ನವ ದೆಹಲಿ: ಮನೆಯ ಸಮೀಪದ ರಸ್ತೆಯಲ್ಲಿ ಆಟವಾಡುತ್ತಿದ್ದ ಒಂಬತ್ತು ವರ್ಷದ ಬಾಲಕಿಯೊಬ್ಬಳನ್ನು 46 ವರ್ಷದ ಧೂರ್ತನೊಬ್ಬ ಆಮಿಷ ಒಡ್ಡಿ ಕಾರ್ಖಾನೆಯ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ ಘಟನೆ ದಿಲ್ಲಿಯ ನ್ಯೂ ಸೀಲಾಂಪುರ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಬಿಹಾರದ ಬೇಗುಸರಾಯ್ಗೆ ಸೇರಿದ ನರ್ವಡಾ ಎಂಬ ಹಳ್ಳಿಯ ಮೊಹಮ್ಮದ್ ಸಾಜಿದ್ ಎಂಬಾತನೇ ದೌರ್ಜನ್ಯ ನಡೆಸಿದವನು. ಬಾಲಕಿ ಬಾಲ್ಯದಿಂದಲೇ ಸಣ್ಣ ಮಟ್ಟಿನ ಮಾನಸಿಕ ಅಸ್ವಸ್ಥತೆ ಹೊಂದಿದ್ದು, ಈಕೆಯನ್ನು ಮರುಳುಗೊಳಿಸಿ ದುಷ್ಕೃತ್ಯ ಎಸಗಿದ್ದಾನೆ.
ಬಾಲಕಿ ಮನೆಯ ಸಮೀಪವೇ ಆಟವಾಡಿಕೊಂಡಿದ್ದಳು. ಅದೇ ಪ್ರದೇಶದ ಒಂದು ಕಾರ್ಖಾನೆಯಲ್ಲಿ ಮೊಹಮ್ಮದ್ ಕೆಲಸ ಮಾಡುತ್ತಿದ್ದ. ಮೊದಲೇ ಬಾಲಕಿಯ ಪರಿಚಯವಿದ್ದ ಈತ ಆಕೆಯನ್ನು ಪುಸಲಾಯಿಸಿ ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಗೇ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ.
ಬೆಳಗ್ಗೆ 11.15ರ ಸುಮಾರಿಗೆ ಈ ವಿಷಯ ಪೊಲೀಸರಿಗೆ ತಿಳಿದಿದ್ದು, ಕೂಡಲೇ ಧಾವಿಸಿದ್ದಾರೆ. ಅಷ್ಟು ಹೊತ್ತಿಗೆ ಬಾಲಕಿಯನ್ನು ಜೆಪಿಸಿ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ವಿಕೃತ ಕಾಮಿಯ ದೌರ್ಜನ್ಯಕ್ಕೆ ನರಳಿದ ಹಸು; ಕೂಗು ಕೇಳಿ ಹೋದ ಮಾಲೀಕ ದೃಶ್ಯ ನೋಡಿ ಬೆಚ್ಚಿ ನಿಂತಿದ್ದ !