ಕಾಸರಗೋಡು: ಆಸ್ಪತ್ರೆಗೆ ಹೋಗಲು ಗೂಗಲ್ ಮ್ಯಾಪ್ (Google Map) ಬಳಸಿ ದಾರಿ ಹುಡುಕುತ್ತಾ ಹೋದ ಯುವಕರಿಬ್ಬರು ತಮ್ಮ ಕಾರನ್ನು ಉಕ್ಕಿ ಹರಿಯುತ್ತಿದ್ದ ನದಿಗೆ ಇಳಿಸಿದ ಘಟನೆ ಕೇರಳದ (kerala) ಕಾಸರಗೋಡು (kasaragodu) ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ವಾಹನ ಮರಕ್ಕೆ ಸಿಲುಕಿದ್ದರಿಂದ ಯುವಕರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳದ ಕಾಸರಗೋಡಿನ ಪಲ್ಲಂಚಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಕಾರಿನಲ್ಲಿ ಸಿಲುಕಿದ್ದ ಯುವಕರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಹೈದರಾಬಾದ್ ಮೂಲದ ಪ್ರವಾಸಿಗರಾದ ಯುವಕರು ಬೆಳ್ಳಂಬೆಳಗ್ಗೆ ಹತ್ತಿರದ ಆಸ್ಪತ್ರೆಗೆ ಹೋಗುತ್ತಿದ್ದರು. ಇದಕ್ಕಾಗಿ ಅವರು ಗೂಗಲ್ ನಕ್ಷೆಯನ್ನು ಬಳಸಿಕೊಂಡು ಮುಂದುವರಿಯುತ್ತಿದ್ದರು. ಎಂದು ಯುವಕರಲ್ಲಿ ಒಬ್ಬರಾದ ಅಬ್ದುಲ್ ರಶೀದ್ ತಿಳಿಸಿದ್ದಾರೆ.
ಗೂಗಲ್ ನಕ್ಷೆ ಕಿರಿದಾದ ರಸ್ತೆಯನ್ನು ತೋರಿಸಿತ್ತು. ಹೀಗಾಗಿ ಕಾರನ್ನು ಮುಂದೆ ಓಡಿಸಿದೆವು. ವಾಹನದ ಹೆಡ್‌ಲೈಟ್ ಅನ್ನು ಬಳಸಿದಾಗ ನಮ್ಮ ಮುಂದೆ ಸ್ವಲ್ಪ ನೀರು ಇದೆ ಎಂದು ಅನಿಸಿತು. ಆದರೆ ಎರಡು ಕಡೆ ನದಿ ಮತ್ತು ಮಧ್ಯದಲ್ಲಿ ಸೇತುವೆ ಇರುವುದು ಗೊತ್ತಾಗಲಿಲ್ಲ. ಸೇತುವೆಗೆ ತಡೆ ಗೋಡೆಯೂ ಇರಲಿಲ್ಲ ಎಂದು ಅವರು ತಿಳಿಸಿದರು.
ಕಾರು ಹಠಾತ್ತನೆ ನೀರಿನ ಪ್ರವಾಹಕ್ಕೆ ಸಿಲುಕಲು ಪ್ರಾರಂಭಿಸಿತು. ಆದರೆ ಅನಂತರ ನದಿಯ ದಡದಲ್ಲಿರುವ ಮರದಲ್ಲಿ ಸಿಲುಕಿಕೊಂಡಿತು. ಅಷ್ಟರಲ್ಲಾಗಲೇ ಕಾರಿನ ಬಾಗಿಲು ತೆರೆದು ವಾಹನದಿಂದ ಹೊರಬಂದು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸಂಪರ್ಕಿಸಿ ಸ್ಥಳವನ್ನು ತಿಳಿಸಿದೆವು. ಅನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಗ್ಗಗಳನ್ನು ಬಳಸಿ ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ ಎಂದು ಅವರು ವಿವರಿಸಿದರು. ನಾವು ನಮ್ಮ ಜೀವ ಉಳಿಸಿಕೊಳ್ಳಬಹುದು ಎಂದು ಕನಸಿನಲ್ಲೂ ಯೋಚಸಲಿಲ್ಲ. ಇದು ಪುನರ್ಜನ್ಮ ಎಂದು ಭಾವಿಸುತ್ತೇವೆ ಎಂದು ರಶೀದ್ ಹೇಳಿದರು.
ಇದು ಮೊದಲಲ್ಲ
ಗೂಗಲ್ ನಕ್ಷೆ ತಪ್ಪು ದಾರಿ ತೋರಿಸಿರುವುದು ಇದು ಮೊದಲಲ್ಲ. ಕಳೆದ ತಿಂಗಳು, ಹೈದರಾಬಾದ್‌ನಿಂದ ಪ್ರವಾಸಿಗರ ಗುಂಪೊಂದು ಕೊಟ್ಟಾಯಂನ ಕುರುಪ್ಪಂಥಾರ ಬಳಿ ಉಕ್ಕಿ ಹರಿಯುತ್ತಿದ್ದ ನದಿಗೆ ವಾಹನವನ್ನು ಓಡಿಸಿತ್ತು. ಸಮೀಪದ ಪೊಲೀಸ್ ಗಸ್ತು ಘಟಕ ಮತ್ತು ಸ್ಥಳೀಯ ನಿವಾಸಿಗಳ ಪ್ರಯತ್ನದಿಂದಾಗಿ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದರೂ ಅವರ ವಾಹನವು ಸಂಪೂರ್ಣವಾಗಿ ಮುಳುಗಿತ್ತು.
ಕಳೆದ ಮೇ 24ರಂದು ತಡರಾತ್ರಿ ಈ ಘಟನೆ ನಡೆದಿತ್ತು. ಅವರು ಪ್ರಯಾಣಿಸುತ್ತಿದ್ದ ರಸ್ತೆಯು ಭಾರೀ ಮಳೆಯಿಂದಾಗಿ ಹೊಳೆಯಿಂದ ಉಕ್ಕಿ ಹರಿಯುವ ನೀರಿನಿಂದ ಆವೃತವಾಗಿತ್ತು. ಪ್ರವಾಸಿಗರಿಗೆ ಈ ಪ್ರದೇಶದ ಪರಿಚಯವಿಲ್ಲದ ಕಾರಣ, ಅವರು ಗೂಗಲ್ ಮ್ಯಾಪ್ ಬಳಸಿ ಹೋಗುತ್ತಿದ್ದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರು ಯುವ ವೈದ್ಯರು ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಇದಕ್ಕೆ ಕಾರಣ ಗೂಗಲ್ ನಕ್ಷೆ ಬಳಸಿ ಅವರು ದಾರಿಯನ್ನು ಹುಡುಕಿಕೊಂಡು ಹೋಗಿ ನದಿಗೆ ಬಿದ್ದರು. ವೈದ್ಯರಾದ ಅದ್ವೈತ್ ಮತ್ತು ಅಜ್ಮಲ್ ಮೃತರು. ಕಾರಿನಲ್ಲಿದ್ದ ಇತರ ಮೂವರು ಅದೃಷ್ಟವಶಾತ್ ಪಾರಾಗಿದ್ದಾರೆ. ಚಾಲಕನು ನದಿಯನ್ನು ನೀರಿನಿಂದ ತುಂಬಿದ ರಸ್ತೆ ಎಂದು ತಪ್ಪಾಗಿ ಭಾವಿಸಿ ಮುಂದೆ ಓಡಿಸಿದ್ದರಿಂದ ಈ ದುರ್ಘಟನೆ ಸಂಭವಿಸಿತ್ತು.
ಇದನ್ನೂ ಓದಿ: IND vs SA Final: 40 ಸಾವಿರ ಅಡಿ ಎತ್ತರದಲ್ಲಿಯೂ ಮೊಳಗಿದ ವಿಶ್ವಕಪ್ ಗೆಲುವಿನ ಸಂಭ್ರಮ; ವಿಡಿಯೊ ವೈರಲ್
ಆಗಸ್ಟ್ 2022ರಲ್ಲಿ ಎರ್ನಾಕುಲಂನಿಂದ ಕುಂಬನಾಡ್‌ಗೆ ಹಿಂತಿರುಗುತ್ತಿದ್ದ ಕುಟುಂಬವೊಂದು ಕೊಟ್ಟಾಯಂ ಜಿಲ್ಲೆಯ ಪರಚಲ್ ಬಳಿ ದಾರಿ ತಪ್ಪಿ ಕಾಲುವೆಗೆ ಕಾರನ್ನು ತೆಗೆದುಕೊಂಡು ಹೋಗಿದ್ದರು. ಇದಕ್ಕೆ ಮುಖ್ಯ ಕಾರಣ ಗೂಗಲ್ ನಕ್ಷೆ ತಪ್ಪು ದಾರಿ ತೋರಿದ್ದು. ಸ್ಥಳೀಯ ನಿವಾಸಿಗಳ ತ್ವರಿತ ರಕ್ಷಣಾ ಕಾರ್ಯಾಚರಣೆಯಿಂದ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದರು.