Site icon Vistara News

ಕೇರಳದಲ್ಲಿ ಹೆಚ್ಚುತ್ತಿರುವ ಹ್ಯಾಕಿಂಗ್‌, ಹ್ಯಾಕರ್‌ ಶ್ರೀಕಿಯದ್ದೇ ಕೈವಾಡ ಶಂಕೆ!

ಹ್ಯಾಕರ್‌ ಶ್ರೀಕಿ

ಕೇರಳ: ರಾಜ್ಯದಲ್ಲಿ ನಡೆದ ಬಿಟ್‌ ಕಾಯಿನ್‌ ಹಗರಣದ ಹಿಂದೆ ಕಾರ್ಯಾಚರಣೆ ನಡೆಸಿದ್ದ ಎಂದು ಹೇಳಲಾಗುತ್ತಿರುವ ಕುಖ್ಯಾತ ಹ್ಯಾಕರ್‌ ಶ್ರೀಕಿ ಅಲಿಯಾಸ್‌ ಶ್ರೀಕೃಷ್ಣನಿಗಾಗಿ ಈಗ ಕೇರಳ ಪೊಲೀಸರು ಹುಡುಕಾಡುತ್ತಿದ್ದಾರೆ. ಆದರೆ, ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಜಾಮೀನು ಪಡೆದಿರುವ ಹ್ಯಾಕರ್‌ ಶ್ರೀಕಿ ಎಲ್ಲಿದ್ದಾನೆ ಎನ್ನುವುದು ಸದ್ಯಕ್ಕೆ ಯಾರಿಗೂ ಗೊತ್ತಿಲ್ಲ!

ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಹ್ಯಾಕಿಂಗ್‌ ಅಪರಾಧಗಳು ಹೆಚ್ಚಾಗುತ್ತಿವೆ. ಬ್ಯಾಂಕ್ ಖಾತೆಗಳು, ವೆಬ್ ಸೈಟ್ ಗಳು ಹಾಗೂ ಇ ಮೇಲ್ ಖಾತೆಗಳು ಹ್ಯಾಕ್ ಆಗುತ್ತಿವೆ. ಇದರಿಂದಾಗಿ ಕೇರಳದಲ್ಲಿ ಸಾಕಷ್ಟು ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಕೃತ್ಯಗಳ ಹಿಂದೆ ಹ್ಯಾಕರ್‌ ಶ್ರೀಕಿಯದ್ದೇ ಕೈವಾಡ ಇರಬಹುದು ಎಂದು ಕೇರಳ ಪೊಲೀಸರು ಅನುಮಾನಿಸಿದ್ದಾರೆ. ಹೀಗಾಗಿ ಆತನನ್ನು ಹುಡುಕಿಕೊಂಡು ಪೊಲೀಸರ ಒಂದು ತಂಡ ರಾಜ್ಯಕ್ಕೆ ಆಗಮಿಸಿದೆ.

ನಾಲ್ವರು ಇನ್ಸ್‌ಪೆಕ್ಟರ್ ಗಳು ಹಾಗೂ ಒಬ್ಬ ಡಿವೈಎಸ್ಪಿ ಅವರನ್ನು ಒಳಗೊಂಡ ಕೇರಳ ಪೊಲೀಸ್ ಟೀಮ್ ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದು, ಸಿಸಿಬಿ ಹಾಗೂ ಸಿಐಡಿ ಸೈಬರ್ ಕ್ರೈಂ ಪೊಲೀಸರಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ.

ಹ್ಯಾಕಿಂಗ್‌ ಕ್ರಿಮಿನಲ್‌
ಹೈಸ್ಕೂಲ್‌ನಲ್ಲಿರುವಾಗಲೇ ಕಂಪ್ಯೂಟರ್‌ ಹ್ಯಾಂಕಿಂಗ್‌ ಕಲೆಯಲ್ಲಿ ಪರಿಣತಿ ಪಡೆದಿದ್ದ ಶ್ರೀಕಿ ಅಲಿಯಾಸ್‌ ಶ್ರೀಕೃಷ್ಣ ನಂತರ ಇದನ್ನು ಬೇರೆ ಬೇರೆ ವಿಧಗಳಲ್ಲಿ ವಿಸ್ತರಿಸಿದ್ದ. ಅಮೆರಿಕ, ಫ್ರಾನ್ಸ್‌, ಬಾಂಗ್ಲಾದೇಶ ಸೇರಿದಂತೆ ನಾನಾ ದೇಶಗಳ ವೆಬ್‌ ಸೈಟ್‌ಗಳನ್ನು ಹ್ಯಾಕ್‌ ಮಾಡುತ್ತಿದ್ದ. ಮುಂದೆ ಕ್ರಿಪ್ಟೋ ಕರೆನ್ಸಿಗಳಾದ ಬಿಟ್‌ ಕಾಯಿನ್‌, ಬ್ಯಾಂಕ್‌ ಖಾತೆಗಳನ್ನೂ ಹ್ಯಾಕ್‌ ಮಾಡಿ ಕೋಟ್ಯಂತರ ರೂ. ಲಪಟಾಯಿಸಿದ ಆರೋಪವಿದೆ.

ರಾಜ್ಯದಲ್ಲಿ ನಡೆದ ಬಿಟ್ ಕಾಯಿನ್ ಹಗರಣದಲ್ಲಿ ಶಾಮೀಲಾಗಿದ್ದ ಈತ ಈತನನ್ನು ಬಂಧಿಸಲಾಗಿತ್ತು. ಆತನಿಂದ 9 ಕೋಟಿ ರೂಪಾಯಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಎರಡು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದ ಶ್ರೀಕಿ ಬಳಿಕ ಎಲ್ಲಿದ್ದಾನೆ ಎಂದು ಯಾರಿಗೂ ಗೊತ್ತಿಲ್ಲ.

ಈಗ ಕೇರಳದಲ್ಲಿ ದೊಡ್ಡ ಮಟ್ಟದಲ್ಲಿ ಹ್ಯಾಕಿಂಗ್‌ ನಡೆಯುತ್ತಿರುವುದರಿಂದ ಆತನನ್ನು ಹುಡುಕಿ ಬಂದಿರುವ ಅಲ್ಲಿನ ಪೊಲೀಸರಿಗೆ ಇಲ್ಲಿನ ಪೊಲೀಸರು ಯಾವ ರೀತಿ ಸಹಕರಿಸಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ| ಸರಿಯಲಿಲ್ಲ ಕ್ರಿಪ್ಟೊ ಕರೆನ್ಸಿ ಮೇಲಿನ ತೂಗುಗತ್ತಿ!: ಕ್ರಿಪ್ಟೊ ಬಗ್ಗೆ ನಿಮಗೆಷ್ಟು ಗೊತ್ತು?

Exit mobile version