Site icon Vistara News

3 ವರ್ಷದ ಬಾಲಕಿಯ ರೇಪ್​ ಮಾಡಿದ್ದ ಸ್ಕೂಲ್​ ಬಸ್​ ಡ್ರೈವರ್​​ನ ಮನೆ ಧ್ವಂಸಗೊಳಿಸಿದ ಭೋಪಾಲ್​ ಜಿಲ್ಲಾಡಳಿತ

Bhopal Case

ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ನರ್ಸರಿ ಬಸ್​ ಚಾಲಕ ಹನುಮಂತ್​ ಜಾಧವ್​​ಗೆ ಅಲ್ಲಿನ ಜಿಲ್ಲಾಡಳಿತ ಬಿಸಿ ಮುಟ್ಟಿಸಿದೆ. ಹನುಮಂತ್ ಈಗಾಗಲೇ ಅರೆಸ್ಟ್ ಆಗಿ ಜೈಲು ಸೇರಿದ್ದಾನೆ. ಇತ್ತ ಶಾಹ್​​ಪುರ ಏರಿಯಾದಲ್ಲಿ ಆತ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಯನ್ನು ಜಿಲ್ಲಾಡಳಿತ ಬುಲ್ಡೋಜರ್​ ಮೂಲಕ ನೆಲಸಮ ಮಾಡಿದೆ. ಶಾಹ್​ಪುರ್​ನಲ್ಲಿರುವ ವಸಂತ್​ ಕುಂಜ್​​ ಕಾಲೊನಿಯ ಉದ್ಯಾನ ಪ್ರದೇಶವನ್ನು ಅತಿಕ್ರಮಿಸಿ ಹನುಮಂತ್​ ಮನೆ ಕಟ್ಟಿಕೊಂಡಿದ್ದ. ಹೀಗಾಗಿ ಅದನ್ನು ಕೆಡವಲು ಕಂದಾಯ ಇಲಾಖೆ, ಪೊಲೀಸ್​ ಮತ್ತು ಮುನ್ಸಿಪಲ್​ ಕಾರ್ಪೋರೇಶನ್​ ಜಂಟಿಯಾಗಿ ತೀರ್ಮಾನ ತೆಗೆದುಕೊಂಡಿದ್ದವು. ಹಾಗೇ ನೆಲಸಮಕ್ಕೂ ಮೊದಲು ಮನೆ ಖಾಲಿ ಮಾಡಿಸಲಾಗಿತ್ತು.

ಹನುಮಂತ್​ ಜಾಧವ್​ ಸೆಪ್ಟೆಂಬರ್​ 8ರಂದು ಬಸ್​​ನಲ್ಲಿಯೇ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಅದೇ ಬಸ್​​ನಲ್ಲಿದ್ದ ಮಹಿಳಾ ಅಟೆಂಡೆಂಟ್​ ಊರ್ಮಿಳಾ ಸಾಹು ಎಂಬಾಕೆಯ ಮುಂದೆಯೇ ನಡೆದಿತ್ತು ದುಷ್ಕೃತ್ಯ. ಹನುಮಂತ್​​ಗೆ ಸಹಕರಿಸಿದ ಈ ಊರ್ಮಿಳಾನ್ನೂ ಪೊಲೀಸರು ಬಂಧಿಸಿದ್ದಾರೆ. ಅದೆಷ್ಟು ದಿನದಿಂದ ಆ ಪುಟ್ಟ ಹುಡುಗಿ ಮೇಲೆ ಆತ ದೌರ್ಜನ್ಯ ಎಸಗುತ್ತಿದ್ದನೋ ಏನೋ, ಆಕೆ ಮನೆಗೆ ಹೋಗಿ ತನ್ನ ಖಾಸಗಿ ಅಂಗದಲ್ಲಿ ನೋವು ಎನ್ನುತ್ತಿದ್ದಳು. ಸೆಪ್ಟೆಂಬರ್​ 8ರಂದು ಹನುಮಂತ್​ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಅಂಗಿಯನ್ನೂ ಬದಲಿಸಿ ಕಳಿಸಿದ್ದ. ಆಗ ಪಾಲಕರು ಸರಿಯಾಗಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಅವರು ಶಾಲಾ ಆಡಳಿತ ಮಂಡಳಿ ಮತ್ತು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಭೋಪಾಲ್ ಜಿಲ್ಲಾಧಿಕಾರಿ ಈ ಕೇಸ್​ನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ನರ್ಸರಿಯ ಬಸ್​ಗಳಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಕಡ್ಡಾಯವಾಗಿ ಅಳವಡಿಸಬೇಕು. ಮಹಿಳಾ ಸಿಬ್ಬಂದಿ ಇರಬೇಕು. ವಿದ್ಯಾರ್ಥಿಗಳ ಸುರಕ್ಷತೆಗೆ ಶಾಲಾ ಆಡಳಿತ ಮಂಡಳಿಯೇ ಹೊಣೆ. ನಿರ್ಲಕ್ಷ್ಯ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇನ್ನು ಹನುಮಂತ್​ ಮತ್ತು ಊರ್ಮಿಳಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್​ ದಾಖಲಾಗಿದೆ.

ಇದನ್ನೂ ಓದಿ:3 ವರ್ಷದ ಬಾಲೆಯ ಮೇಲೆ ಸ್ಕೂಲ್​ ಬಸ್​​ನಲ್ಲಿ ಅತ್ಯಾಚಾರ; ಅಂಗಿ ಬದಲಿಸಿ ಕಳಿಸಿದ್ದ ಕ್ರೂರ ಚಾಲಕ

Exit mobile version