ತ್ರಿಪುರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿಪ್ಲಬ್ ಕುಮಾರ್ ದೇಬ್ ಅವರ ಪೂರ್ವಜರ ಮನೆಗೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ಮನೆಯ ಬಳಿ ನಿಂತಿದ್ದ ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಹಾಗೇ, ಹತ್ತಿರದ ಅಂಗಡಿಗಳಿಗೂ ಬೆಂಕಿ ಹಚ್ಚಿದ್ದಾರೆ. ಬಿಪ್ಲಬ್ ಕುಮಾರ್ ದೇಬ್ ಅವರ ಅಜ್ಜಂದಿರು-ಅಪ್ಪ ಬಾಳಿ ಬದುಕಿದ್ದ ಈ ಮನೆ ಗೋಮತಿ ಜಿಲ್ಲೆಯ ಜಮ್ಜುರಿ ಗ್ರಾಮದಲ್ಲಿದೆ. ಇಂದು (ಜ.4) ಅವರ ತಂದೆ ಹಿರುಧನ್ ದೇಬ್ ಅವರ ವಾರ್ಷಿಕ ಪುಣ್ಯತಿಥಿ ಇತ್ತು. ಆದರೆ ನಿನ್ನೆ ರಾತ್ರಿ ಕೆಲವು ದುಷ್ಕರ್ಮಿಗಳ ಅಪ್ರಚೋದಿತವಾಗಿ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಮನೆ ಮತ್ತು ಅಂಗಡಿಗಳು ಹೊತ್ತಿ ಉರಿಯುವ ವಿಡಿಯೊ ವೈರಲ್ ಆಗಿದೆ.
ಈ ದುಷ್ಕೃತ್ಯ ನಡೆಸಿದ್ದು ಸಿಪಿಐಎಂ (ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಕಾರ್ಯಕರ್ತರು ಎಂದು ಬಿಜೆಪಿ ಆರೋಪಿಸಿದೆ. ದುಷ್ಕರ್ಮಿಗಳ ಗ್ಯಾಂಗ್ವೊಂದು ಬಂದು ಏಕಾಏಕಿ ದಾಳಿ ನಡೆಸಿದೆ. ಕಾರು, ಬೈಕ್ಗಳೆಲ್ಲ ಪುಡಿಪುಡಿಯಾಗಿವೆ. ಇನ್ನು ಬೆಂಕಿ ಹಾಕಿದ ಸಮಯದಲ್ಲಿ ಮನೆಯೊಳಗೆ ಯಾರೂ ಇರಲಿಲ್ಲ. ಹೀಗಾಗಿ ಯಾರಿಗೂ ಪ್ರಾಣಹಾನಿಯಾಗಲಿ, ಗಾಯವಾಗಲಿ ಆಗಿಲ್ಲ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇನ್ನು ತ್ರಿಪುರ ಸುಂದರಿ ದೇವಿ ದೇವಸ್ಥಾನದ ಅರ್ಚಕ ಜಿತೇಂದ್ರ ಕೌಶಿಕ್ ಮೇಲೆ ಕೂಡ ಈ ದುಷ್ಟರು ಹಲ್ಲೆ ನಡೆಸಿದ್ದಾರೆ ‘ಬುಧವಾರ (ಇಂದು) ದೇವಸ್ಥಾನದಲ್ಲಿ ಒಂದು ಪೂಜೆ ನಡೆಯಬೇಕಿತ್ತು. ಅದಕ್ಕೆ ಒಂದಷ್ಟು ಸಿದ್ಧತೆಗಳು ಆಗುವುದಿತ್ತು. ಹೀಗಾಗಿ ಒಂದು ಸಲ ಬಂದು ಹೋಗುವಂತೆ ಇಲ್ಲಿನ ಮುಖ್ಯ ಪುರೋಹಿತರು ನನಗೆ ಹೇಳಿದ್ದರು. ಆದರೆ ನಾನು ಬಂದು ಗಾಡಿ ನಿಲ್ಲಿಸುತ್ತಿದ್ದಂತೆ, ಅದನ್ನು ಪುಂಡರು ಧ್ವಂಸ ಮಾಡಿದ್ದಾರೆ. ನನ್ನ ಮೇಲೆಯೂ ಹಲ್ಲೆಗೆ ಮುಂದಾದರು. ಒಂದೋ ಸಿಪಿಐ(ಎಂ) ಇರಬೇಕು.. ಅದಿಲ್ಲದಿದ್ದರೆ ಯಾರೂ ಇರಬಾರದು ಎಂದು ಅವರೆಲ್ಲ ಜೋರಾಗಿ ಕೂಗುತ್ತಿದ್ದರು’ ಎಂದು ಜಿತೇಂದ್ರ ತಿಳಿಸಿದ್ದಾರೆ.
ಸ್ಥಳೀಯರಿಂದ ಪ್ರತಿಭಟನೆ
ಘಟನೆಯನ್ನು ಖಂಡಿಸಿ, ಶೀಘ್ರವೇ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳಾದ ನಿರುಪಮ್ ದೆಬ್ಬಾರ್ಮಾ ಮತ್ತು ದೇಬಂಜನ್ ರಾಯ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ಕೊಟ್ಟು ಪರಿಸ್ಥಿತಿಯನ್ನು ನಿಯಂತ್ರಿಸಿದೆ.
ಇದನ್ನೂ ಓದಿ: Datta jayanti | ದತ್ತ ಪೀಠಕ್ಕೆ ಹೋಗುವ ರಸ್ತೆಯಲ್ಲಿ ಮೊಳೆ ಚೆಲ್ಲಿ ಕುಕೃತ್ಯ ನಡೆಸಿದ್ದ ಇಬ್ಬರು ದುಷ್ಕರ್ಮಿಗಳು ಅರೆಸ್ಟ್