ಇಂಫಾಲ: ಮಣಿಪುರದ ನೋನಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭಾರಿ ಕುಸಿತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ೧೩ ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ೨೩ ಮಂದಿ ಮಣ್ಣಿನೊಳಗೆ ಭೂಗತರಾಗಿದ್ದು, ಅವರ ರಕ್ಷಣೆಗಾಗಿ ಕಾರ್ಯಾಚರಣೆ ಸಾಗುತ್ತಿದೆ.
ನೋನಿ ಜಿಲ್ಲೆಯ ರೈಲ್ವೆ ನಿರ್ಮಾಣ ಶಿಬಿರದ ಬಳಿ ಈ ದುರಂತ ಸಂಭವಿಸಿದೆ. ರೈಲ್ವೆ ಯಾರ್ಡ್‌ಗಾಗಿ ಸಾಕಷ್ಟು ಗುಡ್ಡ ಪ್ರದೇಶಗಳನ್ನು ಸಮತಟ್ಟುಗೊಳಿಸಲಾಗಿತ್ತು. ಇದರಿಂದ ಪ್ರದೇಶದ ಭೌಗೋಳಿಕ ಸ್ಥಿತಿಯಲ್ಲಿ ವ್ಯತ್ಯಾಸವಾಗಿದೆ. ತುಪುಲ್ ಯಾರ್ಡ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಅಲ್ಲಿದ್ದ ಮನೆಗಳ ಮೇಲೆ ಮಣ್ಣು ಮತ್ತು ಕಲ್ಲಗಳು ಉರುಳಿವೆ. ಆ ಮನೆಗಳಲ್ಲಿ ಕಾರ್ಮಿಕರು ವಾಸವಾಗಿದ್ದು, ಹೆಚ್ಚಿನವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದರಿಂದ ಮತ್ತು ರಾತ್ರಿ ಕಾರ್ಯಾಚರಣೆಗೆ ಕಷ್ಟವಾಗಿದ್ದರಿಂದ ಸಾವುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇದುವರೆಗೆ ಏಳು ಶವಗಳನ್ನು ಹೊರಗೆ ತೆಗೆಯಲಾಗಿದೆ. ೧೩ ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ೨೩ ಮಂದಿ ನಾಪತ್ತೆಯಾಗಿದ್ದಾರೆ ಎಂದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಇಜೈ ಎಂಬ ನದಿ ಹರಿಯುತ್ತಿದ್ದು, ಭಾರಿ ಪ್ರಮಾಣದಲ್ಲಿ ಮಣ್ಣು ಮತ್ತು ಇತರ ಅವಶೇಷಗಳು ನದಿಗೆ ಬಂದು ಬಿದ್ದಿವೆ. ಇದರಿಂದ ಸಹಜ ಹರಿವಿಗೆ ಅಡ್ಡಿಯಾಗಿದೆ. ಹೀಗಾಗಿ ನದಿಯಲ್ಲಿ ಅಣೆಕಟ್ಟು ಕಟ್ಟಿದಂತಾಗಿದ್ದು, ನದಿ ಪಾತ್ರದ ಹಲವಾರು ಹಳ್ಳಿಗಳಿಗೆ ನೀರು ನುಗ್ಗಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ | ಜಿಲ್ಲಾಡಳಿತದಿಂದ ಪ್ರವಾಹ, ಭೂಕುಸಿತದ ಎಚ್ಚರಿಕೆ; ಕೊಡಗಿನ ಜನರಲ್ಲಿ ಆತಂಕ