ಲಕ್ನೋ: ಆ ಮನೆಯಲ್ಲಿ ಎರಡು ದಿನಗಳ ಹಿಂದಷ್ಟೇ ಸಂಭ್ರಮ ಮೇರೆ ಮೀರಿತ್ತು. ಮನೆಯ ಮಗ ಸೋನು ಯಾದವ್‌ಗೆ ಮದುವೆ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಳ್ಳಲಾಗಿತ್ತು. ಆದರೆ ಇದೀಗ ಅದೇ ಮನೆ ಸ್ಮಶಾನವಾಗಿ ಹೋಗಿದೆ. ತಮ್ಮನ ಮದುವೆಗೆಂದು ಬಂದಿದ್ದ ಅಣ್ಣ ನವ ಜೋಡಿಯ ಸಮೇತ ಕುಟುಂಬದ ನಾಲ್ವರನ್ನು ಮತ್ತು ಸ್ನೇಹಿತನನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆ (Crime News) ಮಾಡಿಕೊಂಡಿದ್ದಾನೆ.
ಇಂಥದ್ದೊಂದು ಘನಘೋರ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯ ಕಿಶ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲ್‌ಪುರ ಗ್ರಾಮದಲ್ಲಿ ನಡೆದಿದೆ. ಶಿವವೀರ್ ಯಾದವ್ ಈ ರೀತಿಯಲ್ಲಿ ಕೊಲೆ ಮಾಡಿರುವ ವ್ಯಕ್ತಿ. 28 ವರ್ಷದ ಶಿವವೀರ್ ಶನಿವಾರ ಬೆಳಗ್ಗೆ ತನ್ನ ಕಿರಿಯ ಸಹೋದರನಾದ ಸೋನು ಯಾದವ್(21), ಆತನ ಪತ್ನಿ ಸೋನಿ(20), ಮತ್ತೊಬ್ಬ ತಮ್ಮನಾದ ಭುಲ್ಲನ್(25), ಭಾವ ಸೌರಭ್(23) ಮತ್ತು ಸ್ನೇಹಿತ ದೀಪಕ್(20)ರನ್ನು ಕೊಲೆ ಮಾಡಿದ್ದಾನೆ. ತನ್ನ ಪತ್ನಿ ಡಾಲಿ(24) ಮತ್ತು ಚಿಕ್ಕಮ್ಮ ಸುಷ್ಮಾ(35) ಅವರ ಮೇಲೂ ಕೊಲೆ ಯತ್ನ ನಡೆಸಿ, ನಂತರ ತನಗೆ ತಾನು ಗುಂಡು ಹಾರಿಸಿಕೊಂಡಿದ್ದಾನೆ.
ಇದನ್ನೂ ಓದಿ: Video Viral: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ; ತಲೆಬಾಗಿದ ನಮೋ
ಇದರಲ್ಲಿ ಡಾಲಿ ಮತ್ತು ಸುಷ್ಮಾ ಗಂಭೀರ ಗಾಯಾಳುಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವವೀರ್ ನೋಯ್ಡಾದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸೋನು ಅವರ ಮದುವೆಗಾಗಿ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದ. ಆದರೆ ಇದ್ದಕ್ಕಿದ್ದಂತೆ ಆತ ಈ ರೀತಿಯಲ್ಲಿ ಕೊಲೆ ಮಾಡಿರುವುದಕ್ಕೆ ಕಾರಣವೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.