂದು ಹೇಳಲಾದ ಹುಡುಗಿ ಈಗ ಬದುಕಿರುವುದು ಬೆಳಕಿಗೆ ಬಂದಿದೆ. ಹಾಗೇ ಈ ಕೇಸ್​ ತನಿಖೆಯನ್ನು ಪೊಲೀಸರು ಮತ್ತೆ ಕೈಗೆತ್ತಿಕೊಂಡಿದ್ದಾರೆ. ಈ ಹುಡುಗಿ (ಈಗ ಬದುಕಿರುವ) ಹತ್ಯೆ ಕೇಸ್​​ನ ಆರೋಪ ಹೊತ್ತು ಯುವಕನೊಬ್ಬ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಸದ್ಯ ಪೊಲೀಸರೇ ಕೇಸ್​ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ.

2015ರಲ್ಲಿ ಉತ್ತರ ಪ್ರದೇಶದ ಅಲಿಗಢ್​​ನಲ್ಲಿ 14 ವರ್ಷದ ಹುಡುಗಿಯೊಬ್ಬಳು ನಾಪತ್ತೆಯಾಗಿದ್ದಳು. ಈ ಬಗ್ಗೆ ಪಾಲಕರು ಪೊಲೀಸರಿಗೆ ದೂರು ಕೊಟ್ಟಿದ್ದರು. ಕೆಲ ದಿನಗಳ ಬಳಿಕ 14 ವರ್ಷದ ಹುಡುಗಿಯೊಬ್ಬಳ ಮೃತದೇಹ ಆಗ್ರಾದಲ್ಲಿ ಪತ್ತೆಯಾಗಿತ್ತು. ಇದೇ ಹುಡುಗಿ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದ ಅಲಿಗಢ್​ ಪೊಲೀಸರು ಪಾಲಕರನ್ನು ಕರೆದುಕೊಂಡು ಹೋಗಿದ್ದರು. ಮೃತದೇಹ ನೋಡಿದ ಪಾಲಕರು, ಈಕೆ ನಮ್ಮ ಮಗಳೇ ಎಂದು ಒಪ್ಪಿಕೊಂಡಿದ್ದರು. ಹಾಗೇ ಅವರ ನೆರೆಮನೆಯ ಹುಡುಗನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ವಿಚಾರಣೆ ನಡೆಸಿದ ನಂತರ ಆ ಯುವಕನ ಮೇಲೆ ಪೊಲೀಸರು ಅಪಹರಣ ಮತ್ತು ಕೊಲೆ ಕೇಸ್​ ದಾಖಲು ಮಾಡಿದ್ದರು. ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪವೂ ಸಾಬೀತಾಗಿ ಅವನ ವಿರುದ್ಧ ಪೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಂಡು, ಜೈಲಿಗೆ ಕಳಿಸಿದ್ದರು.

ಆದರೆ ಈ ಕೇಸ್​​ಗೆ ವಿಚಿತ್ರ ತಿರುವು ಸಿಕ್ಕಿದೆ. ಆ ಹುಡುಗಿ ಬದುಕಿರುವುದು ಬೆಳಕಿಗೆ ಬಂದಿದೆ. ಆರೋಪಿ ಯುವಕನ ಕುಟುಂಬದವರ ಕಣ್ಣಿಗೆ ಅವಳು ಕಾಣಿಸಿದ್ದಾಳೆ. ಆರೋಪಿಯ ಕುಟುಂಬದವರು ಅಲಿಗಢ್​ ಪೊಲೀಸ್​ ಅಧಿಕಾರಿಗಳನ್ನು ಡಿಸೆಂಬರ್​ 4ರಂದು ಭೇಟಿ ಮಾಡಿ, ‘ಅಂದು ನಾಪತ್ತೆಯಾಗಿ, ಕೊಲೆಯಾಗಿದ್ದಾಳೆ ಎಂದು ಹೇಳಲಾದ ಹುಡುಗಿ ಹತ್ರಾಸ್​ನಲ್ಲಿ ಇದ್ದಾಳೆ. ಆಕೆಗೆ ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ. ಅವಳು ಕುಟುಂಬದವರ ಜತೆ ಚೆನ್ನಾಗಿಯೇ ಇದ್ದಾಳೆ’ ಎಂದು ಮಾಹಿತಿ ನೀಡಿದ್ದಾರೆ.

ಕೂಡಲೇ ಅಲಿಗಢ್​ ಪೊಲೀಸರು ಹತ್ರಾಸ್​ಗೆ ಹೋಗಿ ಹುಡುಗಿಯನ್ನು ಭೇಟಿ ಮಾಡಿದ್ದಾರೆ. ನಂತರ ಕೋರ್ಟ್​​ಗೆ ಹಾಜರು ಪಡಿಸಿ ಹೇಳಿಕೆ ಪಡೆಯಲಾಗಿದೆ. ಹಾಗೇ, ಯುವತಿಯ ಡಿಎನ್​ಎ ಪ್ರೊಫೈಲಿಂಗ್ ನಡೆಸಿ, ಅದರ ವರದಿ ಆಧಾರದ ಮೇಲೆ ಮುಂದಿನ ತನಿಖೆ ನಡೆಸುತ್ತೇವೆ. ಜೈಲಿನಲ್ಲಿದ್ದ ಆರೋಪಿ ವಿರುದ್ಧದ ಪ್ರಕರಣವನ್ನೂ ಪ್ರತ್ಯೇಕ ತನಿಖೆ ಮಾಡಲಾಗುವುದು ಎಂದು ಅಲಿಗಢ್​ ಪೊಲೀಸ್ ಅಧಿಕಾರಿ ರಾಘವೇಂದ್ರ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ದಲಿತ ಸೋದರಿಯರ ಬರ್ಬರ ಹತ್ಯೆ: ಶವ ಪರೀಕ್ಷೆ ವರದಿಯಲ್ಲೇನಿದೆ?

Exit mobile version