Site icon Vistara News

Killer CEO : ಸುಚನಾ ಸೇಠ್‌ ಬಂಧನವೇ ರೋಚಕ; ಪೊಲೀಸರ ಕೈಹಿಡಿದ ಕೊಂಕಣಿ

Suchana Seth was arrested by the police

ಬೆಂಗಳೂರು: ಗೋವಾದಲ್ಲಿ ತಾಯಿಯಿಂದಲೇ ಮಗನ (Goa Murder Case) ಹತ್ಯೆ ಪ್ರಕರಣಕ್ಕೆ (Mother Kills 4 Year Old Son) ಸಂಬಂಧಿಸಿದ್ದಂತೆ ಹಂತಕಿ ಸುಚನಾ ಸೇಠ್‌ಳನ್ನು (Suchana seth) ಪೊಲೀಸರು ಬಂಧನ ಮಾಡಿದ್ದೇ ರೋಚಕವಾಗಿದೆ. ಹೊಟೇಲ್ ಸಿಬ್ಬಂದಿಯ ಸಮಯಪ್ರಜ್ಞೆ ಒಂದು ಕಡೆಯಾದರೆ ಕಾರು ಚಾಲಕನ ಪಾತ್ರವು ಹಂತಕಿ ಸೆರೆಯಾಗಲು ಕಾರಣವಾಗಿದೆ.

ಹೋಟೆಲ್‌ನಲ್ಲಿದ್ದ ಸುಚನಾ ಸೇಠ್ ಮಗ ಚಿನ್ಮಯ್‌ (chinmay) ಕೊಂದು ಬಳಿಕ ಸೂಟ್ ಕೇಸ್‌ನಲ್ಲಿ ಶವವನ್ನು ತುಂಬಿಕೊಂಡು ಕಾರಲ್ಲಿ ಹೊರಟಿದ್ದಳು. ಆದರೆ ರೂಮು ಕ್ಲೀನ್‌ ಮಾಡಲು ಹೋದ ಸಿಬ್ಬಂದಿಗೆ ರಕ್ತದ ಕಲೆಗಳು ಅನುಮಾನ ಮೂಡಿಸಿದ್ದವು. ಹೀಗಾಗಿ ಸ್ಥಳೀಯ ಪೊಲೀಸರಿಗೆ ಹೋಟೆಲ್‌ ಸಿಬ್ಬಂದಿ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಸುಚನಾ ಸೇಠ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಈ ಮೊದಲೇ ಮಗನನ್ನು ಕೊಲೆ ಮಾಡುವ ಉದ್ದೇಶವನ್ನು ಹೊಂದಿದ್ದಳು ಎಂಬುದಕ್ಕೆ ಪುಷ್ಟಿಯು ಸಿಕ್ಕಿತ್ತು. ಸುಚನಾ ಸೇಠ್‌ ಹೋಟೆಲ್‌ಗೆ ನೀಡಿದ ವಿಳಾಸವು ನಕಲಿ ಎಂದು ತಿಳಿದು ಬಂದಿತ್ತು.

ಕೊಂಕಣಿ ಮಾತಾಡಿ ಕಾರು ಚಾಲಕನ ವಿಶ್ವಾಸ ಗಳಿಸಿದ ಪೊಲೀಸರು

ಹೋಟೆಲ್‌ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಕಲ್ಲಂಗೋಟ್ ಪೊಲೀಸರು ಇನ್ನೋವಾ ಕಾರು ಚಾಲಕನ ಸಂಪರ್ಕಿಸಿದ್ದರು. ನೀವು ಕಾರಿನಲ್ಲಿ ಕರೆದುಹೋಗುತ್ತಿರುವ ಮಹಿಳೆ ಬಗ್ಗೆ ಸಂಶಯವಿದೆ ಎಂದಿದ್ದರು. ಸುಚನಾ ಸೇಠ್‌ಗೆ ಹಿಂದಿ ಹಾಗು ಇಂಗ್ಲೀಷ್ ಹೊರತುಪಡಿಸಿ ಬೇರೆ ಯಾವುದೇ ಭಾಷೆ ಬರುತ್ತಿರಲಿಲ್ಲ. ಹೀಗಾಗಿ ಪೊಲೀಸರು ಕಾರು ಚಾಲಕನೊಂದಿಗೆ ಕೊಂಕಣಿಯಲ್ಲಿ‌ ಮಾತು ಆರಂಭಿಸಿ ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಸಿ, ವಿಶ್ವಾಸಕ್ಕೆ ತೆಗೆದುಕೊಂಡಿದ್ದರು.

ಸುಚನಾ ಸೇಠ್‌ಗೆ ಅನುಮಾನ ಬರದಂತೆ ಚಾಲಕ ರಾಯ್ ಜಾನ್‌ ಜತೆಗೆ ಇನ್‌ಸ್ಪೆಕ್ಟರ್‌ ಪರೇಶ್ ನಾಯ್ಕ್ ಸ್ನೇಹಿತನ ರೀತಿಯಲ್ಲೆ ಮಾತನಾಡುತ್ತಿದ್ದರು. ಸುಚನಾಗೆ ಸೇಠ್‌ಗೆ ಕೊಂಕಣಿ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಚಾಲಕ ರಾಯ್‌ಗೆ ಕೊಂಕಣಿಯಲ್ಲೆ ಹತ್ತಿರದ ಪೊಲೀಸ್ ಠಾಣೆಗೆ ಹೋಗುವಂತೆ ಸೂಚಿಸಿದ್ದರು. ರಾಯ್‌ಜಾನ್‌ ಸುಲಭವಾಗಿ ಪೊಲೀಸ್ ಠಾಣೆಗೆ ತಲುಪಿದ್ದ. ಹೀಗಾಗಿ ಸುಚನಾ ಸೇಠ್‌ ಸ್ಕೂಟ್‌ಕೇಸ್‌ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಸದ್ಯ ಮಂಗಳವಾರ ಆರೋಪಿ ಸುಚನಾ ಸೇಠ್‌ಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ಕಲ್ಲಂಗೋಟ್ ಪೊಲೀಸರು ಆರು ದಿನಗಳ ಕಾಲ ವಶಕ್ಕೆ ಪಡೆದು, ತೀವ್ರ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Killer CEO: ಎತ್ತಿ ಆಡಿಸಿದ ತೋಳಲ್ಲಿ ಮಗು ಚಿನ್ಮಯ್‌ ಅಂತ್ಯಕ್ರಿಯೆ; ಈ ನೋವು ಮತ್ತಾವ ತಂದೆಗೂ ಬೇಡ

ಮಗುವನ್ನೇ ಕೊಂದ ಬುದ್ಧಿವಂತೆ; ಭೀಕರ ಕ್ರೌರ್ಯದ ಬೆಚ್ಚಿಬೀಳಿಸುವ ಕಥೆ!

ಬೆಂಗಳೂರು: ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು ಹಾಕಿದ ಧೂರ್ತ ಮಹಿಳೆ ಸುಚನಾ ಸೇಠ್‌ (39) ವಿದ್ಯಾವಂತರೆಲ್ಲರೂ ವಿವೇಕಿಗಳಾಗಿರಬೇಕಾಗಿಲ್ಲ ಎಂಬ ಮಾತಿಗೆ ಅತ್ಯಂತ ಸೂಕ್ತ ನಿದರ್ಶನ. ಜಗತ್ತಿನ ಅತ್ಯಂತ ನವೀನ ಜ್ಞಾನಶಾಖೆಯಾಗಿರುವ ಕೃತಕ ಬುದ್ಧಿಮತ್ತೆಯನ್ನು (Artificial Intelligence) ಅರೆದು ಕುಡಿದಂತಿರುವ ಸುಚನಾ ಸೇಠ್‌ಳ (Suchana Seth) ಬುದ್ಧಿಯೇ ನೆಟ್ಟಗಿರಲಿಲ್ಲ!

ಬೆಂಗಳೂರಿನಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್‌ಅಪ್ ಮೈಂಡ್‌ಫುಲ್ ಎಐ ಲ್ಯಾಬ್ಸ್‌ನ (Mindful AI Labs) ಸಹ-ಸ್ಥಾಪಕಿ ಹಾಗೂ ಸಿಇಒ ಆಗಿರುವ ಸುಚನಾ ಸೇಠ್ ಅತ್ಯಂತ ಪ್ರಭಾವಿ ಮಹಿಳೆ. ಅಪ್ರತಿಮ ಪ್ರತಿಭಾವಂತೆ. ಆದರೇನು ಮಾಡೋಣ? ಮಗುವನ್ನೇ ಕೊಲ್ಲುವ ಕ್ರೌರ್ಯವನ್ನು ಮೆರೆದಿದ್ದಾಳೆ.

ಇದನ್ನೂ ಓದಿ: Killer CEO: ಸಿಇಒ ಮಗನ ಕೊಲೆ ಪೂರ್ವಯೋಜಿತ; ಆಕೆಯ ಕಂಪನಿಗೆ ಕಚೇರಿಯೇ ಇರಲಿಲ್ಲ!

ಹಾಗಿದ್ದರೆ ಈ ಸುಚನಾ ಸೇಠ್‌ ಯಾರು? ಆಕೆ ಕೃತಕ ಬುದ್ಧಿಮತ್ತೆಯ ಶಕ್ತಿ ಎಷ್ಟು?

  1. 1. ಸುಚನಾ ಸೇಠ್‌ ಮೈಂಡ್‌ ಎಐ ಲ್ಯಾಬ್‌ ಎಂಬ ಕೃತಕ ಬುದ್ಧಿಮತ್ತೆ ಕುರಿತ ಕಂಪನಿಯ ಸಹ ಸ್ಥಾಪಕಿ ಮತ್ತು ಸಿಇಒ
  2. 2. ಎಐ ಎಥಿಕ್ಸ್‌ (ಕೃತಕ ಬುದ್ಧಿಮತ್ತೆ ನೈತಿಕ ಬಳಕೆ) ವಿಚಾರದಲ್ಲಿ 2021ರಲ್ಲಿ ಗುರುತಿಸಲಾದ 100‌ ಪ್ರತಿಭಾನ್ವಿತ ಮಹಿಳೆಯರಲ್ಲಿ ಒಬ್ಬರು.
  3. 3.ಡೇಟಾ ಸೈನ್ಸ್‌ ಮಾನಿಟರಿಂಗ್‌ ವಿಭಾಗದಲ್ಲಿ 12 ವರ್ಷ ಅನುಭವ ಇರುವ ಡೇಟಾ ಸೈಂಟಿಸ್ಟ್‌.
  4. 4. ಡೇಟಾ ಎಂಡ್‌ ಸೊಸೈಟಿಯಲ್ಲಿ ಮೋಝಿಲ್ಲಾ ಫೆಲೋ ಆಗಿ ಕೆಲಸ ಮಾಡಿದ್ದರು.
  5. 5. ಹಾರ್ವರ್ಡ್‌ ವಿವಿಯ ಬರ್ಕ್‌ಮನ್‌ ಕ್ಲೀನ್‌ ಸೆಂಟರ್‌ನಲ್ಲಿ ಫೆಲೋ ಆಗಿದ್ದರು.
  6. 6. ರಾಮನ್‌ ರಿಸರ್ಚ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ಸಂಶೋಧನಾ ಫೆಲೋ ಆಗಿದ್ದರು.
  7. 7. ಕೃತಕ ಭಾಷಾ ಸಂಸ್ಕರಣೆ, ಮೆಷಿನ್‌ ಲರ್ನಿಂಗ್‌, ಟೆಕ್ಸ್ಟ್‌ ಮೈನಿಂಗ್‌, ನ್ಯಾಚುರಲ್‌ ಲಾಂಗ್ವೇಜ್‌ ವಿಚಾರದಲ್ಲಿ ಅಮೆರಿಕದಿಂದ ನಾಲ್ಕು ಪೇಟೆಂಟ್‌ಗಳನ್ನು ಹೊಂದಿದ್ದಾರೆ.
  8. 8. 2020ರಲ್ಲಿ ಅವರು ಮೈಂಡ್‌ ಫುಲ್‌ ಎಐ ಲ್ಯಾಬ್‌ ಸ್ಥಾಪನೆ ಮಾಡಿದ್ದರು. ಇದು ಎಐ ನೈತಿಕತೆ, ಪ್ರೊಟೊಟೈಪಿಂಗ್‌, ಮೆಷಿನ್‌ ಲರ್ನಿಂಗ್‌ ಸಿಸ್ಟಮ್‌ಗಳನ್ನು ಸ್ಥಾಪಿಸುವ ಕೆಲಸವನ್ನು ಮಾಡುತ್ತದೆ.
  9. 9. ಕೋಡಿಂಗ್‌ ವಿಭಾಗದಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಆಕೆ ಹಲವಾರು ಡೇಟಾ ಸೈನ್ಸ್‌ ವರ್ಕ್‌ ಶಾಪ್‌ಗಳನ್ನು ನಡೆಸಿದ್ದಾರೆ.
  10. 10. ಅವರು ಪಾಲಿಮರ್‌ ಫಿಸಿಕ್ಸ್‌ನ ಸಮಸ್ಯೆಗಳಿಗೆ ಮೆಕ್ಯಾನಿಕ್ಸ್‌ ಮೂಲಕ ಪರಿಹಾರ ಕಂಡುಕೊಂಡಿದ್ದರು.
Suchana seth arrested

ಇದನ್ನೂ ಓದಿ: Killer CEO : ಗಂಡನ ಮೇಲಿನ ಸಿಟ್ಟಿಗೆ ಮಗುವನ್ನೇ ಬಲಿ ಕೊಟ್ಟಳಾ ಹಂತಕಿ ಸಿಇಒ?; ಏನಿದು ಕೌಟುಂಬಿಕ ಕಲಹ

ಸುಚನಾ ಸೇಠ್‌ ವೈಯಕ್ತಿಕ ಬದುಕು

  1. 1. ಸುಚನಾ ಸೇಠ್‌ ಮೂಲತಃ ಪಶ್ಚಿಮ ಬಂಗಾಳದವರು.. ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ.
  2. 2. ಸುಚನಾ ಸೇಠ್‌ ಗಂಡ ವೆಂಕಟರಮಣ್‌ ಮೂಲತಃ ಕೇರಳದವರು. ವೃತ್ತಿಯಲ್ಲಿ ಓರ್ವ ಟೆಕ್ಕಿ.
  3. 3. ಸುಚನಾ ಮತ್ತು ವೆಂಕಟರಮಣ್‌ಗೆ 2010ರಲ್ಲಿ ಮದುವೆಯಾಗಿದ್ದು, 2019ರಲ್ಲಿ ಮಗು ಹುಟ್ಟಿತ್ತು.
  4. 4. 2020ರಲ್ಲಿ ದಂಪತಿ ನಡುವೆ ಬಿರುಕು ಮೂಡಿ ಕೋರ್ಟ್‌ ವಿಚ್ಛೇದನ ನೀಡಿತ್ತು. ಮಗುವನ್ನು ತಾಯಿ ಜತೆಗೆ ಇರಲು ಅನುಮತಿ ನೀಡಿದ್ದ ಕೋರ್ಟ್‌ ಪ್ರತಿ ಭಾನುವಾರ ತಂದೆಗೆ ಮಗುವನ್ನು ಭೇಟಿ ನೀಡಲು ಅವಕಾಶ ನೀಡಬೇಕು ಎಂದು ಸೂಚಿಸಿತ್ತು.
  5. 5. ವಿಚ್ಛೇದನ ಪಡೆದ ವೆಂಕಟರಮಣ್‌ ಈಗ ಇಂಡೋನೇಷ್ಯಾದ ಜಕಾರ್ತದಲ್ಲಿದ್ದಾರೆ.
  6. 6. ವಿಚ್ಛೇದಿತ ಗಂಡ ಪ್ರತಿ ವಾರ ಬಂದು ಮಗನ ಜತೆಗೆ ಮಾತನಾಡುವುದು ಸುಚನಾಗೆ ಇಷ್ಟವಿರಲಿಲ್ಲ. ಈ ವಿಷಯದಲ್ಲಿ ಹಲವಾರು ಬಾರಿ ಜಗಳವಾಗಿತ್ತು. ಅಂತಿಮವಾಗಿ ಮಗನೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಳಾ ಈ ಹಂತಕಿ!?
ಸುಚನಾ ಸೇಠ್‌, ವೆಂಕಟರಮಣ ಮತ್ತು ಮಗು

ಮಗುವಿನ ಕೊಲೆ ಪ್ರಕರಣ: ಏನೇನು ನಡೆಯಿತು? ಕೊಂದಿದ್ದು ಹೇಗೆ?

  1. 1. ಸುಚನಾ ಸೇಠ್‌ ಜನವರಿ 6ರಂದು ಉತ್ತರ ಗೋವಾದ ಕಾಂಡೋಲಿಮ್‌ನಲ್ಲಿರುವ ಸರ್ವಿಸ್‌ ಅಪಾರ್ಟ್‌ಮೆಂಟ್‌ಗೆ ಪ್ರವೇಶ ಪಡೆಯುತ್ತಾರೆ. ಹಾಗೆ ಒಳಗೆ ಹೋಗುವಾಗ ಆಕೆಯ ಕೈಯಲ್ಲಿದ್ದದ್ದು ಒಂದು ಬ್ಯಾಗ್‌ ಮತ್ತು ಪುಟ್ಟ ನಾಲ್ಕು ವರ್ಷದ ಮಗ.
  2. 2. ಅಲ್ಲಿ ಎರಡು ದಿನ ಕಳೆದ ಸುಚನಾ ಅಪಾರ್ಟ್‌ಮೆಂಟ್‌ ಸಿಬ್ಬಂದಿಗೆ ಒಂದು ಬೇಡಿಕೆ ಸಲ್ಲಿಸುತ್ತಾರೆ: ನಾನು ಒಂದು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಬೇಕಾಗಿದೆ. ನನಗೆ ಒಂದು ಟ್ಯಾಕ್ಸಿ ಅರೇಂಜ್‌ ಮಾಡಿಕೊಡಿ.
  3. 3 ಆಗ ಅಲ್ಲಿನ ಸಿಬ್ಬಂದಿ, ಟ್ಯಾಕ್ಸಿ ಯಾಕೆ ಮೇಡಂ, ಅದು ತುಂಬಾ ಕಾಸ್ಟ್ಲೀ. ಅದಕ್ಕಿಂತ ವಿಮಾನವೇ ಒಳ್ಳೆಯದು, ಕಡಿಮೆ ದುಡ್ಡಿನಲ್ಲಿ ಆಗುತ್ತದೆ ಮತ್ತು ಬೇಗನೆ ತಲುಪುತ್ತದೆ ಎಂದು ಹೇಳಿದ್ದರು. ಆದರೆ, ನನಗೆ ಟ್ಯಾಕ್ಸಿನೇ ಬೇಕು ಎಂದು ಸುಚನಾ ಹಠ ಹಿಡಿದಿದ್ದರು.
  4. 4. ಅಂತಿಮವಾಗಿ ಜನವರಿ 8ರಂದು ಟ್ಯಾಕ್ಸಿಯನ್ನು ಬುಕ್‌ ಮಾಡಿ ಕೊಡಲಾಯಿತು. ಮುಂಜಾನೆ ಅವರು ಅಲ್ಲಿಂದ ಟ್ಯಾಕ್ಸಿ ಹತ್ತಿ ಹೊರಟಿದ್ದಾರೆ.
  5. 5. ಟ್ಯಾಕ್ಸಿ ಹೊರಟು ಹೋದ ಬಳಿಕ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ ಸುಚನಾ ಅವರು ತಂಗಿದ್ದ ಕೋಣೆಯನ್ನು ಕ್ಲೀನ್‌ ಮಾಡಲು ಹೋಗುತ್ತಾರೆ. ಅಲ್ಲಿನ ಟವೆಲ್‌ನಲ್ಲಿ ರಕ್ತದ ಕಲೆಗಳು ಗೋಚರಿಸುತ್ತವೆ. ಆಗ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
  6. 6. ಈ ನಡುವೆ, ಸುಚನಾ ಸೇಠ್‌ ಜತೆಗೆ ಬಂದಿದ್ದ ನಾಲ್ಕು ವರ್ಷದ ಮಗು ಮರಳಿ ಹೋಗುವಾಗ ಇರಲಿಲ್ಲ ಎನ್ನುವುದು ಸಿಬ್ಬಂದಿಗೆ ನೆನಪಾಗುತ್ತದೆ. ಜತೆಗೆ ಆಕೆ ಒಂದು ಭಾರವಾದ ಸೂಟ್‌ ಕೇಸನ್ನು ಎತ್ತಿಕೊಂಡು ಹೋಗಿದ್ದರು ಎಂದು ಪೊಲೀಸರಿಗೆ ತಿಳಿಸುತ್ತಾರೆ.
  7. 7. ಪೊಲೀಸರು ಚಾಲಕನಿಗೆ ಕರೆ ಮಾಡಿ ಸುಚನಾ ಅವರಿಗೆ ಫೋನ್‌ ಕೊಡುವಂತೆ ಕೇಳುತ್ತಾರೆ. ಫೋನ್‌ನಲ್ಲಿ ರಕ್ತದ ಕಲೆ, ಮತ್ತು ಮಗು ಇಲ್ಲದಿರುವ ಬಗ್ಗೆ ಕೇಳುತ್ತಾರೆ.
  8. 8. ಆಗ ಸುಚನಾ ಅವರು ಟವೆಲ್‌ನಲ್ಲಿದ್ದದ್ದು ಋತುಸ್ರಾವಕ್ಕೆ ಸಂಬಂಧಿಸಿದ್ದು ಎನ್ನುತ್ತಾರೆ. ಮಗನನ್ನು ದಕ್ಷಿಣ ಗೋವಾದ ಮರ್ಗೋವಾ ಪಟ್ಟಣದಲ್ಲಿರುವ‌ ಸ್ನೇಹಿತರ ಮನೆಯಲ್ಲಿ ಬಿಟ್ಟಿದ್ದಾಗಿ ಹೇಳುತ್ತಾರೆ. ಮತ್ತು ನಂಬರ್‌ ಕೂಡಾ ಕೊಡುತ್ತಾರೆ. ಆದರೆ, ಅದು ಫೇಕ್‌ ನಂಬರ್‌ ಎನ್ನುವುದು ಪರಿಶೀಲಿಸಿದಾಗ ಗೊತ್ತಾಗುತ್ತದೆ!
  9. 9. ಪೊಲೀಸರು ಕೂಡಲೇ ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಕೊಂಕಣಿಯಲ್ಲಿ ಮಾತನಾಡಿ, ಟ್ಯಾಕ್ಸಿಯನ್ನು ಸಮೀಪದ ಪೊಲೀಸ್‌ ಠಾಣೆಗೆ ಕರೆದೊಯ್ಯುವಂತೆ ಸೂಚಿಸುತ್ತಾರೆ. ಅವನು ಚಿತ್ರದುರ್ಗದ ಐಮಂಗಲ ಪೊಲೀಸ್‌ ಠಾಣೆಯ ಮುಂದೆ ಟ್ಯಾಕ್ಸಿ ನಿಲ್ಲಿಸುತ್ತಾನೆ.
  10. 10. ಐಮಂಗಲ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ಮಗುವಿನ ಶವ ಪತ್ತೆಯಾಗುತ್ತದೆ, ಪೊಲೀಸರು ಆಕೆಯನ್ನು ವಶಕ್ಕೆ ಪಡೆಯುತ್ತಾರೆ.
Suchana seth arrested

ಸುಚನಾ ಸೇಠ್‌ ಬಂಧನದ ಕ್ಷಣ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version