ಕಾನ್ಪುರ: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಹುಡುಗಿಯೊಬ್ಬಳು ರಕ್ತಸಿಕ್ತವಾಗಿ ಬಿದ್ದು ನರಳಾಡುತ್ತಿದ್ದಾಗ ಸುತ್ತಲೂ ನಿಂತಿದ್ದವರು ಆಕೆಯ ಸಹಾಯಕ್ಕೆ ಹೋಗುವ ಬದಲು, ಸುತ್ತಲೂ ನಿಂತು ವಿಡಿಯೊ ಮಾಡುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಮಾನವರ ಮನುಷ್ಯತ್ವ ಮೊಬೈಲ್ನಲ್ಲೇ ಕಳೆದು ಹೋಗುತ್ತಿದೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿತ್ತು. ಅದರ ಬೆನ್ನಲ್ಲೇ ಈಗ ಕಾನ್ಪುರದಲ್ಲಿ ಇಂಥದ್ದೇ ಅಮಾನವೀಯ ಘಟನೆ ನಡೆದಿದ್ದು ವರದಿಯಾಗಿದೆ. ‘ಪತ್ನಿ ನೇಣುಹಾಕಿಕೊಳ್ಳುವುದನ್ನು ಪತಿ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾನೆ. ಆಕೆಯನ್ನು ತಡೆಯುವ ಬದಲು, ಅವಳು ಸಾಯುವವರೆಗೂ ಈತ ಕುಳಿತು ವಿಡಿಯೊ ಮಾಡಿದ್ದಾನೆ’.
ಶೋಭಿತಾ ಗುಪ್ತಾ ಮತ್ತು ಸಂಜಯ್ ಗುಪ್ತಾ ಮದುವೆಯಾಗಿ ಐದು ವರ್ಷಗಳಾಗಿತ್ತು. ಆದರೆ ಪತಿ-ಪತ್ನಿ ಮಧ್ಯೆ ಸದಾ ಗಲಾಟೆ-ಜಗಳ ನಡೆಯುತ್ತಿತ್ತು. ಮಂಗಳವಾರವೂ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಬಳಿಕ ಶೋಭಿತಾ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜಯ್ ಗುಪ್ತಾ ಆಕೆಯನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಬದಲು ನೇಣು ಹಾಕಿಕೊಳ್ಳುತ್ತಿರುವುದನ್ನು ವಿಡಿಯೊ ಚಿತ್ರಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ‘ಅವಳು ನೇಣು ಹಾಕಿಕೊಳ್ಳುತ್ತಿದ್ದರೆ, ಇದು ನಿನ್ನ ಮನಸ್ಥಿತಿ..ಅದೆಷ್ಟು ದುರ್ಬಲ ಮನಸ್ಥಿತಿ ನಿನ್ನದು ಎಂಬುದು ಇದರಲ್ಲೇ ಗೊತ್ತಾಗುತ್ತದೆ’ ಎಂದು ಆತ ಪತ್ನಿಯನ್ನು ವ್ಯಂಗ್ಯ ಮಾಡುತ್ತಿದ್ದುದೂ ವಿಡಿಯೊದಲ್ಲಿ ಕೇಳುತ್ತಿದೆ.
ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಆಕೆಯ ತಂದೆ ರಾಜ್ ಕಿಶೋರ್ ಗುಪ್ತಾಗೆ ಕರೆ ಮಾಡಿದ ಸಂಜಯ್, ಶೋಭಿತಾ ಸತ್ತುಹೋಗಿದ್ದಾಳೆ ಎಂದು ಹೇಳಿದ್ದಾನೆ. ಕೂಡಲೇ ಆಕೆಯ ಪಾಲಕರು ಇವರ ಮನೆಗೆ ಬಂದಿದ್ದಾರೆ. ಆಕೆಗೆ ತಾನು ಸಿಪಿಆರ್ ಚಿಕಿತ್ಸೆ ಕೊಟ್ಟಿದ್ದಾಗಿ ಸಂಜಯ್ ಗುಪ್ತಾ ಹೇಳಿಕೊಂಡಿದ್ದರೂ, ‘ಆಕೆ ಸಾಯುವುದನ್ನು ತಡೆಯಬಹುದಿತ್ತು, ನೇಣು ಬಿಗಿದುಕೊಂಡ ಬಳಿಕವೂ ಅವಳನ್ನು ಎತ್ತಿ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದಿತ್ತು. ಅದೆಲ್ಲ ಬಿಟ್ಟು ಉಸಿರು ನಿಂತು ಹೋದ ಮೇಲೆ ಅವಳಿಗೆ ಸಿಪಿಆರ್ ಕೊಟ್ಟೆ ಎಂದು ಹೇಳಿದರೆ ಏನು ಪ್ರಯೋಜನ?’ ಎಂದು ಶೋಭಿತಾ ಪಾಲಕರು ಪ್ರಶ್ನೆ ಎತ್ತಿದ್ದಾರೆ. ತಮ್ಮ ಮಗಳ ಸಾವಿಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಕ್ತದ ಮಡುವಲ್ಲಿ ಬಿದ್ದು ನರಳಾಡುತ್ತ ಸಹಾಯ ಯಾಚಿಸಿದ 13ವರ್ಷದ ಬಾಲಕಿ; ಸುತ್ತಲೂ ನಿಂತು ವಿಡಿಯೊ ಮಾಡಿದ ಮಂದಿ