ಮುಂಬೈ: ಮದುವೆಯಾಗಲು ಒಪ್ಪದ ಮಹಿಳೆಯ 6 ವರ್ಷದ ಪುತ್ರಿಯನ್ನು ಅಪಹರಿಸಿದ ದುರುಳನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಮಹಾರಾಷ್ಟ್ರದ (Maharashtra) ಬುಲ್ದಾನ ಜಿಲ್ಲೆಯಲ್ಲಿ ರೈಲಿನ ಶೌಚಾಲಯದಲ್ಲಿ 35 ವರ್ಷದ ರತಿಶಂಕರ್ ಘೋಷ್ (Rathinshankar Ghosh) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಕೋಲ್ಕೊತಾ ಮೂಲದ ರತಿಶಂಕರ್ ಘೋಷ್ ಎಂಬಾತನು ಮುಂಬೈನ ನಾಗ್ಪದದಿಂದ ಆರು ವರ್ಷದ ಬಾಲಕಿಯನ್ನು ಅಪಹರಿಸಿದ್ದಾನೆ ಎಂಬ ಕುರಿತು ಮೊದಲು ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಇದಾದ ಬಳಿಕ ಪೊಲೀಸರು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆರ್‌ಪಿಎಫ್ ಸಿಬ್ಬಂದಿಯು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ ವ್ಯಕ್ತಿಯು ಬಾಲಕಿಯನ್ನು ಕರೆದುಕೊಂಡು ಶಾಲಿಮಾರ್ ಎಕ್ಸ್‌ಪ್ರೆಸ್ ರೈಲು ಹತ್ತಿರುವುದು ಗೊತ್ತಾಗಿದೆ.
ಬಂಧಿಸಿದ್ದು ಹೇಗೆ?
ವ್ಯಕ್ತಿಯನ್ನು ಬಂಧಿಸಲು ಆರ್‌ಪಿಎಫ್ ಸಿಬ್ಬಂದಿಯು ರೈಲು ಸಂಚರಿಸುವ ಆಯಾ ರೈಲು ನಿಲ್ದಾಣಗಳಲ್ಲಿ ಇನ್ನಿಲ್ಲದ ತಪಾಸಣೆ ನಡೆಸಿದ್ದಾರೆ. ಆದರೂ ರತಿಶಂಕರ್ ಘೋಷ್ ಪೊಲೀಸರಿಗೆ ಸಿಕ್ಕಿಲ್ಲ. ಕೊನೆಗೆ ಆತ ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡಿರುವುದನ್ನು ಪತ್ತೆಹಚ್ಚಿದ ಸಿಬ್ಬಂದಿಯು ಬುಲ್ದಾಣ ಜಿಲ್ಲೆಯಲ್ಲಿ ಆರ್‌ಪಿಎಫ್ ಸಿಬ್ಬಂದಿ ಹಾಗೂ ಶೆಗಾಂವ್ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದಾದ ಬಳಿಕ ಬಾಲಕಿಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: Pakistan: ದೇಗುಲ ಧ್ವಂಸ ಬೆನ್ನಲ್ಲೇ 30 ಪಾಕ್ ಹಿಂದೂಗಳ ಅಪಹರಣ! ನೆರವಿಗೆ ಮನವಿ ಮಾಡಿದ ಆಯೋಗ
ಬಾಲಕಿಯನ್ನು ಬೋಗಿಯೊಂದರ ಆಸನದ ಕೆಳಗೆ ಮಲಗಿಸಿ, ಆಕೆಯ ಮೇಲೆ ಬೆಡ್‌ಶೀಟ್ ಹಾಕಿದ್ದಾನೆ. ಇದಾದ ಬಳಿಕ ಪೊಲೀಸರ ಕೈಗೆ ಸಿಗಬಾರದು ಎಂದು ಶೌಚಾಲಯದಲ್ಲಿ ಅಡಗಿದ್ದಾನೆ. ಬಂಧನದ ಬಳಿಕ ಆತ ಬಾಲಕಿ ಇರುವ ಸ್ಥಳವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಮದುವೆಯಾಗು ಎಂದು ಬಾಲಕಿಯ ತಾಯಿಯನ್ನು ರತಿಶಂಕರ್ ಘೋಷ್ ಪೀಡಿಸುತ್ತಿದ್ದ. ಆದರೆ, ಈತನನ್ನು ಮದುವೆಯಾಗಲು ಮಹಿಳೆ ಒಪ್ಪಿರಲಿಲ್ಲ. ಹಾಗಾಗಿ, ಪುತ್ರಿಯನ್ನು ಅಪಹರಿಸಿ, ಮದುವೆಯಾಗು ಎಂಬುದಾಗಿ ಬ್ಲ್ಯಾಕ್‌ಮೇಲ್ ಮಾಡುವುದು ಆತನ ಉದ್ದೇಶವಾಗಿತ್ತು ಎಂದು ತಿಳಿದುಬಂದಿದೆ.