ಭೋಪಾಲ್: ಇತ್ತೀಚಿನ ಕೆಲ ತಿಂಗಳಲ್ಲಿ ಗೆಳತಿ, ಗರ್ಲ್‌ಫ್ರೆಂಡ್, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಯುವತಿಯರನ್ನು ಕೊಂದು, ತುಂಡರಿಸಿ, ಫ್ರಿಡ್ಜ್‌ನಲ್ಲಿ ಇರಿಸುವ ಪ್ರಕರಣಗಳು (Crime News) ಸುದ್ದಿಯಾಗುತ್ತಿವೆ. ದೆಹಲಿಯಲ್ಲಿಯೇ ಅಫ್ತಾಬ್ ಪೂನಾವಾಲಾ ಎಂಬಾತ ಲಿವ್ ಇನ್ ಪಾರ್ಟ್‌ನರ್ ಶ್ರದ್ಧಾ ವಾಳ್ಕರ್ ಅವರ ದೇಹವನ್ನು ತುಂಡರಿಸಿ, ಫ್ರಿಡ್ಜ್‌ನಲ್ಲಿ ಇಟ್ಟ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಈಗ ಇಂತಹದ್ದೇ ಅನುಮಾನ ಹುಟ್ಟಿಸುವ ಪ್ರಕರಣವೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಹೆಂಡತಿಯ ಶವವನ್ನು ಫ್ರೀಜರ್‌ನಲ್ಲಿ ಇರಿಸಿದ್ದು, ಮಹಿಳೆಯ ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದಾರೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ಮನೆಯೊಂದರಲ್ಲಿ ಭಾನುವಾರ ಶವಾಗಾರದ ಫ್ರೀಜರ್‌ನಲ್ಲಿ ಮಹಿಳೆಯ ಶವವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮಹಿಳೆಯ ಸಹೋದರನು ಆಕೆಯ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಸಹೋದರಿಯ ಪತಿಯೇ ಆಕೆಯನ್ನು ಕೊಂದು, ಬಳಿಕ ಫ್ರೀಜರ್‌ನಲ್ಲಿ ಇರಿಸಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ದೂರಿನಲ್ಲಿ ಮನವಿ ಮಾಡಿದ್ದಾರೆ.
“ಮನೆಯೊಂದರಲ್ಲಿದ್ದ ಶವಾಗಾರದ ಫ್ರೀಜರ್‌ನಲ್ಲಿ ಸುಮಿತ್ರಿ ಎಂಬ 40 ವರ್ಷದ ಮಹಿಳೆಯ ಶವ ಪತ್ತೆಯಾಗದೆ. ಸುಮಿತ್ರಿ ಸಹೋದರ ಅಭಯ್ ತಿವಾರಿ ಎಂಬುವರು ದೂರು ನೀಡಿದ್ದು, ಪತಿಯೇ ಕೊಲೆ ಮಾಡಿದ್ದಾನೆ ಎಂಬುದಾಗಿ ಆರೋಪಿಸಿದ್ದಾರೆ. ಹಾಗಾಗಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಶವವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಳಿಕ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ” ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಕೆಆರ್‌ಎಸ್ ಹಿನ್ನೀರಿನಲ್ಲಿ ಯುವತಿಯ ಸುಟ್ಟ ಶವ ಪತ್ತೆ, ಸಜೀವ ದಹನ?
ಜಾಂಡೀಸ್‌ನಿಂದ ಸಾವು ಎಂದು ಹೇಳಿಕೆ
ಫ್ರೀಜರ್‌ನಲ್ಲಿ ಶವ ಪತ್ತೆಯಾದ ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ ಪತಿಯು ಹಲವು ವಿಚಾರ ಹೇಳಿದ್ದಾನೆ. “ನನ್ನ ಪತ್ನಿಯು ಕಾಮಾಲೆ ಕಾಯಿಲೆಯಿಂದ ಬಳಲುತ್ತಿದ್ದಳು. ಆಕೆ ಜೂನ್ 30ರಂದು ಮೃತಪಟ್ಟಿದ್ದಾಳೆ. ಆಕೆಯ ಅಂತ್ಯಸಂಸ್ಕಾರ ಮಗ ಮುಂಬೈ ತಲುಪಲು ವಿಳಂಬವಾದ ಕಾರಣ ಶವಾಗಾರದ ಫ್ರೀಜರ್‌ನಲ್ಲಿ ಶವ ಇರಿಸಿದ್ದೆ” ಎಂದು ತಿಳಿಸಿದ್ದಾನೆ. ಆದರೆ, ಪತ್ನಿ ತೀರಿಕೊಂಡು ಎರಡು ದಿನವಾದರೂ ಯಾರಿಗೂ ಹೇಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.