ದೆಹಲಿಯ ಸರೋಜಿನಿ ನಗರದಲ್ಲಿರುವ ಲೀಲಾ ಪ್ಯಾಲೇಸ್ ಎಂಬ ಪಂಚತಾರಾ ಹೋಟೆಲ್ಗೆ 23 ಲಕ್ಷ ರೂಪಾಯಿ ಬಿಲ್ ವಂಚಿಸಿ, ಪರಾರಿಯಾಗಿದ್ದ ಮೊಹಮ್ಮದ್ ಶರೀಫ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. 41 ವರ್ಷ ವಯಸ್ಸಿನ ಇವನನ್ನು ಈಗ ದೆಹಲಿ ಪೊಲೀಸರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಂಧಿಸಿದ್ದಾರೆ. ತಾನು ಕರ್ನಾಟಕದವನೇ ಎಂದು ಪೊಲೀಸರ ಎದುರು ಶರೀಫ್ ಬಾಯ್ಬಿಟ್ಟಿದ್ದಾಗಿ ವರದಿಯಾಗಿದೆ.
ಮೊಹಮ್ಮದ್ ಶರೀಫ್ ಆಗಸ್ಟ್ ತಿಂಗಳಲ್ಲಿ ಲೀಲಾ ಪ್ಯಾಲೆಸ್ ಹೋಟೆಲ್ಗೆ ಹೋಗಿದ್ದ. ತಾನು ಯುಎಇಯಿಂದ ಬಂದಿದ್ದೇನೆ. ಅಭುದಾಬಿ ರಾಜಮನೆತನದವರಾದ ಶೇಖ್ ಫಲಾಹ್ ಬಿನ್ ಜಾಯೇದ್ ಅಲ್ ನಹ್ಯಾನ್ ಅವರಿಗೆ ಆಪ್ತನಾಗಿದ್ದೆ. ನಾನು ಅಲ್ಲಿಯೇ ಕೆಲಸ ಮಾಡುತ್ತಿದ್ದೆ. ಈಗಲೂ ಯುಎಇ ಸರ್ಕಾರದೊಂದಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲ, ಯುಎಇ ನಿವಾಸಿ ಎಂಬುದನ್ನು ನಂಬಿಸಲು ಅಲ್ಲಿನ ಒಂದು ಫೇಕ್ ಐಡಿ ಕಾರ್ಡ್ ಕೂಡ ಕೊಟ್ಟು ಹೋಟೆಲ್ ಸಿಬ್ಬಂದಿಯನ್ನು ನಂಬಿಸಿದ್ದ. ಆದರೆ ನವೆಂಬರ್ ತಿಂಗಳಲ್ಲಿ ಯಾರಿಗೂ ಹೇಳದೆ ಕೇಳದೆ ಹೋಟೆಲ್ನಿಂದ ಪರಾರಿಯಾಗಿದ್ದ. ಹಾಗೆ ಹೋಗುವಾಗ ತಾನು ಉಳಿದುಕೊಂಡಿದ್ದ ರೂಂ ನಂಬರ್ 172ರಲ್ಲಿ ಇದ್ದ ಬೆಳ್ಳಿಯ ಪಾತ್ರೆಗಳು, ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದ. ಜನವರಿ 13ರಂದು ಹೋಟೆಲ್ನವರು ಪೊಲೀಸರಿಗೆ ದೂರು ಕೊಟ್ಟಾಗಲೇ ಈ ಪ್ರಕರಣ ಬೆಳಕಿಗೆ ಬಂದಿತ್ತು. ಒಟ್ಟು 35 ಲಕ್ಷ ರೂಪಾಯಿ ಬಿಲ್ ಆಗಿದ್ದು, ಅದರಲ್ಲಿ 11.5 ಲಕ್ಷ ರೂಪಾಯಿ ಪಾವತಿಸಿದ್ದಾನೆ. ಇನ್ನೂ 23 ಲಕ್ಷ ರೂಪಾಯಿ ಕೊಡುವುದು ಬಾಕಿ ಇದೆ ಎಂದು ಹೋಟೆಲ್ನವರು ದೂರಿನಲ್ಲಿ ಉಲ್ಲೇಖಿಸಿದ್ದರು. ಮೊಹಮ್ಮದ್ ಶರೀಫ್ಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದರು.
ಈಗ ಪೊಲೀಸರಿಂದ ಬಂಧಿತನಾಗಿರುವ ಮೊಹಮ್ಮದ್ ಶರೀಫ್ ‘ನಾನೊಬ್ಬ ಸ್ನಾತಕೋತ್ತರ ಪದವೀಧರ. ಆದರೆ ನಿರುದ್ಯೋಗಿ. ಹಲವು ಉದ್ಯಮಗಳನ್ನು ಪ್ರಾರಂಭಿಸಿದೆ. ಆದರೆ ಯಾವುದೂ ಯಶಸ್ಸು ಕಾಣಲಿಲ್ಲ. ದುಬೈಗೂ ಹೋಗಿ, ಅಲ್ಲಿ ರಿಯಲ್ ಎಸ್ಟೇಟ್ ಮತ್ತು ಮರಳು ಉದ್ದಿಮೆ ನಡೆಸಿದೆ’ ಎಂದು ಹೇಳಿಕೊಂಡಿದ್ದಾನೆ. ಹಾಗೇ, ನಾನು ಈ ಹಿಂದೆ ಮುಂಬಯಿ, ಬೆಂಗಳೂರಿನ ಕೆಲವು 5 ಸ್ಟಾರ್ ಹೋಟೆಲ್ಗಳಲ್ಲೂ ತಂಗಿದ್ದೆ. ಅಲ್ಲಿ ಬಿಲ್ ಸಂಪೂರ್ಣವಾಗಿ ಪಾವತಿಸಿದ್ದೇನೆ. ಈಗಲೂ ದೆಹಲಿ ಹೋಟೆಲ್ಗೆ ಉಳಿದ ಹಣ ಕೊಡುತ್ತೇನೆ ಎಂದೇ ಆತ ಹೇಳುತ್ತಿದ್ದಾನೆಂದು ಪೊಲೀಸ್ ಅಧಿಕಾರಿ ಮನೋಜ್ ಸಿ ಎಂಬುವರು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಐಷಾರಾಮಿ ಹೋಟೆಲ್ಗೆ 23 ಲಕ್ಷ ರೂ. ಬಿಲ್ ವಂಚಿಸಿದ ವ್ಯಕ್ತಿ; ಅಬುಧಾಬಿ ರಾಜಮನೆತನದ ಉದ್ಯೋಗಿ ಎಂದು ಬಂದು ಸೇರಿದ್ದ!
ಹಾಗೇ, ಯುಎಇ ಸರ್ಕಾರದ ಜತೆ ನಿಜಕ್ಕೂ ಸಂಪರ್ಕವಿದೆಯಾ ಎಂದು ಕೇಳಿದ್ದಕ್ಕೆ, ‘ಹೌದು ಕೆಲವು ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಸಂಪರ್ಕ ಹೊಂದಿದ್ದೇನೆ’ ಎಂದೇ ಶರೀಫ್ ಹೇಳುತ್ತಿದ್ದಾನೆ. ಆದರೆ ನಾವು ಈ ವಿಚಾರವನ್ನು ಇನ್ನಷ್ಟು ತನಿಖೆ ನಡೆಸುತ್ತಿದ್ದೇವೆ ಎಂದೂ ಪೊಲೀಸರು ತಿಳಿಸಿದ್ದಾರೆ. ‘ಶರೀಫ್ ಪತ್ತೆಗಾಗಿ ನಾವು ವಿವಿಧ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದೆವು. ಆತನ ಮೊಬೈಲ್ ನಂಬರ್ ಸ್ವಿಚ್ ಆಫ್ ಬರುತ್ತಿತ್ತು. ಆದರೆ ನೋಂದಣಿಯಾಗಿದ್ದು ಕರ್ನಾಟಕದಲ್ಲಿ ಎಂಬುದು ಗೊತ್ತಾಯಿತು. ಕರ್ನಾಟಕದ ಹಲವು ಭಾಗಗಳಲ್ಲಿ ಶೋಧ ನಡೆಸಿದ ಬಳಿಕ, ಪುತ್ತೂರಿನಲ್ಲಿ ಪತ್ತೆಯಾಗಿದ್ದಾನೆ’ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ರಾಷ್ಟ್ರಮಟ್ಟದ ಇನ್ನಷ್ಟು ಸುದ್ದಿಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: http://vistaranews.com/attribute-category/national/