ಸಾಂಗ್ಲಿ: ಒಂದೇ ಕುಟುಂಬದ 9 ಮಂದಿಯ ಮೃತದೇಹ ಅವರ ಮನೆಯಲ್ಲಿಯೇ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ (Maharashtra Suicide) ಕಂಡುಬಂದರೂ ಅನುಮಾನಾಸ್ಪದ ಸಾವು ಎಂದು ಪೊಲೀಸರು ಹೇಳಿದ್ದಾರೆ. ಇಂಥ ದಾರುಣ ಘಟನೆ ನಡೆದಿದ್ದು ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯಲ್ಲಿರುವ ಮ್ಹೈಸಲ್‌ನಲ್ಲಿ. ಒಂದೇ ಮನೆಯವರಾಗಿದ್ದ ಇವರೆಲ್ಲ ಈಗ ಶವವಾಗಿದ್ದಾರೆ.
೯ ಜನರಲ್ಲಿ, ಮೂವರ ಮೃತದೇಹ ಮನೆಯ ಒಂದು ಭಾಗದಲ್ಲಿ ಸಿಕ್ಕಿದ್ದರೆ, ಇನ್ನು ಆರು ಜನರ ಶವ ಮತ್ತೊಂದು ಭಾಗದಲ್ಲಿ ಪತ್ತೆಯಾಗಿದೆ ಎಂದು ಸಾಂಗ್ಲಿ ಎಸ್‌ಪಿ ದೀಕ್ಷಿತ್ ಗೆಡಾಮ್ ತಿಳಿಸಿದ್ದಾರೆ. ಅಕ್ಕಾತಾಯ್ ವಾಮೋರೆ(72), ಅವರ ಇಬ್ಬರು ಪುತ್ರರಾದ ಡಾ. ಮಾಣಿಕ್ ಯೆಲ್ಲಪ್ಪ ವ್ಯಾನ್ಮೋರ್(49), ಪೋಪಟ್ ಯೆಲಪ್ಪಾ ವ್ಯಾನ್ಮೋರ್(52), ಮಾಣಿಕ್ ಪತ್ನಿ ರೇಖಾ ಮಾಣಿಕ್ ವ್ಯಾನ್ಮೋರ್(೪೫), ಇವರ ಪುತ್ರ ಆದಿತ್ಯ (೧೫) ಮತ್ತು ಪುತ್ರಿ ಅನಿತಾ (೨೮). ಪೋಪಟ್ ಪತ್ನಿ ಸಂಗೀತಾ ವ್ಯಾನ್ಮೋರ್(೪೮), ಪುತ್ರಿ ಅರ್ಚನಾ (೩೦) ಮತ್ತು ಪುತ್ರ ಶುಭಂ (೨೮) ಮೃತರು. ಇವರೆಲ್ಲರ ಮೃತದೇಹಗಳನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೋರ್ಸ್‌ಮಾರ್ಟಮ್ ಪ್ರಕ್ರಿಯೆ ಜಾರಿಯಲ್ಲಿದೆ.
ಮನೆಗೆ ಭೇಟಿ ಕೊಟ್ಟ ಪೊಲೀಸರು ಸಮಗ್ರವಾಗಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದೇ ಸ್ಪಷ್ಟವಾಗುತ್ತದೆ. ಆದರೂ ಪೋಸ್ಟ್‌ಮಾರ್ಟಮ್ ರಿಪೋರ್ಟ್ ಬಂದ ಮೇಲಷ್ಟೇ ಸರಿಯಾಗಿ ಗೊತ್ತಾಗುತ್ತದೆ. ಇವರೆಲ್ಲ ಯಾವುದೋ ವಿಷ ಸೇವಿಸಿರುವ ಸಾಧ್ಯತೆ ದಟ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಎಲ್ಲೂ ಕಾಣಿಸುತ್ತಿಲ್ಲ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ, ಮುಂಬೈ ಪೊಲೀಸರಿಂದ ಹುಡುಕಾಟ