Site icon Vistara News

ಚಹಾ ಮಾಡುತ್ತಿದ್ದ ಅತ್ತೆಗೆ ಸುತ್ತಿಗೆಯಲ್ಲಿ ಹೊಡೆದು ಕೊಂದ ಸೋದರಳಿಯ; ಶವವನ್ನು 10 ತುಂಡುಗಳಾಗಿ ಕತ್ತರಿಸಿ ಬಕೆಟ್​​ನಲ್ಲಿ ತುಂಬಿದ!

Two killed as two bikes collide head on

ಜೈಪುರ: ದೆಹಲಿ ಶ್ರದ್ಧಾ ವಾಳ್ಕರ್​ ಹತ್ಯೆ ಮಾದರಿಯಲ್ಲೇ ರಾಜಸ್ಥಾನದ ಜೈಪುರದಲ್ಲಿ ಒಂದು ಕೊಲೆಯಾಗಿದೆ. ಇಲ್ಲೊಬ್ಬ 32ವರ್ಷದ ಯುವಕ ತನ್ನ 64 ವರ್ಷದ ಅತ್ತೆಯನ್ನು ಹತ್ಯೆ ಮಾಡಿ, ಮೃತದೇಹವನ್ನು 10 ತುಂಡುಗಳನ್ನಾಗಿ ಕತ್ತರಿಸಿ, ಬಕೆಟ್​​ನಲ್ಲಿ ತೆಗೆದುಕೊಂಡು ಹೋಗಿ ಹೆದ್ದಾರಿ ಪಕ್ಕದಲ್ಲಿ ಎಸೆದಿದ್ದಾನೆ. ಆರೋಪಿ ಹೆಸರು ಅನುಜ್​ ಶರ್ಮಾ ಎಂದಾಗಿದ್ದು, ಮೃತ ಅತ್ತೆ ಹೆಸರು ಸರೋಜಾ. ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ, ತನಿಖೆ ಪ್ರಾರಂಭಿಸಿದ್ದಾರೆ.

ಜೈಪುರದ ವಿದ್ಯಾನಗರ ಎಂಬಲ್ಲಿ ಅನುಜ್​ ತನ್ನ ತಂದೆ ಮತ್ತು ತಂಗಿ ಮತ್ತು ಅತ್ತೆಯೊಂದಿಗೆ ವಾಸವಾಗಿದ್ದ. ಈ ಸರೋಜಾ ತನ್ನ ಪತಿ ತೀರಿಕೊಂಡ ಮೇಲೆ ತವರುಮನೆಗೆ ಬಂದು ಇವರೊಂದಿಗೇ ಇದ್ದರು. ಇನ್ನು ಅನುಜ್​ ಅಮ್ಮ ಕೂಡ ಕಳೆದ ವರ್ಷ ಕೊವಿಡ್​ 19ನಿಂದ ಮೃತಪಟ್ಟಿದ್ದಾರೆ. ಡಿಸೆಂಬರ್​ 11ರಂದು ಅನುಜ್​ ಅಪ್ಪ ಮತ್ತು ತಂಗಿ ಮಧ್ಯಪ್ರದೇಶದ ಇಂಧೋರ್​ಗೆ ಹೋಗಿದ್ದರು. ಈತನಿಗೆ ಯಾವುದೋ ಕಾರ್ಯಕ್ರಮಕ್ಕೆ ದೆಹಲಿಗೆ ಹೋಗಬೇಕಿತ್ತು. ಆದರೆ ಸರೋಜಾ ಆತನನ್ನು ತಡೆದರು. ‘ಅಪ್ಪನೂ ಇಲ್ಲ, ನೀನು ದೆಹಲಿಗೆ ಹೋಗಬೇಡ’ ಎಂದು ಹೇಳಿದರು. ಇದರಿಂದ ಕುಪಿತಗೊಂಡ ಅನುಜ್​ ಅತ್ತೆಯೊಂದಿಗೆ ವಾಗ್ವಾದಕ್ಕೆ ಇಳಿದ. ಇಬ್ಬರ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಆಕೆ ಅನುಜ್​​ಗೆ ಬೈಯುತ್ತಲೇ ಹೋಗಿ ಚಹಾ ಮಾಡುತ್ತಿದ್ದರು. ತೀವ್ರ ಸಿಟ್ಟಿಗೆದ್ದ ಅನುಜ್ ಹಿಂಬದಿಯಿಂದ ಹೋಗಿ​ ಸುತ್ತಿಗೆಯಿಂದ ಸರೋಜಾ ತಲೆಗೆ ಹೊಡೆದಿದ್ದಾನೆ. ಆಕೆ ಸತ್ತಿದ್ದು ದೃಢಪಡುತ್ತಿದ್ದಂತೆ ಮೃತದೇಹವನ್ನು 10 ತುಂಡುಗಳನ್ನಾಗಿ ಕತ್ತರಿಸಿದ್ದಾನೆ. ಹೀಗೆ ಶವ ಕತ್ತರಿಸಲು ಅವನು ಮಾರ್ಬಲ್​ ಕತ್ತರಿಸುವ ಕಟ್ಟರ್​​ನ್ನು ಬಳಸಿದ್ದಾನೆ. ಬಳಿಕ ಒಂದು ಬಕೆಟ್ ಮತ್ತು ಸೂಟ್​​​ಕೇಸ್​​​​​ನಲ್ಲಿ ತುಂಬಿಕೊಂಡು, ಜೈಪುರ್​-ಸಿಕಾರ್​ ಹೆದ್ದಾರಿ ಗುಂಟ ಸಾಗಿ, ದುರ್ಗಮ ಪ್ರದೇಶವೊಂದರಲ್ಲಿ ಅದನ್ನೆಲ್ಲ ಎಸೆದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಇಷ್ಟೆಲ್ಲ ಆದ ಮೇಲೆ ಅನುಜ್​ ಪೊಲೀಸ್​ ಠಾಣೆಗೆ ಹೋಗಿ, ತನ್ನ ಅತ್ತೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾನೆ. ಅಷ್ಟಲ್ಲದೆ, ತನ್ನ ಇತರ ಸಂಬಂಧಿಕರ ಜತೆ ಸೇರಿಕೊಂಡು ಅತ್ತೆಯನ್ನು ಹುಡುಕುವ ನಾಟಕವನ್ನೂ ಆಡಿದ್ದಾನೆ. ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಎಲ್ಲೋ ಏನೋ ತಾಳೆಯಾಗುತ್ತಿಲ್ಲ, ಅನುಜ್​ ಹೇಳಿಕೆಗಳೆಲ್ಲ ಗೊಂದಲಕಾರಿಯಾಗಿವೆ ಎಂದು ಗೊತ್ತಾಗುತ್ತಿದ್ದಂತೆ ಮತ್ತಷ್ಟು ಗದರಿ ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಅನುಜ್​ ಮನೆ ಬಳಿಯ ಸಿಸಿಟಿವಿ ಫೂಟೇಜ್​ ಕೂಡ ಪರಿಶೀಲಿಸಿದ್ದಾರೆ. ಆಗ ಆತ ಒಂದು ಸೂಟ್​ಕೇಸ್​ ಮತ್ತು ಬಕೆಟ್​ ಹಿಡಿದು ಹೋಗುತ್ತಿರುವುದು ಕಾಣಿಸಿದೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಆತ ಒಪ್ಪಿಕೊಂಡಿದ್ದಾನೆ. ಇನ್ನು ಅನುಜ್​ ಬಿಟೆಕ್​ ಪದವೀಧರ ಆಗಿದ್ದು, ತುಂಬ ಬುದ್ಧಿವಂತ ಹುಡುಗ. ನಮ್ಮನ್ನೇ ಗೊಂದಲಕ್ಕೀಡುಮಾಡುವಂತೆ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ. ಅವರ ಅಡುಗೆ ಮನೆಯಲ್ಲೂ ಯಾವಾಗ ರಕ್ತ ಕಾಣಿಸಿತೋ, ಆಗಲೇ ಆತನೇ ಕೊಲೆಗಾರ ಎಂಬುದು ದೃಢಪಟ್ಟಿತ್ತು ಎಂದು ಜೈಪುರ ಪೊಲೀಸ್ ಆಯುಕ್ತ ಆನಂದ್​ ಶ್ರೀವಾಸ್ತವ್​ ಹೇಳಿದ್ದಾರೆ.

ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್​ ತನ್ನ ಪ್ರಿಯತಮ ಅಫ್ತಾಬ್​​ನಿಂದ ಹತ್ಯೆಯಾಗಿದ್ದು ದೇಶಾದ್ಯಂತ ಶಾಕ್​ ಉಂಟು ಮಾಡಿತ್ತು. ಯಾಕೆಂದರೆ ಆತ ಶ್ರದ್ಧಾಳ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ, ಫ್ರಿಜ್​​ನಲ್ಲಿಟ್ಟುಕೊಂಡು ಒಂದೊಂದೇ ದಿನ ಹೋಗಿ ಎಸೆದುಬಂದಿದ್ದ. ಆದರೆ ಅದಾದ ಮೇಲೆ ಇಂಥ ಮಾದರಿಯ ಕೊಲೆಗಳು ಪದೇಪದೆ ಬೆಳಕಿಗೆ ಬರುತ್ತಿವೆ. ಇದೊಂದು ಆತಂಕಕಾರಿ ಬೆಳವಣಿಗೆ ಎನ್ನಿಸಿದೆ.

ಇದನ್ನೂ ಓದಿ: Mudhol murder | ಅಪ್ಪನನ್ನು ಕೊಂದು 4 ದಿನದ ಬಳಿಕ ತಾಯಿ-ಅಣ್ಣನ ಬಳಿ ಬಾಯಿ ಬಿಟ್ಟಿದ್ದ ವಿಠಲ ಕುಳಲಿ!

Exit mobile version