Site icon Vistara News

Money For Likes ಎಂಬ ಸೈಬರ್ ವಂಚನೆಗೆ 1 ಕೋಟಿ ರೂ. ಕಳೆದುಕೊಂಡ ಸೇನಾ ನಿವೃತ್ತ ಅಧಿಕಾರಿ; ಈ ಜಾಲದ ಬಗ್ಗೆ ಇರಲಿ ಎಚ್ಚರ

Indian Army veteran Lost over Rs 1 crore to Money For Likes

#image_title

ಪುಣೆ: ಮಹಾರಾಷ್ಟ್ರದ ಪುಣೆಯ ನಿವೃತ್ತ ಸೇನಾ ಅಧಿಕಾರಿಯೊಬ್ಬರು ಆನ್​ಲೈನ್​ ವಂಚನೆ ಜಾಲದಲ್ಲಿ ಸಿಲುಕಿ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ‘Money For Likes’ ಸ್ಕ್ಯಾಮ್​​ ಎಂಬ ಹೊಸಬಗೆಯ ಸೈಬರ್​ ವಂಚನೆಗೆ ಒಳಗಾಗಿ ಅವರು 1.1 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ನಿವೃತ್ತ ಸೇನಾ ಅಧಿಕಾರಿ ಕೊಟ್ಟ ದೂರನ್ನು ದಾಖಲಿಸಿಕೊಂಡ ಪೊಲೀಸರು ಎಫ್​ಐಆರ್ ದಾಖಲಿಸಿ ಈಗ ತನಿಖೆ ನಡೆಸುತ್ತಿದ್ದಾರೆ.

ಲೈಕ್ಸ್​ಗಾಗಿ ಹಣ ಎಂಬುದು ಒಂದು ಹೊಸ ಮಾದರಿಯ ಸೈಬರ್​ ವಂಚನೆಯಾಗಿದೆ. ಯೂಟ್ಯೂಬ್​, ವಾಟ್ಸ್​ಆ್ಯಪ್​, ಲಿಂಕ್ಡ್​ ಇನ್​ ಗಳಲ್ಲೆಲ್ಲ ಈ ಜಾಲ ಹಬ್ಬಿದೆ. ‘ನೀವು ನಮ್ಮ ಪೋಸ್ಟ್​/ವಿಡಿಯೊಗಳಿಗೆ ಲೈಕ್ಸ್​ ಕೊಟ್ಟರೆ, ನಾವದಕ್ಕೆ ಹಣ ಕೊಡುತ್ತೇವೆ’ ಎಂದು ಇವರ ಮಾತು ಶುರುವಾಗುತ್ತದೆ. ಒಂದು ಲೈಕ್ಸ್​ಗೆ 50/100/150..ಹೀಗೆ ಇಂತಿಷ್ಟು ಎಂದು ಹಣ ಫಿಕ್ಸ್​ ಮಾಡುತ್ತಾರೆ. ಬರುಬರುತ್ತ ಪ್ರೀಪೇಯ್ಡ್​ ಟಾಸ್ಕ್​ಗಾಗಿ ನೀವು ಇಷ್ಟು ಹಣವನ್ನು ನಮಗೆ ಮೊದಲು ಕೊಡಬೇಕು. ನಂತರ ಅದನ್ನೂ ಸೇರಿಸಿ, ನಿಮಗೆ ಹೆಚ್ಚಿನ ಹಣ ಕೊಡುತ್ತೇವೆ ಎಂದು ಹೇಳುತ್ತಾರೆ. ಅದನ್ನು ನಂಬಿ, ಅವರು ಕೊಡುವ ಹಣಕ್ಕಾಗಿ ನೀವೇನಾದರೂ ಅವರ ವಿಡಿಯೊ/ಪೋಸ್ಟ್​ಗಳಿಗೆ ಲೈಕ್ಸ್​ ಬಟನ್​ ಒತ್ತಲು ಶುರು ಮಾಡಿದಿರೋ, ನೀವು ವಂಚನೆಯ ಬಲೆಗೆ ಬಿದ್ದಿರಿ ಎಂದೇ ಅರ್ಥ. ಈ ನಿವೃತ್ತ ಸೇನಾ ಅಧಿಕಾರಿಗೆ ಆಗಿದ್ದೂ ಅದೇ.. 65 ವರ್ಷದ ಅವರು, ತಮ್ಮ ಜೀವಮಾನದ ಉಳಿತಾಯವನ್ನೆಲ್ಲ ಸೈಬರ್​ ವಂಚಕರಿಗೆ ಸುರಿದಿದ್ದಾರೆ.

ಸೇನಾ ನಿವೃತ್ತ ಅಧಿಕಾರಿಗೆ ಮೊದಲು ಮಹಿಳೆಯೊಬ್ಬಳು ಟೆಕ್ಸ್ಟ್​ ಮೆಸೇಜ್ ಮಾಡಿದ್ದಾಳೆ. ಅದರಲ್ಲಿ ಅವಳು ಪಾರ್ಟ್​ ಟೈಂ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾಳೆ. ಅದರೊಂದಿಗೆ ಆಕೆ ತಾನು ಥೈಲ್ಯಾಂಡ್​ನವಳು ಎಂಬ ವಿವರಣೆ ಕೊಟ್ಟಿದ್ದು, ಜತೆಗೊಂದು ಲಿಂಕ್​ ಕಳಿಸಿದ್ದಾಳೆ. ಈ ಲಿಂಕ್ ಓಪನ್​ ಮಾಡಿ, ವಿಡಿಯೊಕ್ಕೆ ಲೈಕ್​ ಕೊಟ್ಟರೆ ನಿಮಗೆ 50 ರೂಪಾಯಿ ಸಿಗುತ್ತದೆ ಎಂದು ಮೆಸೇಜ್​ನಲ್ಲಿ ಒಕ್ಕಣೆ ಬರೆದಿತ್ತು. ಹಾಗೇ, ತನ್ನ ಪ್ರತಿ ವಿಡಿಯೊಕ್ಕೂ ಲೈಕ್ಸ್ ಕೊಡಿ, ನೀವು ಕೊಡುವ ಪ್ರತಿ ಲೈಕ್ಸ್​ಗೂ ತಲಾ 50 ರೂಪಾಯಿ ನೀಡಲಾಗುವುದು. ನೀವು ವಿಡಿಯೊಕ್ಕೆ ಲೈಕ್ಸ್​ ಕೊಟ್ಟ ಸ್ಕ್ರೀನ್​ ಶಾಟ್​, ನಿಮ್ಮ ಬ್ಯಾಂಕ್​ ಅಕೌಂಟ್​ ಮತ್ತು ವಿಳಾಸದ ವಿವರವನ್ನು ನನಗೆ ಕಳಿಸಿಕೊಡಿ ಎಂದೂ ಆ ಮೆಸೇಜ್​ನಲ್ಲಿ ಬರೆಯಲಾಗಿತ್ತು. ಸೇನಾ ನಿವೃತ್ತ ಅಧಿಕಾರಿ ತಕ್ಷಣವೇ ಆ ಲಿಂಕ್​ ಪ್ರೆಸ್ ಮಾಡಿ ಲೈಕ್ಸ್ ಕೊಟ್ಟರು. ಆಕೆ ಕೇಳಿದ್ದನ್ನೆಲ್ಲ ಕೊಟ್ಟರು. ಅವರಿಗೆ 150 ರೂಪಾಯಿ ಸ್ವಾಗತ ಇನಾಮು (Welcome Bonus) ಕೂಡ ಬಂತು. ಅಷ್ಟೇ ಅಲ್ಲ ಅವರು ಕೊಟ್ಟ ಫೋನ್​ನಂಬರ್​ನ್ನು Employee Trial Group ಎಂಬ ಮೆಸೆಂಜರ್​ ಗ್ರೂಪ್​ಗೆ ಸೇರಿಸಲಾಯಿತು. ಅಲ್ಲಿಗೆ ಅವರು ಸಂಪೂರ್ಣವಾಗಿ ನಂಬಿಬಿಟ್ಟರು ಮತ್ತು ಈ ಲೈಕ್ಸ್​ ಜಾಲದ ಮತ್ತಷ್ಟು ಆಳಕ್ಕೆ ಹೋಗಲು ಶುರು ಮಾಡಿದರು.

ಇದನ್ನೂ ಓದಿ: Fraud Case: ಜಸ್ಟ್‌ ವಾಟ್ಸ್ಆ್ಯಪ್‌ ಕಾಲ್‌ನಲ್ಲೇ ಲಕ್ಷ ಲಕ್ಷ ಲೂಟಿ ಮಾಡಿದ ಸೈಬರ್‌ ಕಳ್ಳರು; ಏನಿದು ವಂಚನೆ ಕಹಾನಿ?

ವಂಚಕರು ಹೇಗಿದ್ದಾರೆಂದರೆ ಅವರು ತಮ್ಮ ಹೊಸ ‘ಗಿರಾಕಿ’ಯ ನಂಬಿಕೆ ಗಳಿಸಿಕೊಳ್ಳಲು ಖತರ್ನಾಕ್ ಐಡಿಯಾಗಳನ್ನು ಮಾಡಿದರು. Employee Trial Group ಎಂಬ ಗ್ರೂಪ್​ಗೆ ಸೇನಾ ನಿವೃತ್ತ ಅಧಕಾರಿ ಸೇರುತ್ತಿದ್ದಂತೆ ಇನ್ನೂ ಹಲವರು ತಮ್ಮ ತಮ್ಮ ವಿಡಿಯೊಗಳ ಲಿಂಕ್​ ಕಳಿಸಿ, ಲೈಕ್​ ಕೊಡುವಂತೆ ಕೇಳತೊಡಗಿದರು. ಅದಾದ ಮೇಲೆ ಪ್ರೀಪೇಯ್ಡ್​​ಗಾಗಿ 1000 ರೂಪಾಯಿ ತುಂಬಿ, ಅದು ಮುಗಿದ ಬಳಿಕ 1480 ರೂಪಾಯಿ ವಾಪಸ್ ಕೊಡುತ್ತೇವೆ ಎಂದರು. ಅದಕ್ಕೊಪ್ಪಿ ಇವರು ಹಾಗೇ ಮಾಡಿದರು. ಹಣವೂ ಬಂತು. ಕೆಲ ದಿನಗಳ ಬಳಿಕ ನಿವೃತ್ತ ಸೇನಾಧಿಕಾರಿ ಬಳಿ 3000 ರೂಪಾಯಿ ಪಾವತಿಸಿಕೊಂಡು, 4000 ರೂಪಾಯಿ ಮರುಪಾವತಿ ಮಾಡಿದರು. ಅವರನ್ನು ವಿಐಪಿ ಗ್ರೂಪ್​ಗೆ ಸೇರ್ಪಡೆಗೊಳಿಸಿದರು. ಇದೆಲ್ಲವನ್ನೂ ಅವರು ತಮ್ಮಿಂದ ವಂಚನೆಗೆ ಒಳಗಾಗುತ್ತಿರುವವರ ನಂಬಿಕೆ ಗಳಿಸಿಕೊಳ್ಳಲು ಮಾಡುತ್ತಿದ್ದರು. ಹೀಗೆ ತುಂಬ ದಿನ ಕಳೆಯಿತು.

ಒಂದು ದಿನ ಪ್ರೀಪೇಯ್ಡ್​ಗಾಗಿ ದೊಡ್ಡಮೊತ್ತದ ಹಣವನ್ನು ವಂಚಕರು ಕೇಳಿದರು. ಇಷ್ಟು ದಿನ ಹಣ ವಾಪಸ್​ ಬಂದಿತ್ತಲ್ಲ, ಸೇನಾ ನಿವೃತ್ತಾಧಿಕಾರಿ ಕಣ್ಮುಚ್ಚಿ ಅದನ್ನು ಪಾವತಿಸಿದರು. ಆದರೆ ನಂತರ ಅದನ್ನು ಮರುಪಾವತಿ ಮಾಡುವ ಸಂದರ್ಭದಲ್ಲಿ ಏನೋ ತಾಂತ್ರಿಕ ತೊಂದರೆಯ ನೆಪ ಹೇಳಿದ ವಂಚಕರು ಇನ್ನಷ್ಟು ಹಣ ಪಾವತಿ ಮಾಡುವಂತೆ ಹೇಳಿದರು. ಸುಮಾರು ಒಂದು ವಾರ ಅವರು ಹೀಗೇ ಮಾಡಿದರು. ಪ್ರತಿಸಲವೂ ಅವರು ಬೇರೆಬೇರೆ ಬ್ಯಾಂಕ್​ ಅಕೌಂಟ್ ನಂಬರ್ ಕೊಡುತ್ತಿದ್ದರು. ಸೇನಾ ನಿವೃತ್ತಾಧಿಕಾರಿ ಒಂದು ವಾರದಲ್ಲಿ 13 ಬ್ಯಾಂಕ್​ ಅಕೌಂಟ್​ಗಳಿಗೆ 26 ಬಾರಿ ಹಣ ಹಾಕಿದ್ದಾರೆ. ಈ ಮೂಲಕ 1.1 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ತಮಗೆ ವಂಚನೆಯಾಗಿದೆ ಎಂದು ಅವರಿಗೆ ಅರ್ಥವಾಗುವಷ್ಟರಲ್ಲಿ ಜೀವಮಾನದ ಉಳಿತಾಯವನ್ನು ಕಳೆದುಕೊಂಡಿದ್ದರು. ಇಷ್ಟೆಲ್ಲ ಆಗಿ, ಕಳೆದ ತಿಂಗಳು ಅಂದರೆ ಫೆಬ್ರವರಿ ಕೊನೆಯಲ್ಲಿ ಸೇನಾ ನಿವೃತ್ತ ಅಧಿಕಾರಿ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ತನಿಖೆ ಶುರು ಮಾಡಿಕೊಂಡಿದ್ದಾರೆ.

Exit mobile version