ನವ ದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಸುಲ್ತಾನ್ಪುರಿಯಲ್ಲಿ ಕಾರಿನಡಿಗೆ ಸಿಲುಕಿ ಮೃತಪಟ್ಟ ಯುವತಿ ಹೆಸರು ಅಂಜಲಿ ಎಂಬುದು ಗೊತ್ತಾಗಿದೆ. ಹಾಗೇ, ಅಂದು ಆಕೆ ಅಪಘಾತಕ್ಕೀಡಾಗುವಾಗ ಸ್ಕೂಟರ್ನಲ್ಲಿ ಒಬ್ಬಳೇ ಇರಲಿಲ್ಲ, ಜತೆಗೆ ಅವಳ ಸ್ನೇಹಿತೆ ನಿಧಿ ಎಂಬುವಳು ಇದ್ದಳು ಎಂಬ ವಿಷಯವೂ ಬೆಳಕಿಗೆ ಬಂದಿದೆ. ಹೀಗೆ ದೆಹಲಿ ಯುವತಿಯ ಭೀಕರ ಅಪಘಾತ ಕೇಸ್ಗೆ ಸಂಬಂಧಪಟ್ಟಂತೆ ಕ್ಷಣಕ್ಕೊಂದು ಮಾಹಿತಿಗಳು ಹೊರಬೀಳುತ್ತಿವೆ.
ಜನವರಿ 1ರಂದು ಕಾರಿನ ಅಡಿಯಲ್ಲಿ ಸಿಲುಕಿ 12 ಕಿಮೀ ದೂರ ಎಳೆಯಲ್ಪಟ್ಟ ಯುವತಿ ಅಂಜಲಿಯ ಜತೆಗೆ ಇದ್ದ ನಿಧಿ ಈಗ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದು ‘ನಮ್ಮ ಸ್ಕೂಟರ್ಗೆ ಕಾರು ಡಿಕ್ಕಿಯಾಯಿತು. ಆಗ ಅಂಜಲಿಯ ಕಾಲು ಕಾರಿನಡಿಗೆ ಸಿಲುಕಿತು. ಆಕೆ ತುಂಬ ದೊಡ್ಡದಾಗಿ ‘ಹೆಲ್ಪ್, ಹೆಲ್ಪ್ ಎಂದು ಕೂಗುತ್ತಿದ್ದಳು. ಆಕೆ ಕಾರಿನ ಅಡಿಗೆ ಸಿಲುಕಿದ್ದಾಳೆ ಎಂಬ ವಿಚಾರ ಅದರೊಳಗಿದ್ದವರಿಗೂ ಗೊತ್ತಿತ್ತು. ಆದರೂ ಅವರು ಕಾರು ನಿಲ್ಲಿಸಲಿಲ್ಲ. ಹಾಗೇಯೇ ಆಕೆಯನ್ನು ಎಳೆದುಕೊಂಡು ಹೋಗಿದ್ದಾರೆ. ಬೇಕೆಂದೇ ಅವಳನ್ನು ಎಳೆದಿದ್ದಾರೆ’ ಎಂದು ತಿಳಿಸಿದ್ದಾಳೆ. ‘ನನಗೆ ತುಂಬ ಭಯವಾಯಿತು, ಏನು ಮಾಡಬೇಕು ಎಂದು ಗೊತ್ತಾಗದೆ ಮನೆಗೆ ಬಂದೆ. ಹಾಗೇ ಬಂದ ಮೇಲೆ ಒಂಥರ ಅಪರಾಧಿ ಭಾವ ಕಾಡುತ್ತಿತ್ತು. ನನ್ನಮ್ಮನ ಬಳಿ ಎಲ್ಲವನ್ನೂ ಹೇಳಿದ್ದೆ’ ಎಂದು ಹೇಳಿದ್ದಾಳೆ.
ಮೊದಲು ಘಟನೆ ಬೆಳಕಿಗೆ ಬಂದಾಗ ಅಂಜಲಿ ಒಬ್ಬಳೇ ಸ್ಕೂಟರ್ನಲ್ಲಿ ಇದ್ದಿದ್ದಾಳೆ ಎಂದೇ ವರದಿಯಾಗಿತ್ತು. ಆದರೆ ಇಲ್ಲ ಇಬ್ಬರು ಇದ್ದರು ಎಂದು ಬಳಿಕ ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಂಜಲಿ-ನಿಧಿ ಇಬ್ಬರೂ ದೆಹಲಿಯ ರೋಹಿಣಿ ಏರಿಯಾದಲ್ಲಿರುವ ಒಂದು ಹೋಟೆಲ್ನಲ್ಲಿ ಹೊಸವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮುಂಜಾನೆ 3ಗಂಟೆ ಹೊತ್ತಿಗೆ ಅವರು ಹೋಟೆಲ್ನಿಂದ ಹೊರಬಿದ್ದರು. ಹೀಗೆ ಹೊರಬಿದ್ದವರು ಬೈಕ್ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ಪರಸ್ಪರ ಜಗಳವಾಡಿಕೊಂಡಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ಫೂಟೇಜ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯಾರು ಬೈಕ್ ಓಡಿಸಬೇಕು ಎಂಬ ವಿಚಾರಕ್ಕೆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಅಂತಿಮವಾಗಿ ಅಂಜಲಿ ಬೈಕ್ ಮುಂದೆ ಕುಳಿತು ಚಲಾಯಿಸಿದರೆ, ನಿಧಿ ಹಿಂದೆ ಕುಳಿತಿದ್ದರು. ಅಲ್ಲಿಂದ ಹೊರಟು ಸುಲ್ತಾನ್ಪುರಿ ಬಳಿ ತಲುಪುತ್ತಿದ್ದಂತೆ ಇವರ ಬೈಕ್ಗೆ ಕಾರು ಡಿಕ್ಕಿಯಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿದ್ದ ಐವರು ಆರೋಪಿಗಳಾದ ಮನೋಜ್ ಮಿತ್ತಲ್ (27), ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕೃಷ್ಣನ್ (27), ಮಿಥುನ್ (26)ರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಮನೋಜ್ ಮಿತ್ತಲ್ ಬಿಜೆಪಿ ಮುಖಂಡನಾಗಿದ್ದಾನೆ.
ಇದನ್ನೂ ಓದಿ: Accident in Delhi | ದೆಹಲಿಯ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್, ಸ್ಕೂಟಿಯಲ್ಲಿ ಇದ್ದದ್ದು ಒಬ್ಬರಲ್ಲ ಇಬ್ಬರು!