ಉತ್ತರ ಪ್ರದೇಶದ ಮೋದಿನಗರದ ಹಾಸ್ಟೆಲ್ನಲ್ಲಿ ಇದ್ದುಕೊಂಡು, ಎಂಬಿಬಿಎಸ್ (ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ) ಓದುತ್ತಿದ್ದ ವಿದ್ಯಾರ್ಥಿನಿ ಶವ (MBBS Student), ಆಕೆಯ ಹಾಸ್ಟೆಲ್ ರೂಮಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವೈದ್ಯೆಯಾಗಬೇಕು ಎಂದು ಆಸೆಪಟ್ಟು ವ್ಯಾಸಂಗ ಮಾಡುತ್ತಿದ್ದ 24ವರ್ಷದ ದಿವ್ಯಜ್ಯೋತಿ ನೇಣಿಗೆ ಕೊರಳೊಡ್ಡಿದ್ದಾಳೆ.
ಗುರುವಾರ ದಿವ್ಯಜ್ಯೋತಿ ಎಷ್ಟೇ ಹೊತ್ತಾದರೂ ತನ್ನ ಕೋಣೆಯಿಂದ ಹೊರಬಿದ್ದಿರಲಿಲ್ಲ. ಹೀಗಾಗಿ ಅನುಮಾನಗೊಂಡ ಆಕೆಯ ಸ್ನೇಹಿತೆಯರು (ಹಾಸ್ಟೆಲ್ನಲ್ಲಿ ಜತೆಗೇ ಇದ್ದವರು) ಹೋಗಿ ಬಾಗಿಲು ಬಡಿದಿದ್ದಾರೆ. ಬಾಗಿಲು ಲಾಕ್ ಆಗಿತ್ತು. ಎಷ್ಟೇ ಬಡಿದರೂ ದಿವ್ಯಾ ಅದನ್ನು ತೆರೆಯುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಹಾಸ್ಟೆಲ್ ಹುಡುಗಿಯರು ದಿವ್ಯಜ್ಯೋತಿ ಮೊಬೈಲ್ಗೆ ಹತ್ತು-ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಆಕೆ ಫೋನ್ ಕೂಡ ಎತ್ತಲಿಲ್ಲ.
ದಿಗಿಲುಗೊಂಡ ಹುಡುಗಿಯರು ಕೂಡಲೇ ಹಾಸ್ಟೆಲ್ ಮಾಲೀಕ ಮನೋಜ್ ಕುಮಾರ್ಗೆ ವಿಷಯ ತಿಳಿಸಿದ್ದಾರೆ. ಇನ್ನು ಕೆಲವರೊಂದಿಗೆ ಅಲ್ಲಿಗೆ ಬಂದ ಮನೋಜ್ ಕುಮಾರ್ ಹಾಸ್ಟೆಲ್ನ ದಿವ್ಯಜ್ಯೋತಿ ಕೋಣೆಯ ಬಾಗಿಲನ್ನು ಒಡೆಸಿದ್ದಾರೆ. ಒಳಗೆ ಹೋಗುವಷ್ಟರಲ್ಲಿ ಅವಳ ಶವ ಕೋಣೆಯ ಸೀಲಿಂಗ್ ಫ್ಯಾನ್ಗೆ ನೇತಾಡುತ್ತಿತ್ತು. ಅಲ್ಲೇ ಒಂದು ಸೂಸೈಡ್ ನೋಟ್ ಕೂಡ ಇತ್ತು. ಅದರಲ್ಲಿ ಆಕೆ ತನ್ನ ಸಾವಿಗೆ ಕಾರಣವನ್ನೂ ಬರೆದಿಟ್ಟಿದ್ದಳು. ‘ನಾನು ಒಬ್ಬನನ್ನು ಮನಸಾರೆ ಪ್ರೀತಿಸುತ್ತಿದ್ದೆ. ಆದರೆ ಆತನೊಂದಿಗೆ ನನಗೆ ಬ್ರೇಕ್ಅಪ್ ಆಗಿದೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿಟ್ಟಿದ್ದಾಳೆ.
ಇದನ್ನೂ ಓದಿ: Cancer disease: ನನ್ನಿಂದಲೇ ಮಗಳಿಗೂ ಹರಡಿತು ಕ್ಯಾನ್ಸರ್; ಮನನೊಂದ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ
ಹಾಸ್ಟೆಲ್ ಮಾಲೀಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲಿಗೆ ಬಂದ ಡಿಸಿಪಿ ರವಿಕುಮಾರ್ ಮತ್ತು ಇತರ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿ, ದಿವ್ಯಾ ದೇಹವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಿದ್ದಾರೆ. ಈಕೆಯ ಲವ್ವರ್ನನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಲಾಗುವುದು ಎಂದೂ ತಿಳಿಸಿದ್ದಾರೆ.