Site icon Vistara News

ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದ ಮಗಳನ್ನು ಬಲಿಪಡೆದ ಅಪ್ಪನ ಸಿಟ್ಟು; ಊಟದ ವಿಷಯಕ್ಕೆ ನಡೆಯಿತು ಹತ್ಯೆ

Crime News

ಮುಜಾಫರ್​ನಗರ್​: ಜಗತ್ತಿನಲ್ಲಿ ಎಂತೆಂಥಾ ಕಾರಣಗಳಿಗೆ ಕೊಲೆಗಳು ನಡೆದು ಹೋಗುತ್ತವೆಯೋ? ದ್ವೇಷದಿಂದಾಗುವ ಹತ್ಯೆಗಳು ಬೇರೆಯಾದರೆ, ಕ್ಷಣಿಕ ಕೋಪಕ್ಕೆ ಆಗುವ ಕೊಲೆಗಳು ಒಂದಷ್ಟು. ಇದೀಗ ತಂದೆಯೊಬ್ಬ ಹೀಗೆ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು, ತನ್ನ 22 ವರ್ಷದ ಮಗಳನ್ನು ಹತ್ಯೆಯಾಗಿದ್ದಾರೆ. ಆಕೆ ಸರಿಯಾದ ಸಮಯಕ್ಕೆ ಊಟ ಕೊಡಲಿಲ್ಲ ಎಂಬ ಒಂದೇ ಕಾರಣಕ್ಕೆ ಅವಳ ಜೀವ ತೆಗೆದಿದ್ದಾರೆ. ಇನ್ನೂ ಒಂದು ದುರಂತವೆಂದರೆ, ಆ ಮಗಳು ಇನ್ನೊಂದೇ ವಾರದಲ್ಲಿ ಅಂದರೆ ಸೆಪ್ಟೆಂಬರ್​ 4ರಂದು ಮದುವೆಯಾಗಿ, ಪತಿಯ ಮನೆಗೆ ಹೋಗುವವಳಿದ್ದಳು. ಹೊಸ ಜೀವನ ಪ್ರಾರಂಭಿಸುವವಳಿದ್ದಳು. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಹಾಪುರ ಜಿಲ್ಲೆಯ, ಬಾಬುಗಢ ಎಂಬಲ್ಲಿ.

ತಂದೆಯ ಹೆಸರು ಫರಿಯಾದ್. ಇವರಿಗೆ ಒಟ್ಟು ಆರು ಜನ ಮಕ್ಕಳು. ಅದರಲ್ಲಿ ಕೊಲೆಯಾದ ಯುವತಿ ರೇಷ್ಮಾ. ಫರಿಯಾದ್​ ಊಟಕ್ಕೆಂದು ಬಂದು ಕುಳಿತಿದ್ದ. ಆದರೆ ಅಡುಗೆ ಆಗಿರಲಿಲ್ಲವೋ ಅಥವಾ ಬೇರೆನಾದರೂ ಆಯಿತೋ ಗೊತ್ತಿಲ್ಲ ಮಗಳು ರೇಷ್ಮಾ ತಂದೆಗೆ ಊಟ ಬಡಿಸುವುದನ್ನು ತಡ ಮಾಡಿದಳು. ಅದಕ್ಕಾಗಿ ಆತ ಒಂದೇ ಸಮ ಕೂಗಲು ಪ್ರಾರಂಭಿಸಿದ. ಹೀಗೆ ನಿರಂತರವಾಗಿ ಅಪ್ಪ ಬೈದಿದ್ದಕ್ಕೆ ರೇಷ್ಮಾ ಕೂಡ ಕೋಪಗೊಂಡಿದ್ದಳು. ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು. ನಂತರ ಫರಿಯಾದ್​ ಹುಲ್ಲು ಕತ್ತರಿಸುವ ಬ್ಲೇಡ್​ ತೆಗೆದುಕೊಂಡು ರೇಷ್ಮಾಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಫರಿಯಾದ್​​ನನ್ನು ಬಂಧಿಸಲಾಗಿದೆ.

ಫರಿಯಾದ್​​ನ ಆರು ಮಕ್ಕಳಲ್ಲಿ ರೇಷ್ಮಾ ಎರಡನೇಯವಳು. ಇನ್ನೊಂದು ವಾರದಲ್ಲಿ ಮದುವೆಯಾಗಿ ಹೋಗುತ್ತಿದ್ದಳು. ಆಕೆಯ ತಂದೆಯನ್ನು ಬಂಧಿಸಿದ್ದೇವೆ. ಜಿಲ್ಲಾ ಮ್ಯಾಜಿಸ್ಟ್ರೇಟ್​ ಎದುರು ಹಾಜರುಪಡಿಸಲಾಗುವುದು. ತನಿಖೆ ನಡೆಸುತ್ತೇವೆ ಎಂದು ಸ್ಥಳೀಯ ಎಸ್​ಪಿ ಮುಖೇಶ್​ ಚಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: KIDNAP CASE | ಹಣದ ವಿಚಾರಕ್ಕಾಗಿ ಮೊಮ್ಮಗನನ್ನೇ ಕಿಡ್ನ್ಯಾಪ್‌ ಮಾಡಿದ್ದ ತಾತ; ಪ್ರಕರಣ ಸುಖಾಂತ್ಯ!

Exit mobile version