ವಿಜಯವಾಡ: ಗರ್ಭಿಣಿ ಪತ್ನಿಗೆ ಎಚ್ವಿಐ ಸೋಂಕಿರುವ ರಕ್ತವನ್ನು ಇಂಜೆಕ್ಟ್ ಮಾಡಿದ ಆರೋಪದಡಿ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಅಮಾನುಷ ಕೃತ್ಯ ನಡೆದಿದ್ದು ಆಂಧ್ರಪ್ರದೇಶದಲ್ಲಿ. ಎಂ. ಚರಣ್ ಎಂಬಾತ ಆರೋಪಿ. ಈತನಿಗೆ ತನ್ನ ಪತ್ನಿಯಿಂದ ವಿಚ್ಛೇದನ ಬೇಕಾಗಿತ್ತು. ಡಿವೋರ್ಸ್ ಪಡೆಯಲು ಒಂದು ಸಕಾರಣ ಹುಡುಕುತ್ತಿದ್ದ. ಆದರೆ ಸಿಗದೆ ಇದ್ದಾಗ ಹೀಗೊಂದು ಕೀಳುಮಟ್ಟದ ತಂತ್ರ ಪ್ರಯೋಗ ಮಾಡಿದ್ದಾನೆ.
ಚರಣ್ ಮತ್ತು ಆತನ ಪತ್ನಿಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ. ಇನ್ನೊಂದು ಮಗು ಮಹಿಳೆಯ ಗರ್ಭದಲ್ಲಿತ್ತು. ಇತ್ತೀಚೆಗೆ ಒಮ್ಮೆ ಆರೋಗ್ಯ ತಪಾಸಣೆಗೆ ಹೋದಾಗ ಆಕೆಗೆ ಎಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ. ಅಕ್ಷರಶಃ ಆಕೆ ಕಂಗಾಲಾಗಿ ಹೋದಳು. ಈ ಸೋಂಕು ತನಗೆ ಹೇಗೆ ಬಂತು ಎಂದೇ ಅವಳಿಗೆ ಕೆಲ ಕಾಲ ಅರ್ಥವಾಗಲಿಲ್ಲ. ಬಳಿಕ ನೆನಪಿಸಿಕೊಂಡು ವೈದ್ಯರಿಗೆ ವಿಷಯ ತಿಳಿಸಿದ್ದಾಳೆ. ‘ಕೆಲವು ದಿನಗಳ ಹಿಂದೆ ನನ್ನ ಪತಿ ನನ್ನನ್ನು ಒಬ್ಬ ವೈದ್ಯನ ಬಳಿ ಕರೆದುಕೊಂಡ ಹೋಗಿದ್ದ. ಬಸುರಿ ಆರೋಗ್ಯವಂತಳಾಗಿರಬೇಕು, ನಿನಗೆ ಶಕ್ತಿ ಬರಬೇಕು ಎಂದು ಹೇಳುತ್ತ ಒಂದು ಚುಚ್ಚುಮದ್ದು ಕೊಡಿಸಿದ. ಬಹುಶಃ ಆಗಲೇ ನನಗೆ ಎಚ್‌ಐವಿ ಸೋಂಕು ತಗುಲಿರಬಹುದು’ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಬಳಿಕ ಪೊಲೀಸರಿಗೂ ದೂರು ಕೊಟ್ಟು ಈ ವಿಷಯವನ್ನೆಲ್ಲ ತಿಳಿಸಿದ್ದಾಳೆ.
‘ನಮ್ಮಿಬ್ಬರ ದಾಂಪತ್ಯ 2018ಕ್ಕೂ ಮೊದಲು ಚೆನ್ನಾಗಿಯೇ ಇತ್ತು. ಹೆಣ್ಣುಮಗುವೂ ಆಯಿತು. ಬರುಬರುತ್ತ ವರದಕ್ಷಿಣೆ ಬೇಕೆಂದು ಪತಿ ಪೀಡಿಸಲು ಪ್ರಾರಂಭಿಸಿದ. ಹಾಗೇ ಗಂಡುಮಗು ಹುಟ್ಟಿಲ್ಲವೆಂದೂ ಮೂದಲಿಸುತ್ತಿದ್ದ. ವಿಶಾಖಪಟ್ಟಣಂನಲ್ಲಿ 21 ವರ್ಷದ ಯುವತಿಯೊಂದಿಗೆ ಅನೈತಿಕ ಸಂಬಂಧವನ್ನೂ ಹೊಂದಿದ್ದ. ಅದೇ ಕಾರಣಕ್ಕೆ ನನಗೆ ಹಿಂಸೆ ನೀಡುತ್ತಿದ್ದ. ವಿಚ್ಛೇದನ ಬೇಕೆಂದು ಬಲವಂತ ಮಾಡುತ್ತಿದ್ದ. ನಾನು ಒಪ್ಪದ ಕಾರಣ ಆತ ಹೀಗೆ ಎಚ್‌ಐವಿ ಸೋಂಕಿರುವ ರಕ್ತವನ್ನು ಇಂಜೆಕ್ಟ್ ಮಾಡಿಸಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ತನಿಖೆ ನಡೆಸಿದ ಪೊಲೀಸರಿಗೆ ಈ ಮಹಿಳೆಗೆ ಚುಚ್ಚುಮದ್ದು ಕೊಟ್ಟಿದ್ದು ಒಬ್ಬ ನಕಲಿ ವೈದ್ಯ ಎಂಬುದು ಗೊತ್ತಾಗಿದೆ. ಪತಿಯನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Italian Man | ಪುರುಷರ ಜತೆ ಲೈಂಗಿಕ ಕ್ರಿಯೆ, ಇಟಲಿ ವ್ಯಕ್ತಿಗೆ ಒಮ್ಮೆಗೇ ಮಂಕಿಪಾಕ್ಸ್, ಎಚ್‌ಐವಿ, ಕೊರೊನಾ ದೃಢ