ತೆಲಂಗಾಣದಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Medical Student) ಮಾಡಿಕೊಂಡಿದ್ದಾನೆ. ಆತ ತನ್ನನ್ನು ತಾನು ಕೊಂದುಕೊಳ್ಳಲು ವಿಚಿತ್ರವಾದ ಮಾರ್ಗ ಅನುಸರಿಸಿದ್ದಾನೆ. ದೀಕ್ಷಿತ್ ರೆಡ್ಡಿ (21) ಮೃತ ವಿದ್ಯಾರ್ಥಿ. ಈತ ಹೈದರಾಬಾದ್‌ನ ಹೊರವಲಯದಲ್ಲಿರುವ ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ, ಪಾಪಿರೆಡ್ಡಿನಗರದ ನಿವಾಸಿಯಾಗಿದ್ದ. ಮೆಡಿಕಲ್ ಕಾಲೇಜ್ವೊಂದರಲ್ಲಿ ಎಂಬಿಬಿಎಸ್ ಎರಡನೇ ವರ್ಷದಲ್ಲಿ ಓದುತ್ತಿದ್ದ. ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದೂ ತನ್ನ ಶಿಶ್ನವನ್ನು ಕತ್ತರಿಸಿಕೊಂಡು (Medical Student Cut Private Part).
ಭಾನುವಾರ ದೀಕ್ಷಿತ್ ಒಬ್ಬನೇ ಮನೆಯಲ್ಲಿದ್ದ. ಅವನ ಅಪ್ಪ-ಅಮ್ಮ ಹೊರಗೆ ಹೋಗಿದ್ದರು. ಸಂಜೆ ಬಂದು ಎಷ್ಟೇ ಸಲ ಬಾಗಿಲು ಬಡಿದರೂ ದೀಕ್ಷಿತ್ ರೆಡ್ಡಿ ಬಾಗಿಲು ತೆರೆಯಲಿಲ್ಲ. ಆಗ ಪಾಲಕರು ಕಿಟಕಿ ತೆರೆದು ಒಳಗೆ ನೋಡಿದ್ದಾರೆ. ದೀಕ್ಷಿತ್ ರಕ್ತದ ಮಡುವಲ್ಲಿ ಬಿದ್ದು ಹೊರಳಾಡುತ್ತಿದ್ದ. ಕೂಡಲೇ ಅವರು ಪೊಲೀಸರಿಗೆ, ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದು ಬಾಗಿಲು ತೆರೆದು ಒಳಗೆ ಹೋಗಿ, ದೀಕ್ಷಿತ್ನನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಿ ಅವನ ಜೀವ ಹೋಗಿತ್ತು. ಈತ ಖಾಸಗಿ ಅಂಗವನ್ನು ಕತ್ತರಿಸಿಕೊಂಡ ಬಳಿಕ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದ.
ಇದನ್ನೂ ಓದಿ: ಪತಿಗೆ ಬರ್ತ್ ಡೇ ವಿಶ್ ಮಾಡಲು ಬಂದ ಪತ್ನಿಗೆ ಆಘಾತ; ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ದೀಕ್ಷಿತ್ ರೆಡ್ಡಿ ಕಳೆದ ನಾಲ್ಕೈದು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ. ಚಿಕಿತ್ಸೆಯನ್ನೂ ಪಡೆಯುತ್ತಿದ್ದ. ಆತ ಕಾಯಂ ಆಗಿ ಔಷಧ ತೆಗೆದುಕೊಳ್ಳಬೇಕಿತ್ತು. ಆದರೆ ಮೂರು ತಿಂಗಳಿಂದ ದೀಕ್ಷಿತ್ ಮಾತ್ರೆಗಳನ್ನು ಬಿಟ್ಟಿದ್ದ. ಹೀಗಾಗಿ ಅವನ ಮಾನಸಿಕ ಸ್ಥಿತಿ ಮತ್ತೆ ಹದಗೆಟ್ಟಿತ್ತು ಎಂದು ಪಾಲಕರು ಹೇಳಿದ್ದಾರೆ. ದೀಕ್ಷಿತ್ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಆಗೆಲ್ಲ ಅವನನ್ನು ಕಾಪಾಡಲಾಗಿತ್ತು.