ಕೋಲ್ಕತ್ತ: ಅಗತ್ಯವಿದ್ದಾಗ ಆಂಬ್ಯುಲೆನ್ಸ್ ಸಿಗದೆ, ಆ್ಯಂಬುಲೆನ್ಸ್ ಅಥವಾ ಇನ್ಯಾವುದೇ ಬಾಡಿಗೆ ವಾಹನಗಳಿಗೆ ಕೊಡಲು ಹಣವಿಲ್ಲದೆ, ಹೆಣ ಹೊತ್ತು ನಡೆದವರು, ಅನಾರೋಗ್ಯ ಪೀಡಿತ ವ್ಯಕ್ತಿಗಳನ್ನು ಕಂಬಳಿಯಲ್ಲಿ ಸುತ್ತಿ ಹೆಗಲ ಮೇಲೆ ಒಯ್ದವರ ಬಗ್ಗೆ ನಾವು ಓದಿದ್ದೇವೆ. ಅದೇ ಮಾದರಿಯ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇಲ್ಲಿನ ವ್ಯಕ್ತಿಯೊಬ್ಬ ತನ್ನ ಐದು ತಿಂಗಳ ಮಗುವಿನ ಶವವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಸುಮಾರು 200 ಕಿಮೀ ದೂರ ಬಸ್ನಲ್ಲಿ ಪ್ರಯಾಣ ಮಾಡಿದ್ದಾನೆ. ಡಾರ್ಜಲಿಂಗ್ ಜಿಲ್ಲೆಯ ಸಿಲಿಗುರಿಯಿಂದ ಉತ್ತರ ದಿನಾಜ್ಪುರದ ಕಾಳಿಗಂಜ್ವರೆಗೆ ಆತ ಆ ಪುಟ್ಟ ಶವದ ಜತೆ ಸಾಗಿದ್ದಾನೆ. ತಾನು ಅದೆಷ್ಟು ನೋವಿನಲ್ಲಿ ಈ ಪ್ರಯಾಣ ಮಾಡಬೇಕಾಯಿತು ಎಂಬುದನ್ನು ಅವನು ಹೇಳಿಕೊಂಡಿದ್ದಾನೆ.
ಆ ಅಪ್ಪನ ಹೆಸರು ಅಸಿಮ್ ದೇಬ್ಶ್ರಮಾ. ಈತ ಉತ್ತರ ದಿನಾಜ್ಪುರ ಜಿಲ್ಲೆಯ ದಂಜಿಪರಾ ಎಂಬ ಹಳ್ಳಿಯವನು. ಅವನ ಪತ್ನಿ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಮಕ್ಕಳು ಆರೋಗ್ಯವಾಗಿಯೇ ಬೆಳೆಯುತ್ತಿದ್ದರು. ಆದರೆ ಮೇ 7ರಂದು ಇಬ್ಬರೂ ಮಕ್ಕಳಿಗೆ ಕಾಯಿಲೆ ಬಂದಿತ್ತು. ಹೀಗಾಗಿ ಇಬ್ಬರನ್ನೂ ರಾಯ್ಗಂಜ್ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರ ಆರೋಗ್ಯ ಕ್ಷೀಣಿಸಿದ ಕಾರಣ ಇಬ್ಬರನ್ನೂ ಡಾರ್ಜಿಲಿಂಗ್ನಲ್ಲಿರುವ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿತ್ತು.
ಇದನ್ನೂ ಓದಿ: Accident News: 3ನೇ ಮಹಡಿಯಿಂದ ಬಿದ್ದು ಪೇಂಟರ್ ಸಾವು; ಆಂಬ್ಯುಲೆನ್ಸ್ ಬಾರದೆ ನಡು ರಸ್ತೆಯಲ್ಲೆ ಒದ್ದಾಡಿ ಪ್ರಾಣಬಿಟ್ಟ
ಮೇ 10ರಂದು ಒಂದು ಮಗುವಿನ ಆರೋಗ್ಯ ಸುಧಾರಿಸಿದ್ದರಿಂದ ಅವನನ್ನು ಡಿಸ್ಚಾರ್ಜ್ ಮಾಡಲಾಯಿತು. ಆ ಪುಟ್ಟ ಹುಡುಗನ ಅಮ್ಮ ಅವನನ್ನು ಕರೆದುಕೊಂಡು ಕಾಳಿಗಂಜ್ನಲ್ಲಿರುವ ಮನೆಗೆ ಬಂದರು. ಆದರೆ ಇನ್ನೊಂದು ಮಗುವಿನ ಆರೋಗ್ಯ ಹದಗೆಟ್ಟ ಕಾರಣ, ಅವನನ್ನು ಅಲ್ಲೇ ಇಟ್ಟುಕೊಂಡು ಅಪ್ಪ ಉಳಿದರು. ಈ ದಂಪತಿ ಬಡವರಾಗಿದ್ದ ಕಾರಣ ಅಷ್ಟೊಂದು ಹಣವೂ ಇರಲಿಲ್ಲ. ಮಕ್ಕಳ ಚಿಕಿತ್ಸೆಗೂ ಖರ್ಚಾಗುತ್ತಲೇ ಇತ್ತು. ಈ ಮಧ್ಯೆ ಎರಡನೇ ಮಗ ಉಸಿರು ನಿಲ್ಲಿಸಿದ. ಮಗನ ಶವವನ್ನು ತನ್ನ ಹಳ್ಳಿಗೆ ಕರೆದೊಯ್ಯಲು ಆಂಬ್ಯುಲೆನ್ಸ್ಗೆ ಕರೆ ಮಾಡಿದರು. ಸರ್ಕಾರದ ಆಂಬ್ಯುಲೆನ್ಸ್ ಉಚಿತ ಸೇವೆ ನೀಡಬೇಕು. ಆದರೆ ಆ ಚಾಲಕ 8000ರೂ. ಬೇಡಿಕೆಯಿಟ್ಟಿದ್ದ. ಅದನ್ನು ಕೊಡಲು ಸಾಧ್ಯವಿಲ್ಲದ ಅಸಿಮ್ ದೇಬ್ಶ್ರಮಾ ಮಗುವಿನ ಶವವನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಬಸ್ನಲ್ಲಿಯೇ ಪ್ರಯಾಣ ಮಾಡಿ ಊರು ತಲುಪಿದ್ದಾರೆ. ಮನೆಗೆ ಬಂದವರೇ ಒತ್ತಿಟ್ಟುಕೊಂಡಿದ್ದ ಅಳುವನ್ನೆಲ್ಲ ಹೊರಹಾಕಿದ್ದಾರೆ. ಸ್ಥಳೀಯ ಮಾಧ್ಯಮಗಳಿಗೆ ತನಗೊದಗಿದ ದುಃಸ್ಥಿತಿಯನ್ನು ವಿವರಿಸಿದ್ದಾರೆ.