ಲಖನೌ: ನಾವೆಷ್ಟೇ ಆಧುನಿಕ ಕಾಲದಲ್ಲಿರಲಿ, ತಂತ್ರಜ್ಞಾನ ಮುಂದುವರಿದಿರಲಿ ಮೂಢನಂಬಿಕೆಯಿಂದ ಇನ್ನೂ ಅನೇಕರು ಹೊರಬಂದಿಲ್ಲ. ಮಾಟ-ಮಂತ್ರ-ತಂತ್ರ-ಬಲಿಯಂಥ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಇದೀಗ ಉತ್ತರ ಪ್ರದೇಶದ ಪರ್ಸಾ ಎಂಬ ಗ್ರಾಮದಲ್ಲಿ 10ವರ್ಷದ ಬಾಲಕನನ್ನು ನರಬಲಿ (Human Sacrifice) ಹೆಸರಲ್ಲಿ ಹತ್ಯೆ ಮಾಡಲಾಗಿದೆ. ಈತ ಗುರುವಾರ ಬೆಳಗ್ಗೆಯಿಂದ ಕಾಣೆಯಾಗಿದ್ದ, ಎಲ್ಲೆಡೆ ಹುಡುಕಾಟ ನಡೆಸಿದ ಬಳಿಕ ರಾತ್ರಿ ಹೊತ್ತಿಗೆ, ಸಮೀಪದ ಹೊಲದ ಬಳಿ ಕತ್ತು ಕೊಯ್ದ ರೀತಿಯಲ್ಲಿ ಶವ ಪತ್ತೆಯಾಗಿತ್ತು. ಪೊಲೀಸರ ತನಿಖೆ ಬಳಿಕ ಇದೊಂದು ನರಬಲಿ ಎಂದು ಗೊತ್ತಾಗಿದೆ. ಅಷ್ಟೇ ಅಲ್ಲ, ಈ ಪುಟಾಣಿ ಬಾಲಕ ಆತನ ಸಂಬಂಧಿಕರ ಸ್ವಾರ್ಥಕ್ಕೇ ಬಲಿಯಾಗಿದ್ದಾನೆ. ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಬಾಲಕನ ಹೆಸರು ವಿವೇಕ್. ಇವನ ತಂದೆ ಕೃಷ್ಣ ವರ್ಮಾ. ಇವರ ಸಹೋದರ ಸಂಬಂಧಿಯೇ ಆದ ಅನೂಪ್ ಎಂಬಾತ ಮುಖ್ಯ ಆರೋಪಿ. ಅನೂಪ್ಗೆ ಎರಡೂವರೆ ವರ್ಷದ ಮಗನಿದ್ದಾನೆ ಮತ್ತು ಆತ ಮಾನಸಿಕವಾಗಿ ಅಸ್ವಸ್ಥ. ಎಷ್ಟೆಲ್ಲ ಚಿಕಿತ್ಸೆಯ ಬಳಿಕವೂ ಅವನ ಮಾನಸಿಕ ಅಸ್ವಸ್ಥತೆ ಸರಿ ಹೋಗಲಿಲ್ಲ. ಆಗ ಆತ ಆ ಹಳ್ಳಿಯಲ್ಲಿದ್ದ ಒಬ್ಬ ಮಂತ್ರವಾದಿಯನ್ನು ಭೇಟಿಯಾಗಿ ಪರಿಹಾರ ಕೇಳಿದ. ಆ ಮಂತ್ರವಾದಿ ನರಬಲಿಗೆ ಸಲಹೆ ಕೊಟ್ಟ ಮತ್ತು ಹಾಗೆ ನರಬಲಿ ಕೊಟ್ಟರೆ ಖಂಡಿತ ನಿನ್ನ ಮಗ ಹುಷಾರಾಗುತ್ತಾನೆ ಎಂದು ಹೇಳಿದ.
ಇದನ್ನೂ ಓದಿ: Human Sacrifice | 17ನೇ ವರ್ಷಕ್ಕೆ ಮನೆ ಬಿಟ್ಟ ಶಫಿ ವಿಕೃತ ಕಾಮುಕ, ಹಂತಕ ಹೇಗಾದ? ಇದು ಮರ್ಡರರ್ ಮಿಸ್ಟರಿ
ಈ ಅನೂಪ್ ಮತ್ತು ಪುಟ್ಟ ಬಾಲಕ ವಿವೇಕ್ಗೆ ವರಸೆಯಲ್ಲಿ ಚಿಕ್ಕಪ್ಪನಾಗಬೇಕಾದ ಚಿಂತಾರಾಮ್ ಸೇರಿ ನರಬಲಿಯ ಪ್ಲ್ಯಾನ್ ಸಿದ್ಧಪಡಿಸಿದರು. ಹಾಗೇ, ವಿವೇಕ್ನನ್ನು ಮಂತ್ರವಾದಿ ಬಳಿ ಕರೆದುಕೊಂಡು ಹೋಗಿ ನರಬಲಿ ಕೊಟ್ಟಿದ್ದಾರೆ. ಮಾಂತ್ರಿಕ ಹೇಳಿದ ಪೂಜೆ ನಡೆಸಿ, ನರಬಲಿ ಕೊಟ್ಟಬಳಿಕ ಅವನ ಶವವನ್ನು ಹೊಲದ ಬಳಿ ಬಿಸಾಕಿ ಬಂದಿದ್ದರು. ಪೊಲೀಸ್ ವಿಚಾರಣೆಯಲ್ಲಿ ಎಲ್ಲ ವಿಷಯವೂ ಬೆಳಕಿಗೆ ಬಂದಿದೆ. ಅನೂಪ್, ಚಿಂತಾರಾಮ್ ಮತ್ತು ಮಂತ್ರವಾದಿಯನ್ನು ಪೊಲೀಸರು ಅರೆಸ್ಟ್ ಮಾಡಿ, ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಮಗನನ್ನು ಕಳೆದುಕೊಂಡ ವಿವೇಕ್ ಪಾಲಕರ ಗೋಳಾಟ ಮುಗಿಲುಮುಟ್ಟಿದೆ.