Site icon Vistara News

ಪತ್ನಿಯ ಸಂತೋಷಕ್ಕಾಗಿ 7ವರ್ಷದ ಮಗನನ್ನು ಕೊಂದ ದುರುಳ; ಕೂಲರ್​ ಆಸೆ ತೋರಿಸಿ ಕತ್ತು ಕೊಯ್ದ!

Man Killed Son For his 3rd Wife Happiness in Indore

#image_title

ಈ ಅಪ್ಪನಿಗೆ ಪತ್ನಿಯ ಮಾತು ಕೇಳಿ, ತಾನು ಹುಟ್ಟಿಸಿದ ಮಗನನ್ನೇ ಕೊಲ್ಲಲು ಅದು ಹೇಗಾದರೂ ಮನಸು ಬಂತೋ?-ಇಂಥದ್ದೊಂದು ದಾರುಣ ಘಟನೆ ಮಧ್ಯಪ್ರದೇಶದ ಇಂದೋರ್ (Indore News)​​ನಲ್ಲಿ ನಡೆದಿದೆ. ಏಳು ವರ್ಷದ ಬಾಲಕ ತನ್ನ ಅಪ್ಪನಿಂದಲೇ ಹತ್ಯೆಗೀಡಾಗಿದ್ದಾನೆ. 3ನೇ ತರಗತಿ ಬಾಲಕ ಪ್ರತೀಕ್​ ಭಾನುವಾರ ರಾತ್ರಿ, ಎಂದಿನಂತೆ ತನ್ನ ಅಜ್ಜ-ಅಜ್ಜಿ ಬಳಿ ಮಲಗಿದ್ದ. ಅದೇ ವೇಳೆ ಅವನಪ್ಪ ಶಶಿಪಾಲ್​ ಮುಂಡೆ ಅಲ್ಲಿಗೆ ಬಂದು, ಪ್ರತೀಕ್​ನನ್ನು ಎಬ್ಬಿಸಿ ಕರೆದುಕೊಂಡು ಹೋಗಿದ್ದಾನೆ. ನಮ್ಮ ರೂಮಿನಲ್ಲಿ ಕೂಲರ್​ ಇದೆ, ಅಲ್ಲಿಗೆ ಬಂದು ಮಲಗು ಎಂದು ಕರೆದುಕೊಂಡು ಹೋಗಿ, ಕೊಂದಿದ್ದಾನೆ.

ಶಶಿಪಾಲ್​ ಸಿಂಗ್​ (26) ಮತ್ತು ಪಾಯಲ್​ (23)ಇಬ್ಬರೂ ಗಂಡ-ಹೆಂಡತಿ. ಆದರೆ ಇಲ್ಲಿ ಶಶಿಪಾಲ್​ ಸಿಂಗ್​​ಗೆ ಪಾಯಲ್​ ಮೂರನೇ ಪತ್ನಿ. ಇತ್ತೀಚೆಗೆ ಪಾಯಲ್​ಗೆ ಗಂಡು ಮಗು ಹುಟ್ಟಿದ್ದರಿಂದ ಆಕೆ ತವರುಮನೆಗೆ ಹೋಗಿ, ಅಲ್ಲಿಯೇ ಇದ್ದಳು. ಆದರೆ ಅವಳು ವಾಪಸ್ ಬರಲು ಒಪ್ಪುತ್ತಿರಲಿಲ್ಲ. ಆಕೆಗಿದ್ದ ದೊಡ್ಡ ಸಮಸ್ಯೆ ಎಂದರೆ ಶಶಿಪಾಲ್ ಸಿಂಗ್​​ನ ಮೊದಲ ಪತ್ನಿಯ ಮಗ ಪ್ರತೀಕ್. ಅವನನ್ನು ಕಂಡರೆ ಪಾಯಲ್​ಗೆ ಆಗುತ್ತಿರಲಿಲ್ಲ. ಮನೆಯಲ್ಲಿದ್ದಾಗಲೂ ಸದಾ ಬೈಯುತ್ತಲೇ ಇರುತ್ತಿದ್ದಳು. ಆ ಮಗನನ್ನು ಎಲ್ಲಿಗಾದರೂ ಕಳಿಸಿ, ಇಲ್ಲವೇ ಕೊಂದು ಬಿಡಿ. ಹಾಗಿದ್ದರೆ ಮಾತ್ರ ವಾಪಸ್ ಬರುತ್ತೇನೆ ಎಂದು ಹೇಳುತ್ತಿದ್ದಳು. ಪ್ರತೀಕ್​ ನೆರಳು ಕಂಡರೆ ಸದಾ ದ್ವೇಷ ಕಾರುತ್ತಿದ್ದ ಪತ್ನಿ ಪಾಯಲ್​​ಳನ್ನು ಸಂತುಷ್ಟ ಪಡಿಸಿ, ಆಕೆಯನ್ನು ಹೇಗಾದರೂ ಮನೆಗೆ ಕರೆದುಕೊಂಡು ಬರಬೇಕು ಎಂಬ ಉದ್ದೇಶದಿಂದ ಶಶಿಪಾಲ್ ತನ್ನ ಮೊದಲ ಪತ್ನಿಯ ಮಗನನ್ನು ಹತ್ಯೆಗೈದಿದ್ದ. ಈ ಬಗ್ಗೆ ಪೊಲೀಸ್ ಅಧಿಕಾರಿ ಜೈವೀರ್ ಸಿಂಗ್​ ಭಡೋರಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: Murder Case: ಒಂಟಿ ಮಹಿಳೆಯರೇ ಟಾರ್ಗೆಟ್‌; ಹಣಕ್ಕಾಗಿ ಹತ್ಯೆ ಮಾಡಿದ ಹಂತಕ ಅರೆಸ್ಟ್‌

ಹಾಗೇ, ಭಾನುವಾರ ಅಜ್ಜ-ಅಜ್ಜಿ ಬಳಿ ಮಲಗಿದ್ದ ಪ್ರತೀಕ್​​ನ ಬಳಿ ಬಂದ ಶಶಿಪಾಲ್ ಅವನನ್ನು ತನ್ನ ರೂಮಿಗೆ ಬರುವಂತೆ ಕರೆದಿದ್ದಾನೆ. ಅಪ್ಪ ಕೂಲರ್​ ಬಗ್ಗೆ ಹೇಳುತ್ತಿದ್ದಂತೆ ಫುಲ್ ಖುಷಿಯಾದ ಆ ಹುಡುಗ ಅಲ್ಲಿಗೆ ತೆರಳಿದ್ದಾನೆ. ಜತೆಗಿದ್ದ ಅಪ್ಪನ ಪಕ್ಕದಲ್ಲಿ ನೆಮ್ಮದಿಯಿಂದ ಮಲಗಿ, ನಿದ್ರಿಸಿದ್ದಾನೆ. ಇತ್ತ ಈ ಹುಡುಗ ನಿದ್ದೆ ಮಾಡುತ್ತಿದ್ದಂತೆ ಅಪ್ಪ ಕಾರ್ಯಪ್ರವೃತ್ತನಾಗಿದ್ದಾನೆ. ಟಿವಿ ಆಫ್​ ಮಾಡಿ, ಮಗನ ಕತ್ತು ಕೊಯ್ದಿದ್ದಾನೆ. ಅಷ್ಟಲ್ಲದೆ ತನ್ನ ಕೃತ್ಯದ ಬಳಿಕ ಪತ್ನಿಗೆ ವಿಡಿಯೊ ಕಾಲ್​ ಮಾಡಿದ್ದಾನೆ. ಆದರೆ ಅದು ಕನೆಕ್ಟ್ ಆಗಿರಲಿಲ್ಲ. ಬಳಿಕ ಮಗನ ಶವವನ್ನು ವಿಡಿಯೊ ಮಾಡಿ, ಪತ್ನಿ ಪಾಯಲ್​ಗೆ ಕಳಿಸಿದ್ದಾನೆ. ಆದರೆ ಕೋಪಗೊಂಡ ಪಾಯಲ್​ ಗಂಡನ ನಂಬರ್ ಬ್ಲಾಕ್ ಮಾಡಿಟ್ಟುಕೊಂಡಿದ್ದಳು. ಹೀಗಾಗಿ ಅವಳಿಗೆ ವಿಡಿಯೊ ರೀಚ್ ಆಗಲಿಲ್ಲ. ಅಷ್ಟಾದ ಬಳಿಕ ಶಶಿಪಾಲ್ ಓಡಿಹೋಗಿದ್ದ.

ಅಜ್ಜ-ಅಜ್ಜಿ ಕೊಟ್ಟ ದೂರಿನ ಅನ್ವಯ ಶಶಿಪಾಲ್​ ಮತ್ತು ಆತನ ಪತ್ನಿ ಪಾಯಲ್​​ಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ನಾನೇನೂ ಮಾಡಲಿಲ್ಲ ಎಂದು ಮೊದಲು ಪಾಯಲ್ ಹೇಳಿದ್ದಾಳೆ. ಆದರೆ ನಂತರ ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version