ನಾಸಿಕ್: ಚಾರ್ಜ್‌ಗೆ ಇಟ್ಟಿದ್ದ ಮೊಬೈಲ್ ಸ್ಫೋಟಗೊಂಡ (Mobile Explodes) ಇನ್ನೊಂದು ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ಮನೆಯೊಂದರಲ್ಲಿ ಚಾರ್ಜ್‌ಗೆ ಇಟ್ಟಿದ್ದ ಮೊಬೈಲ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಫೋನ್ ಪಕ್ಕ ಡಿಯೋಡ್ರೆಂಟ್ ಬಾಟಲಿಯನ್ನೂ ಇರಿಸಲಾಗಿತ್ತು. ಇದರಿಂದ ಬೆಂಕಿ ಕಾಣಿಸಿಕೊಂಡು ಸ್ಫೋಟದ ತೀವ್ರತೆಯನ್ನು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಿಐಡಿಸಿಒ ಉತ್ತಮ್ ನಗರದಲ್ಲಿ ಈ ಘಟನೆ ನಡೆದಿದೆ. ಸ್ಫೋಟವು ಮನೆಯೊಳಗಿನ ಗಾಜು ಮತ್ತು ಕಿಟಕಿಗಳನ್ನು ಒಡೆದು ಹಾಕಿದ್ದಲ್ಲದೆ ಅಕ್ಕ ಪಕ್ಕದ ಕಟ್ಟಡಗಳ ಪ್ರತಿಯೊಂದು ಕಿಟಕಿಗಳನ್ನೂ ಛಿದ್ರಗೊಳಿಸಿದೆ. ಮಾತ್ರವಲ್ಲ ಸ್ಫೋಟವು ಎಷ್ಟು ತೀವ್ರವಾಗಿತ್ತು ಎಂದರೆ ಅದು ಸುತ್ತಮುತ್ತಲು ನಿಲ್ಲಿಸಿದ್ದ ಕಾರುಗಳ ಕಿಟಕಿಗಳ ಗಾಜುಗಳು ಸಹ ಒಡೆದಿವೆ.
ತನಿಖೆ ಆರಂಭ
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ತೀವ್ರ ಸ್ಫೋಟಕ್ಕೆ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳ ಪೀಠೋಪಕರಣ, ರಸ್ತೆ ಬದಿ ಮುಂತಾದ ಕಡೆಗಳಲ್ಲಿ ಬೂದಿ ಸಂಗ್ರಹಗೊಂಡಿದ್ದು, ಈ ಕುರಿತಾದ ವಿಡಿಯೊ ಹರಿದಾಡುತ್ತಿದೆ.
ಬ್ಯಾಟರಿ ಸಮಸ್ಯೆಗಳಿಂದಾಗಿಯೇ ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಆಧುನಿಕ ಸ್ಮಾರ್ಟ್ ಫೋನ್‌ಗಳು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಬ್ಯಾಟರಿಗಳು ಹಳೆಯದಾಗಿದ್ದರೆ ಅಥವಾ ದೋಷಪೂರಿತವಾಗಿದ್ದರೆ, ಅತಿಯಾದ ಶಾಖಕ್ಕೆ ತೆರೆದುಕೊಂಡರೆ ಸ್ಫೋಟ ಸಂಭವಿಸುತ್ತದೆ. ಸದ್ಯ ನಾಸಿಕ್‌ನಲ್ಲಿ ನಡೆದಿರುವ ಸ್ಫೋಟಕ್ಕೆ ನಿಜವಾಗಿಯೂ ಬೊಬೈಲ್ ಫೋನ್ ಕಾರಣವೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಾಣ ಕಸಿದ ಮೊಬೈಲ್
ಈ ವರ್ಷದ ಎಪ್ರಿಲ್‌ನಲ್ಲಿ ಕೇರಳದಲ್ಲಿ ನಡೆದ ಮೊಬೈಲ್ ಫೋನ್ ಸ್ಫೋಟದಲ್ಲಿ 8 ವಯಸ್ಸಿನ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಳು. ತ್ರಿಶ್ಶೂರಿನಲ್ಲಿ ಈ ಘಟನೆ ನಡೆದಿತ್ತು. ವಿಡಿಯೊ ನೋಡುತ್ತಿದ್ದ 3ನೇ ತರಗತಿಯ ಬಾಲಕಿಯ ಕೈಯಲ್ಲಿದ್ದ ಮೊಬೈಲ್ ಸಿಡಿದು ಈ ದುರಂತ ಸಂಭವಿಸಿತ್ತು. ಮಾತ್ರವಲ್ಲ ಫೆಬ್ರವರಿಯಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ಸ್ಫೋಟಗೊಂಡು 68ರ ಹರೆಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅವರು ಚಾರ್ಜರ್ ಆಫ್ ಮಾಡದೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದುದೇ ದುರಂತಕ್ಕೆ ಕಾರಣ ಎಂದು ಬಳಿಕ ತಿಳಿದು ಬಂದಿತ್ತು. ಜತೆಗೆ ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ಮೊಬೈಲ್ ಸಿಡಿದು 8 ತಿಂಗಳ ಹಸುಳೆಯೂ ಸಾವನ್ನಪ್ಪಿತ್ತು.
ಇದನ್ನೂ ಓದಿ: Football Stadium: ಉದ್ಘಾಟನೆಗೊಂಡ ಆರೇ ತಿಂಗಳಿಗೆ ಕುಸಿದ ಫುಟ್ಬಾಲ್ ಸ್ಟೇಡಿಯಂ
ಎಚ್ಚರಿಕೆ ವಹಿಸಿ
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಸಿಡಿಯುವ ಘಟನೆಗಳು ಹೆಚ್ಚು ವರದಿಯಾಗುತ್ತಿದ್ದು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ. ಚಾರ್ಜ್ ಆಗುತ್ತಿರುವಾಗ ಫೋನ್ ಬಿಸಿಯಾಗುತ್ತದೆ. ಈ ಸಂದರ್ಭದಲ್ಲಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ಜಾರ್ಜ್ ಆಗುತ್ತಿರುವಾಗಲೇ ಮೊಬೈಲ್ ಫೋನ್ ಬಳಸಬಾರದು ಎಂದು ಎಚ್ಚರಿಕೆ ನೀಡುತ್ತಾರೆ. ಅಲ್ಲದೆ ಕಂನಿ ಚಾರ್ಜರ್ ಅನ್ನೇ ಬಳಸಬೇಕೆಂದು ಸಲಹೆ ನೀಡುತ್ತಾರೆ. ಅಲ್ಲದೆ ರಾತ್ರಿಯಿಡೀ ಫೋನ್ ಅನ್ನು ಜಾರ್ಜ್ ಗೆ ಇಡುವುದು ಕೂಡ ಅಪಾಯಕಾರಿ. ಮೊಬೈಲ್ ಚಾರ್ಜ್‌ಗೆ ಇಟ್ಟು ಅದರ ಪಕ್ಕ ಮಲಗಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.