ಸಾಗರ: ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರ ಪುತ್ರಿ ರಾಜನಂದಿನಿ ಅವರ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿ, ರಾಜನಂದಿನಿ ಅವರಿಗೆ ಕೊಲೆ ಬೆದರಿಕೆ ಒಡ್ಡಿದ ಘಟನೆ ಸಾಗರದಲ್ಲಿ ನಡೆದಿದೆ.
ರಾಜನಂದಿನಿರವರು ಸಾಗರ ತಾಲೂಕಿನಾದ್ಯಂತ ಕಾಗೋಡು ತಿಮ್ಮಪ್ಪ ಫೌಂಡೇಷನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದಾರೆ.. ಇತ್ತೀಚೆಗೆ ತ್ಯಾಗರ್ತಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಅಲ್ಲಿ ಭಾಗವಹಿಸಿದವರಿಗೆ ಸಾಗರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು, ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ರಾಜನಂದಿನಿಯವರು ಊಟಕ್ಕಾಗಿ ತಮ್ಮ ಕಾರು ಬಿಟ್ಟು ಬೇರೆಯವರ ಕಾರಿನಲ್ಲಿ ತೆರಳಿದ್ದರು.
ಇದನ್ನೂ ಓದಿ: ಹುಡುಗಿ ಪೋಟೋ ತೋರಿಸಿ ಹತ್ಯೆ: ಬಿಜೆಪಿ ಕಾರ್ಯಕರ್ತನ ಸಾವಿನ ರಹಸ್ಯ ಬಯಲು
ರಾಜನಂದಿನಿ ಕಾರಿನ ಚಾಲಕ ಪ್ರಕಾಶ್ ಅವರು ಇತರರನ್ನು ಕೂರಿಸಿಕೊಂಡು ಹಿಂಬಾಲಿಸಿದ್ದರು. ಈ ನಡುವೆ ತ್ಯಾಗರ್ತಿಯ ಮಾರಿಗುಡಿ ಬಳಿಯ ಮುಖ್ಯ ರಸ್ತೆಯಲ್ಲಿ ಮಂಜು ಎಂಬಾತ ಬೈಕ್‌ನಲ್ಲಿ ಬಂದು ಪ್ರಕಾಶ್ ಚಲಾಯಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದಾನೆ. ಪ್ರಕಾಶ್ ಗೆ ಬೆದರಿಕೆ ಹಾಕಿದ್ದಲ್ಲದೆ, ರಾಜನಂದಿನಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜನಂದಿನಿ ಇತ್ತೀಚೆಗೆ ಭಾರಿ ಹಾರಾಡುತ್ತಿದ್ದಾರೆ, ಅವರನ್ನು ಸುಮ್ಮನೆ ಬಿಡಲ್ಲ. ನಾನೊಬ್ಬನೇ ಅಲ್ಲ, ನನ್ನ ಹಿಂದೆ ಬಹಳ ಜನ ಇದ್ದಾರೆ. ಅವರನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಹೋಗಿ ಹೇಳು ಎಂದು ಏಕವಚನದಲ್ಲಿ ಬೆದರಿಕೆ ಹಾಕಿದ್ದಾಗಿ ದೂರು ನೀಡಲಾಗಿದೆ.
ಇಷ್ಟೇ ಅಲ್ಲ, ಸುಮಾರು ಎಂಟು ಜನರು ನಾಲ್ಕು ಬೈಕ್ ನಲ್ಲಿ ತ್ಯಾಗರ್ತಿಯಿಂದ ಮಳ್ಳಾ ಕ್ರಾಸ್ ವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.
ಮಂಜು ಮತ್ತು ಆತನ ಸಂಗಡಿಗರ ವಿರುದ್ಧ ಪ್ರಕಾಶ್ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.