ಬೆಂಗಳೂರು: ಶುಕ್ರವಾರ (ಆಗಸ್ಟ್ 11) ಸಂಜೆ 4.30ರ ಹೊತ್ತಿಗೆ ಬಿಬಿಎಂಪಿ ಕಚೇರಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ (BBMP Quality Control lab) ಸಂಭವಿಸಿದ ಅಗ್ನಿ ದುರಂತದಲ್ಲಿ (BBMP Fire Accident) ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅವರ ಶಾರೀರಿಕ ಗಾಯಗಳ ಜತೆ ಕೆಲವೊಂದು ಮಾನಸಿಕ ಹೊಡೆತಗಳೂ ಬೀಳುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ (Victoria Hospital) ಟ್ರಾಮಾ ಸೆಂಟರ್ ನಲ್ಲಿ ಚಿಕಿತ್ಸೆ ನಡೆಯುತ್ತಿರುವ ಸಿಬ್ಬಂದಿಗಳ ಪೈಕಿ ಒಬ್ಬ ಯುವತಿಯ ಮದುವೆ ಎಂಗೇಜ್‌ಮೆಂಟ್ ಕ್ಯಾನ್ಸಲ್ (Marriage Engagement cancel) ಆಗಿದೆ ಎಂಬ ಮಾತು ಕೇಳಿಬರುತ್ತಿದೆ.
ಈ ಸಿಬ್ಬಂದಿಗೆ ಇನ್ನು ಒಂದು ತಿಂಗಳಲ್ಲಿ ಮದುವೆ ನಿಶ್ಚಿತಾರ್ಥ ನಡೆಯಬೇಕಾಗಿತ್ತು. ಇದಕ್ಕಾಗಿ ಎರಡೂ ಮನೆಗಳಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ, ಈಗ ಯುವತಿಗೆ ಬೆಂಕಿ ಅವಘಡದಲ್ಲಿ ಗಾಯಗಳಾಗಿರುವುದರಿಂದ ಆಕೆಯ ಎಂಗೇಜ್‌ಮೆಂಟ್ ಕ್ಯಾನ್ಸಲ್ ಆಗಿದೆ ಎನ್ನಲಾಗಿದೆ.
ಯುವತಿಗೆ ಬೆಂಕಿಯಲ್ಲಿ ತೀವ್ರ ಗಾಯಗಳಾಗಿರುವುದಿಂದ ಈ ಮದುವೆ ಬೇಡ ಎಂಬ ಎಂಬರ್ಥದಲ್ಲಿ ವರನ ಮನೆಯವರು ಮಾತನಾಡುತ್ತಿದ್ದಾರೆ. ಸದ್ಯಕ್ಕೆ ಎಂಗೇಜ್‌ಮೆಂಟ್ ಬೇಡ, ಮುಂದೆ ನೋಡೋಣ ಎಂದು ವರನ ಕುಟುಂಬಿಕರು ಹೇಳಿದ್ದರಿಂದ ಯುವತಿ ಮನೆಯವರಿಗೆ ಆಘಾತ ಉಂಟಾಗಿದೆ.
ಗಾಯಾಳುಗಳು ಯಾರೆಲ್ಲ?
ಚೀಫ್ ಎಂಜಿನಿಯರ್ ಶಿವಕುಮಾರ್, ಕಾರ್ಯನಿರ್ವಾಹಕ ಎಂಜಿನಿಯರ್ ಕಿರಣ್, ಆಪರೇಟರ್ ಜ್ಯೋತಿ, ಗಣಕಯಂತ್ರ ನಿರ್ವಾಹಕರಾದ ಮನೋಜ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್, ಪ್ರಥಮ ದರ್ಜೆ ಸಹಾಯಕ ಸೀರಾಜ್, ಕಾರ್ಯಪಾಲಕ ಅಭಿಯಂತರ ಶ್ರೀಧರ್, ಕಾರ್ಯಪಾಲಕ ಅಭಿಯಂತರ ಸಂತೋಷ್ ಕುಮಾರ್, ಕಾರ್ಯಪಾಲಕ ಅಭಿಯಂತರರಾದ ವಿಜಯಮಾಲಾ ಗಾಯಾಳುಗಳು.
ಇದನ್ನೂ ಓದಿ: BBMP Fire accident: BBMP ಬೆಂಕಿ ಪ್ರಕರಣದಲ್ಲಿ ಬಿಜೆಪಿ ಕೈವಾಡ ನಿರಾಕರಿಸಿದ ಡಿ.ಕೆ.ಶಿ; ಕಾಂಗ್ರೆಸ್ ಟ್ವೀಟ್ DELETE
ಆವತ್ತು ಬಿಬಿಎಂಪಿ ಕ್ವಾಲಿಟಿ ಕಂಟ್ರೋಲ್ ರೂಂನಲ್ಲಿ ನಡೆದಿದ್ದೇನು?
ಶುಕ್ರವಾರ ಸಂಜೆ ಕ್ವಾಲಿಟಿ ಪರಿಶೀಲನೆ ಕೇಂದ್ರದಲ್ಲಿ ನಾಲ್ಕು ಗಂಟೆ ವೇಳೆಗೆ ಬಸವನಗುಡಿ ಭಾಗದ ಕಾಮಗಾರಿಯ ಕ್ವಾಲಿಟಿ ಚೆಕ್ ಮಾಡಲಾಗುತ್ತಿತ್ತು.. ರಸ್ತೆಗೆ ಹಾಕಲಾಗಿರುವ ಟಾರ್‌ನಲ್ಲಿ ಇರುವ ಬಿಟುಮಿನ್ ಕಂಟೆಂಟ್ ಪ್ರಮಾಣವನ್ನು ಪರೀಕ್ಷೆ ನಡೆಯುತ್ತಿತ್ತು.
ರೆಗ್ಯುಲರ್ ಆಗಿ ಪರೀಕ್ಷ ಮಾಡುವ ಸ್ಥಳದಲ್ಲೇ ಟೆಸ್ಟಿಂಗ್ ಮಾಡಲಾಗುತ್ತಿತ್ತು. ಡಿಗ್ರೂಪ್ ನೌಕರರಾಗಿರುವ ಸುರೇಶ್ ಅವರು ತರಬೇತಿ ಪಡೆದು ಕಳೆದ ವರ್ಷದಿಂದ ಟೆಸ್ಟಿಂಗ್ ಮಾಡುತ್ತಿದ್ದರು.
ಪರೀಕ್ಷೆ ಮಾಡುವಾಗ ಬೆಂಜೀನ್ ರಾಸಾಯನಿಕ ಸ್ವಲ್ಪ ಚೆಲ್ಲುತ್ತದೆ. ಸಾಮಾನ್ಯವಾಗಿ ಅದನ್ನು ಕೂಡಲೇ ಕ್ಲೀನ್ ಮಾಡಲಾಗುತ್ತದೆ. (ಮಾಡದಿದ್ದರೆ ಬೆಂಕಿ ಹತ್ತಿಕೊಳ್ಳುವ ಅಪಾಯವಿರುತ್ತದೆ. ಯಾಕೆಂದರೆ, ಬೆಂಜೀನ್ ತೀವ್ರ ದಹನಶೀಲ – highly Inflammable ರಾಸಾಯನಿಕ). ಈ ಬಾರಿ ಬೆಂಜೀನ್ ಕೆಮಿಕಲ್ ಕೈತಪ್ಪಿ ಅಥ್ವಾ ಲೀಕ್ ಆಗಿ ಕೆಳಗೆ ಬಿದ್ದಿತ್ತು ಅನಿಸುತ್ತದೆ. ಬೆಂಜೀನ್ ಹಾಕಿ ಪರೀಕ್ಷೆ ಮಾಡುವಾಗ ಸೋರಿಕೆ ಆಗುತ್ತದೆ ಎಂಬ ಕಾರಣಕ್ಕೆ ಬೆಂಜೀನ್‌ನ್ನು ಬಳಸಿ ಕೂಡಲೇ ಸ್ವಚ್ಛಗೊಳಿಸಿ ಅದರ ಕ್ಯಾನ್ ಅನ್ನು ದೂರದಲ್ಲೇ ಇಡಲಾಗುತ್ತದೆ. ಈ ಸಾರಿ ಕೆಳಗೆ ಇಟ್ಟ ಬೆಂಜೀನ್ ಕ್ಯಾನ್‌ನಿಂದ ಲೀಕೇಜ್ ಆಗಿತ್ತು.
ಸುರೇಶ್ ಅವರು ಕ್ಯಾನನ್ನು ಕೆಳಗೆ ಇಟ್ಟ ಬೆನ್ನಿಗೇ ಒಮ್ಮಿಂದೊಮ್ಮೆಗೆ ಬೆಂಕಿ ಹತ್ತಿಕೊಂಡಿತು. ಈ ಕ್ಯಾನ್‌ನ ಪಕ್ಕದಲ್ಲಿ ಬೆಂಜೀನ್‌ನ ಇನ್ನೂ ಎರಡು ಕ್ಯಾನ್‌ಗಳು ಇದ್ದವು. ಅದಕ್ಕೂ ಬೆಂಕಿ ಹತ್ತಿಕೊಂಡಿದ್ದರಿಂದ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಸುರೇಶ್ ಅವರು ಇನ್ನೆರಡು ಕ್ಯಾನ್‌ಗಳಿಗೆ ಬೆಂಕಿ ಹತ್ತಿಕೊಳ್ಳದಿರಲಿ ಎಂದು ಅವುಗಳನ್ನೂ ಎಳೆದು ಪಕ್ಕಕ್ಕಿಟ್ಟಿದ್ದರು. ರಭಸವಾಗಿ ಎಳೆಯುವಾಗ ಅವರು ಉರುಳಿ ಬೆಂಜೀನ್ ಲೀಕೇಜ್ ಆಗಿರುವ ಸಾಧ್ಯತೆ. ಹಾಗಿ ಉರುಳಿದ ಕ್ಯಾನ್‌ನಿಂದ ಬೆಂಜೀನ್ ಸೋರಿ ಅದು ಬಾಗಿಲಿನವರೆಗೆ ಬಂದಿರುವ ಸಾಧ್ಯತೆ ಇದೆ. ಹೀಗಾಗಿ ಬೆಂಕಿ ಬಾಗಿಲಿನವರೆಗೂ ಬಂದಿತ್ತು.- ಇದು ಒಬ್ಬ ಸಿಬ್ಬಂದಿ ನೀಡಿರುವ ವಿವರಣೆ.